ಎಎಪಿ ಶಾಸಕರ ವಿರುದ್ಧ 22 ಪ್ರಕರಣಗಳು; ಆರೋಪಗಳು ಸಾಬೀತಾಗಲೇ ಇಲ್ಲ! ಅದು ಹೇಗೆ?

7

ಎಎಪಿ ಶಾಸಕರ ವಿರುದ್ಧ 22 ಪ್ರಕರಣಗಳು; ಆರೋಪಗಳು ಸಾಬೀತಾಗಲೇ ಇಲ್ಲ! ಅದು ಹೇಗೆ?

Published:
Updated:
Deccan Herald

ಎಎಪಿ ಶಾಸಕರ ವಿರುದ್ಧ ದೆಹಲಿ ಪೊಲೀಸರು ದಾಖಲಿಸಿರುವ 22 ಪ್ರಕರಣಗಳ ಪೈಕಿ 19 ಪ್ರಕರಣಗಳಲ್ಲಿ ಶಾಸಕರು ದೋಷಾರೋಪದಿಂದ ಮುಕ್ತಿ ಪಡೆದಿದ್ದಾರೆ. ‌’ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರ ಇಲ್ಲ’; ’ದೋಷಾರೋಪ ಪಟ್ಟಿ ಉತ್ಪ್ರೇಕ್ಷೆಯಿಂದ ಕೂಡಿದೆ’; ’ಅತ್ಯಂತ ನಿಧಾನ ಗತಿಯ ತನಿಖೆ’; ’ನಿಗದಿತ ಅವಧಿ ನಂತರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ’; ಇವೇ ಕಾರಣಗಳಿಂದ ಪ್ರಕರಣ ವಜಾಗೊಂಡಿದೆ ಅಥವಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಈ ಕುರಿತು ಕಳೆದ ಐದು ತಿಂಗಳಿಂದ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ನಲ್ಲಿ ನಡೆದಿರುವ ವಿಚಾರಣೆಗಳನ್ನು ಆಧರಿಸಿ ’ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. 

ಹಾಲಿ ಶಾಸಕರು ಹಾಗೂ ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ, ಮಾರ್ಚ್‌ ಮೊದಲ ವಾರದಲ್ಲಿ ಎರಡು ಫಾಸ್ಟ್ ಟ್ರ್ಯಾಕ್‌ ಕೋರ್ಟ್‌ಗನ್ನು ‍ಪ್ರಾರಂಭಿಸಲಾಗಿದೆ. ಇದರೊಂದಿಗೆ 7 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಶಿಕ್ಷೆ ಒಳಗೊಂಡ ಪ್ರಕರಣಗಳ ವಿಚಾರಣೆಗಾಗಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ಕೋರ್ಟ್‌ಗಳನ್ನು ಪ್ರಾರಂಭಿಸಲಾಗಿದ್ದು, ಎಎಪಿ ಶಾಸಕರ ವಿರುದ್ಧದ ಪ್ರಕರಣವೊಂದನ್ನು ವಿಲೇವಾರಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇರುವುದಾಗಿ ಸಿಬಿಐ ಅಂತಿಮ ವರದಿ ಸಲ್ಲಿಸಿತ್ತು. 

ಎಎಪಿ ಶಾಸಕರ ವಿರುದ್ಧ ಪೊಲೀಸರು ಹಾಗೂ ವೈಯಕ್ತಿಕವಾಗಿ ಸಲ್ಲಿಕೆಯಾಗಿರುವ ಮಾನನಷ್ಟ ಕ್ರಿಮಿನಲ್‌ ಮೊಕದ್ದಮೆಗಳು ಸೇರಿ 22 ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿಲ್ಲ. 

ಪ್ರಕರಣ 1: ಮನೀಶ್‌ ಸಿಸೋಡಿಯಾ, ಮುಕೇಶ್‌ ಹುಡ್ಡಾ ಹಾಗೂ ಕುಮಾರ್‌ ವಿಶ್ವಾಸ 

ಸರ್ಕಾರಿ ಶಾಲೆಗಳ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಎಎಪಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದೆ, ಇದರಿಂದ ಶಾಲೆಗಳನ್ನು ವಿರೂಪಗೊಳಿಸಿದಂತಾಗಿದೆ ಎಂದು ದೆಹಲಿ ಪೊಲೀಸರು 2013ರ ಅಕ್ಟೋಬರ್‌ 6ರಂದು ಎಫ್‌ಐಆರ್‌ ದಾಖಲಿಸಿದ್ದರು. ಸಾರ್ವಜನಿಕ ಆಸ್ತಿ ವಿರೂಪಗೊಳಿಸುವುದನ್ನು ತಡೆಯಲು ಇರುವ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿತ್ತು. ಆದರೆ, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು 2015ರ ಮಾರ್ಚ್‌ 30ರಂದು. ಸಿಆರ್‌ಪಿಸಿ ಸೆಕ್ಷನ್‌ 467 ಮತ್ತು 473ರಂತೆ ನಿಗದಿತ ಅವಧಿಯಲ್ಲಿ ದೋಷಾರೋಪಾ ಪಟ್ಟಿ ಸಲ್ಲಿಕೆಯಾಗಬೇಕಿತ್ತು. ಈ ಪ್ರಕರಣದಲ್ಲಿ ಅವಧಿ ಮೀರಿದೆ. 

’ದೋಷಾರೋಪ ಪಟ್ಟಿ ಸಲ್ಲಿಕೆ ನಿಧಾನವಾಗಲು ತನಿಖಾಧಿಕಾರಿ ನೀಡಿರುವ ಕಾರಣ ಅಸ್ಪಷ್ಟವಾಗಿದೆ ಹಾಗೂ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ. ದೋಷಾರೋಪ ಪಟ್ಟಿ ಸಲ್ಲಿಕೆ ತಡವಾಗುವಂತಹ ಪ್ರಕರಣ ಇದಲ್ಲ, ಇದನ್ನು ಮನ್ನಿಸಲು ಸಾಧ್ಯವಿಲ್ಲ’ ಎಂದು ಕೋರ್ಟ್ ಹೇಳಿತು. ಇದೇ ವರ್ಷ ಏಪ್ರಿಲ್‌ 24ರಂದು ಆರೋಪಿಗಳನ್ನು ದೋಷಮುಕ್ತಗೊಳಿಸಲಾಯಿತು. 

ಪ್ರಕರಣ 2: ಶಾಸಕ ನರೇಶ್‌ ಬಾಲಿಯಾನ್‌ ಹಾಗೂ ಸಹಚರ

ಶಾಸಕ ನರೇಶ್‌ ಬಾಲಿಯಾನ್‌ ಅವರ ಆಪ್ತ ಸಂಜಯ್‌ ವರ್ಮಾ ಅಕ್ರಮ ಮದ್ಯ ವಿತರಣೆ ಮತ್ತು ಸಂಗ್ರಹದಲ್ಲಿ ತೊಡಗಿರುವ ಸಂಬಂಧ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿದ್ದರು. ದೆಹಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 2015ರ ಜನವರಿ 30ರಂದು ಪ್ರಕರಣ ದಾಖಲಾಗಿತ್ತು. ಮೇಲ್ನೋಟದ ಸಾಕ್ಷಿ ಪರಿಗಣಿಸಿ ಸಂಜಯ್‌ ವರ್ಮಾ ವಿರುದ್ಧ ಕೋರ್ಟ್‌ ಆರೋಪ ದಾಖಲಿಸಿತು. ಆದರೆ, ಬಾಲಿಯಾನ್‌ ವಿರುದ್ಧ  ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ಊಹಾತ್ಮಕವಾಗಿದೆ, ಅಕ್ರಮ ಮದ್ಯ ಸಂಗ್ರಹಕ್ಕೂ ಅವರಿಗೂ ಇರುವ ಸಂಬಂಧದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಇದೊಂದು ಆಧಾರರಹಿತ ಆರೋಪ ಎಂದು ಹೇಳಿದ ಕೋರ್ಟ್‌, ಏಪ್ರಿಲ್‌ 9ರಂದು ಪ್ರಕರಣದಿಂದ ಬಾಲಿಯಾನ್‌ರನ್ನು ಖುಲಾಸೆಗೊಳಿಸಿತು.

ಪ್ರಕರಣ 3: ಶಾಸಕ ಗುಲಾಬ್‌ ಸಿಂಗ್‌ ಹಾಗೂ ಇತರರು

2014ರ ಮಾರ್ಚ್ 24ರಂದು ದ್ವಾರಕಾದಲ್ಲಿ ವ್ಯಕ್ತಿಯೊಬ್ಬನ ಕೊಲೆಗೆ ಸಂಬಂಧಿಸಿದಂತೆ ಶಾಸಕ ಗುಲಾಬ್‌ ಸಿಂಗ್‌ ಹಾಗೂ ಅವರ ಬೆಂಬಲಿಗರು ಜನರನ್ನು ಪ್ರಚೋದಿಸಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಕೊಲೆಯಾದ ವ್ಯಕ್ತಿಯ ಶವವನ್ನು ಮುಂದಿಟ್ಟು, ಕೊಲೆಗೆ ಕಾರಣರಾದವರನ್ನು ಸ್ಥಳಕ್ಕೆ ಕರೆತರುವಂತೆ ಶಾಸಕ ಮತ್ತು ಅವರ ಬೆಂಬಲಿಗರು ಪೊಲೀಸರಿಗೆ ಒತ್ತಾಯಿಸಿದ್ದರು. 

ದ್ವೇಷ ಪೂರಿತ ಅಥವಾ ವರ್ಗಗಳ ನಡುವೆ ದ್ವೇಷ, ಹಗೆತನದ ಹೇಳಿಕೆಗಳನ್ನು ಆರೋಪಿಗಳು ನೀಡಿರುವ ಬಗ್ಗೆ ಆರೋಪಿಸಲಾಗಿಲ್ಲ ಎಂದು ಹೇಳಿದ ಕೋರ್ಟ್‌, ಆರೋಪ ಪಟ್ಟಿ ತಡವಾಗಿ ಸಲ್ಲಿಕೆಯಾಗಿರುವುದನ್ನು ಗಮನಿಸಿತ್ತು. 2014ರಲ್ಲಿ ನಡೆದ ಪ್ರಕರಣದ ಕುರಿತು 2016ರಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಏಪ್ರಿಲ್‌ 21ರಂದು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತು. 

ಪ್ರಕರಣ 4: ಆಸಿಮ್‌ ಅಹ್ಮದ್‌ ಖಾನ್‌ ವಿರುದ್ಧ ಸಿಬಿಐ

ಆಹಾರ ಮತ್ತು ಪೂರೈಕೆ ಮಾಜಿ ಸಚಿವ ಆಸಿಮ್‌ ಅಹ್ಮದ್‌ ಖಾನ್‌‌ ಕಟ್ಟದ ಗುತ್ತಿಗೆದಾರನಿಂದ ₹8 ಲಕ್ಷ ಲಂಚ ಅಪೇಕ್ಷಿಸಿ ₹5.5 ಲಕ್ಷ ಪಡೆದುಕೊಂಡಿರುವುದಾಗಿ ಸಿಬಿಐ ಆರೋಪಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿತ್ತು. ವಿಚಾರಣೆಯ ವೇಳೆ ಗುತ್ತಿದಾರ, ಲಂಚ ಪಾವತಿಸಿರುವ ಬಗ್ಗೆ ಹಾಗೂ ದೂರಿನಲ್ಲಿ ಹೇಳಿರುವ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯ ನಡೆಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದ. ಎಫ್‌ಐಆರ್‌ನಲ್ಲಿ ದಾಖಲಿಸಿರುವ ಆರೋಪದ ಸಂಬಂಧ ಸೂಕ್ತ ಸಾಕ್ಷ್ಯಗಳು ದೊರೆಯದ ಕಾರಣ ಪ್ರಕರಣವನ್ನು ಏಪ್ರಿಲ್‌ 28ರಂದು ಅಂತ್ಯಗೊಳಿಸಿತ್ತು. 

ಪ್ರಕರಣ 5: ಮನೋಜ್‌ ಕುಮಾರ್‌ ಹಾಗೂ ಇತರರು

ಕಲ್ಯಾಣಪುರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿಗಳ ವರ್ತಕರು ನೀಡಿದ ದೂರಿನ ಅನ್ವಯ 2015ರ ಆಗಸ್ಟ್‌ನಲ್ಲಿ ‍ಪೊಲೀಸರು ಮನೋಜ್‌ ಕುಮಾರ್‌ ಮತ್ತು ಇತರರ ವಿರುದ್ಧ ಏಳು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿದ್ದರು. ಶಾಸಕ ಮನೋಜ್‌ ಕುಮಾರ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ವ್ಯಕ್ತಿ ಪ್ರತಿ ತಿಂಗಳು ₹2000 ನೀಡುವಂತೆ ಹೇಳಿದ್ದ ಹಾಗೂ ಹಣ ನೀಡದಿದ್ದ ಅಂಗಡಿಗಳನ್ನು ಬಂದ್‌ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದಾಗಿ ವರ್ತಕರು ಆರೋಪಿಸಿದ್ದರು. 

ಸಾಕ್ಷಿಗಳ ಕೊರತೆಯಿಂದಾಗಿ ಏಪ್ರಿಲ್‌ 3ರಂದು ಎಲ್ಲ ಏಳು ಪ್ರಕರಣಗಳಿಂದ ಮನೋಜ್‌ ಕುಮಾರ್‌ರನ್ನು ಕೋರ್ಟ್‌ ಮುಕ್ತಗೊಳಿಸಿತು. ಸಹ ಆರೋಪಿಯಾದ ದೀಪಕ್‌ ಶರ್ಮಾ ಮಾತ್ರ ಪ್ರಕರಣದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಕಾನೂನಿನ ಪ್ರಕಾರ ಅದನ್ನೇ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿತು. ದೂರುದಾರರು ಮನೋಜ್‌ ಕುಮಾರ್‌ ಆಪ್ತ ಸಹಾಯಕನನ್ನು ಗುರುತಿಸಲು ವಿಫಲರಾದ ಹಿನ್ನೆಲೆಯಲ್ಲಿ ಆತನನ್ನೂ ಪ್ರಕರಣಗಳಿಂದ ಖುಲಾಸೆಗೊಳಿಸಲಾಯಿತು. 

ಪ್ರಕರಣ 6: ಅಧಿಕಾರಿಗಳ ಕಾರ್ಯಕ್ಕೆ ಶಾಸಕ ಸುರೇಂದರ್‌ ಸಿಂಗ್‌ ಅಡ್ಡಿ

ಸರ್ಕಾರಿ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ್ದು ಹಾಗೂ ಅವರನ್ನು ನಿಂದಿಸಿದ ಆರೋಪದ ಅಡಿಯಲ್ಲಿ ಎಎಪಿ ಶಾಸಕ ಸುರೇಂದರ್‌ ಸಿಂಗ್‌ ವಿರುದ್ಧ ತಹಸಿಲ್ದಾರ್‌, 2015ರ ಜುಲೈ 7ರಂದು ದೂರು ದಾಖಲಿಸಿದ್ದರು. 2014ರ ಸೆಪ್ಟೆಂಬರ್‌ 23ರಂದು ಕಚೇರಿಗೆ ಬಂದಿದ್ದ ಶಾಸಕ ಮತ್ತು ಅವರ ಬೆಂಬಲಿಗರು ತನ್ನನ್ನು ಹಾಗೂ ಸಹೋದ್ಯೋಗಿಗಳನ್ನು ನಿಂದಿಸಿದ್ದಾಗಿ ಆರೋಪಿಸಿದ್ದರು. 2016ರ ಫೆಬ್ರುವರಿ 25ರಂದು ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. 

ಎಫ್‌ಐಆರ್ ದಾಖಲಿಸುವಲ್ಲಿ ತಡ ಮಾಡಿದ್ದನ್ನು ’ಯೋಚನೆ ನಂತರ ಸೃಷ್ಟಿಯಾದ ಆರೋಪಗಳು, ಊಹಾತ್ಮಕ ಆರೋಪಗಳಿಗೆ ದಾರಿ ಮಾಡಿಕೊಡುತ್ತದೆ’ ಎಂದು ಹೇಳಿದ ಕೋರ್ಟ್‌ ಏಪ್ರಿಲ್‌ 25ರಂದು ಆರೋಪಿಗಳನ್ನು ಪ್ರಕರಣದಿಂದ ಮುಕ್ತಗೊಳಿಸಿತು. 

ಪ್ರಕರಣ 7: ರಾಜು ಧಿಂಗಾನ್‌ ವಿರುದ್ಧ ದೂರು

ಚುನಾವಣೆಗೆ ಸ್ಪರ್ಧಿಸಿದ್ದ ರಾಜು ಧಿಂಗಾನ್‌ ತಮ್ಮ ಚಿತ್ರಗಳಿರುವ ಪೋಸ್ಟರ್‌ಗಳನ್ನು ದೆಹಲಿ ಕಾರ್ಪೊರೇಷನ್‌ನ ಕಸ ಸಂಗ್ರಹ ಕೇಂದ್ರದ ಗೋಡೆಗಳ ಮೇಲೆ ಅಂಟಿಸಿಕೊಂಡಿದ್ದರ ವಿರುದ್ಧ 2015ರ ಜನವರಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಲಾಗಿದೆ ಎಂದು ಆರೋಪಿಸಲಾಗಿತ್ತು. ’ಪೋಸ್ಟರ್‌ಗಳನ್ನು ಗೋಡೆಗೆ ಅಂಟಿಸಿದವರು ಯಾರು ಎಂಬುದನ್ನು ಸಾಬೀತು ಪಡಿಸಿಲ್ಲ, ಸಾಕ್ಷಿಗಳ ವಿಚಾರಣೆ ನಡೆಸಿಲ್ಲ. ಪೋಸ್ಟರ್‌ಗಳನ್ನು ವಿರೋಧ ಪಕ್ಷಗಳು ಅಥವಾ ಸ್ಪರ್ಧಿಗಳು ಅಂಟಿಸಿರಬಹುದು ಎಂಬುದನ್ನು ತಳ್ಳಿಹಾಕಲಾಗದು’ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತು. ಪ್ರಾಸಿಕ್ಯೂಷನ್‌ ಆರೋಪ ಸಾಬೀತು ಪಡಿಸಲು ವಿಫಲವಾಗಿದೆ ಎಂದು ಏಪ್ರಿಲ್‌ 12ರಂದು ಆರೋಪಿಯನ್ನು ಪ್ರಕರಣದಿಂದ ಖುಲಾಸೆ ಮಾಡಲಾಯಿತು. 

ಪ್ರಕರಣ 8: ನರೇಶ್‌ ಬಾಲಿಯಾನ್‌ ಮೇಲೆ ಮತ್ತೊಂದು ದೂರು

ಚುನಾವಣಾ ಸಂದರ್ಭದಲ್ಲಿ ನಿಗದಿತ ಸಮಯಕ್ಕಿಂತಲೂ ಮುನ್ನವೇ ಎಎಪಿ ಸಭೆ ಪ್ರಾರಂಭಿಸಿತ್ತು. ಈ ಸಭೆಯನ್ನು ನರೇಶ್‌ ಬಾಲಿಯಾನ್‌ ಆಯೋಜಿಸಿದ್ದರು. ಅಧಿಕಾರಿಗಳ ಆದೇಶವನ್ನು ಉಲ್ಲಂಘಿಸಿರುವುದಾಗಿ ಚುನಾವಣೆ ನಿಗಾವಹಿಸಿದ್ದ ಫ್ಲೈಯಿಂಗ್‌ ಸ್ಕ್ವಾಡ್‌ ಸದಸ್ಯರೊಬ್ಬರು ದೂರು ನೀಡಿದ್ದರು. ದೆಹಲಿ ಪೊಲೀಸರು ಐಪಿಸಿ ಸೆಕ್ಷನ್‌ 188 ಅಡಿಯಲ್ಲಿ 2015ರ ಜನವರಿ 18ರಂದು ಎಫ್‌ಐಆರ್‌ ದಾಖಲಿಸಿದ್ದರು. 

ಕಾನೂನು ನಿಯಮಗಳನ್ನು ಗಮನಿಸದೆಯೇ ಪೊಲೀಸರು ಸಾಮಾನ್ಯ ಎನ್ನುವಂತೆ ಆರೋಪ ಪಟ್ಟಿ ಸಲ್ಲಿಸಿರುವಂತೆ ತೋರುತ್ತಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಮೇ 9ರಂದು ಬಾಲಿಯಾನ್‌ರನ್ನು ಪ್ರಕರಣದಿಂದ ಮುಕ್ತಗೊಳಿಸಲಾಯಿತು. 

ಪ್ರಕರಣ 9: ಕೈಲಾಶ್‌ ಗೆಹ್ಲೋಟ್‌

ಚುನಾವಣೆಯ ಸಮಯದಲ್ಲಿ ನಿರ್ಬಂಧದ ನಡುವೆಯೂ ಎಎಪಿಯ 100 ಕಾರ್ಯಕರ್ತರು ಸಂಸ್ಥೆಯೊಂದರಲ್ಲಿ ಆಹಾರ ನೀಡುತ್ತಿದ್ದರು ಹಾಗೂ ಸುಮಾರು 50 ಮಂದಿ ಎಎಪಿಯ ಪ್ರಚಾರವನ್ನು ಟಿವಿಯಲ್ಲಿ ನೋಡುತ್ತಿದ್ದರು ಎಂದು ’ಫ್ಲೈಯಿಂಗ್‌ ಸ್ಕ್ವಾಡ್‌’ನಿಂದ ದೂರು ಸಲ್ಲಿಸಲಾಗಿತ್ತು. ಐಪಿಸಿ ಸೆಕ್ಷನ್‌ 188 ಮತ್ತು 171ಬಿ (ಚುನಾವಣಾ ಸಮಯದಲ್ಲಿ ಆಮಿಷ) ಅಡಿಯಲ್ಲಿ 2015ರ ಜನವರಿ 31ರಂದು ಎಫ್‌ಐಆರ್ ದಾಖಲಾಗಿತ್ತು.

ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಆಹಾರ ಸೇವಿಸುವುದು, ಪಕ್ಷದ ಧ್ವಜ ಹೊಂದಿರುವುದು, ಪೋಸ್ಟರ್‌ಗಳ ಹಾಗೂ ಬ್ಯಾನರ್‌ ಇರುವುದು ಅಪರಾಧವಾಗುವುದಿಲ್ಲ. ಗೆಹ್ಲೋಟ್‌ ಚುನಾವಣೆ ಸಮಯದಲ್ಲಿ ಲಂಚ ನೀಡಿರುವ ಬಗ್ಗೆ ಯಾವುದೇ ಆರೋಪಗಳಿಲ್ಲ ಎಂದಿರುವ ಕೋರ್ಟ್‌, ಆರೋಪಗಳು ಆಧಾರ ರಹಿತ ಎಂದು ಏಪ್ರಿಲ್‌ 3ರಂದು ಪ್ರಕರಣದಿಂದ ಗೆಹ್ಲೋಟ್‌ ಅವರನ್ನು ಖುಲಾಸೆಗೊಳಿಸಿತು. 

ಪ್ರಕರಣ 10: ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರರು

ಎರಡು ಮನೆಗಳ ಗೋಡೆಗಳ ಮೇಲೆ ಅರವಿಂದ್‌ ಕೇಜ್ರಿವಾಲ್‌ ಅವರ ಚಿತ್ರಗಳಿರುವ ಪೋಸ್ಟರ್‌ ಇರುವುದನ್ನು ಗಮನಿಸಿದ್ದ ಚುನಾವಣಾ ಅಧಿಕಾರಿಗಳು ದೂರು ನೀಡಿದ್ದರು. 2013ರಲ್ಲಿ ಐಪಿಸಿ ಸೆಕ್ಷನ್‌ 188 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಆರೋಪ ಪಟ್ಟಿಯನ್ನು 2015ರ ಜನವರಿಯಲ್ಲಿ ಸಲ್ಲಿಸಲಾಗಿತ್ತು. ಅಂದರೆ, ಆರೋಪ ಪಟ್ಟಿ ಸಲ್ಲಿಸಲು ನಿಗದಿ ಅವಧಿಗಿಂತಲೂ 1 ವರ್ಷ, 94 ದಿನಗಳು ತಡವಾಗಿ ಸಲ್ಲಿಕೆಯಾಗಿತ್ತು. ತನಿಖಾಧಿಕಾರಿ ಹಾಗೂ ಪ್ರಾಸಿಕ್ಯೂಷನ್‌ ಆರೋಪ ಪಟ್ಟಿ ಸಲ್ಲಿಕೆ ತಡವಾಗಲು ಸ್ಪಷ್ಟ ಕಾರಣ ನೀಡಲಿಲ್ಲ. ಹಾಗಾಗಿ, ಆರೋಪ ಪಟ್ಟಿ ಪರಿಗಣಿಸಲು ಕೋರ್ಟ್‌ ನಿರಾಕರಿಸಿತು.‌

ಪ್ರಕರಣ 11: ಅಮಾನತ್‌ ಉಲ್ಲಾ ಖಾನ್‌ ಹಾಗೂ ಇತರರು

2010ರಲ್ಲಿ ಜಾಮಿಯಾ ನಗರದಲ್ಲಿ ಬಾಲ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಕಾರ್ಯಕ್ಕೆ ತಡೆ ಮಾಡಿದ್ದರ ಸಂಬಂಧ ಅಮಾನತ್‌ ಉಲ್ಲಾ ಖಾನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. 2015ರಲ್ಲಿ ದೆಹಲಿ ಪೊಲೀಸರು ಅಪಹರಣ ಆರೋಪ ಸೇರಿಸಿದ್ದರು ಹಾಗೂ 2016ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು. ತಡವಾಗಿ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದನ್ನು ಪ್ರಶ್ನಿಸಿದ ಕೋರ್ಟ್‌, ’ಉತ್ತಮ ರೀತಿಯಲ್ಲಿ ಅಣಿ ಮಾಡಿರುವ’ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಇಲ್ಲಿ ತನಿಖೆ ದೀರ್ಘಾವಧಿ ಹಾಗೂ ನಿಧಾನ ಗತಿಯಲ್ಲಿ ನಡೆದಿದೆ ಎಂದು ಅಭಿಪ್ರಾಯ ಪಟ್ಟಿತು. ಮೇ 3ರಂದು ಖಾನ್‌ರನ್ನ ಪ್ರಕರಣದಿಂದ ಮುಕ್ತಗೊಳಿಸಲಾಯಿತು. 

ಪ್ರಕರಣ 12: ಬಂದನಾ ಕುಮಾರಿ

ಬಂದನಾ ಕುಮಾರಿ ವಿರುದ್ಧ 2013ರ ನವೆಂಬರ್‌ನಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ ದಾಖಿಸಲಾಯಿತು. ಶಾಲಿಮಾರ್‌ ಬಾಗ್‌ನಲ್ಲಿ ಹೋರ್ಡಿಂಗ್‌ಗಳನ್ನು ಹಾಕುವ ಮೂಲಕ ಸಾರ್ವಜನಿಕ ಆಸ್ತಿ ವಿರೂಪಗೊಳಿಸಿರುವುದರ ವಿರುದ್ಧ ದೂರು ದಾಖಲಾಗಿತ್ತು. 2014ರ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಹೋರ್ಡಿಂಗ್‌ಗಳನ್ನು ಆರೋಪಿಯೇ ಮುದ್ರಿಸಲು ಹೇಳಿರುವ ಬಗ್ಗೆ ಸಾಕ್ಷ್ಯಗಳಿಲ್ಲ. ಅದೇ ವ್ಯಕ್ತಿ ಹೋರ್ಡಿಂಗ್‌ ಹಾಕುವುದನ್ನು ಕಂಡಿರುವುದು ಅಥವಾ ಪ್ರತ್ಯಕ್ಷ ಸಾಕ್ಷಿಗಳು ಇರದ ಹೊರತು ಇಂಥ ಆರೋಪಗಳು ಸಾಬೀತು ಆಗುವುದಿಲ್ಲ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿತು. ಜೂನ್‌ 4ರಂದು ಕುಮಾರಿ ಅವರು ಎರಡೂ ಪ್ರಕರಣಗಳಿಂದ ಖುಲಾಸೆಗೊಂಡರು. 

ಪ್ರಕರಣ 13: ಮೂವರು ಶಾಸಕರ ವಿರುದ್ಧ ದೂರು

ಎಎಪಿ ಮುಖಂಡರು ಹಾಗೂ ’ಹಣ ನೀಡಿ ಕರೆತಂದಿದ್ದ ಕಾರ್ಯಕರ್ತರು’ ನಿವಾಸದ ಎದುರು ಪ್ರತಿಭಟನೆ ನಡೆಸಿ; ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿ ಹಾಗೂ ಘೋಷಣೆ ಕೂಗಿರುವುದು; ಈ ಮೂಲಕ ತೊಂದರೆ ನೀಡಿದ್ದರ ಸಂಬಂಧ ಎಎಪಿ ಉಚ್ಚಾಟಿತ ಮುಖಂಡ ವಿನೋದ್‌ ಕುಮಾರ್‌ ಬಿನ್ನಿ 2014ರ ಅಕ್ಟೋಬರ್‌ನಲ್ಲಿ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್‌ 341, 500 ಹಾಗೂ 34ರ ಅಡಿಯಲ್ಲಿ ಶಾಸಕರಾದ ಬಂದನಾ ಕುಮಾರಿ, ರಾಜು ಧಿಂಗಾನ್‌ ಹಾಗೂ ಮನೋಜ್‌ ಕುಮಾರ್‌ ಸೇರಿ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಆದರೆ, ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು ಎರಡು ವರ್ಷ, 11 ತಿಂಗಳು ಹಾಗೂ 25 ದಿನಗಳ ನಂತರ. ಇದನ್ನು ಪ್ರಶ್ನಿಸಿದ ಕೋರ್ಟ್‌ ಮೇನಲ್ಲಿ ಮೂವರಿಗೂ ಪ್ರಕರಣದಿಂದ ಖುಲಾಸೆ ನೀಡಿತು. 

ಪ್ರಕರಣ 14: ದೇವಿಂದರ್‌ ಸಹ್ರಾವತ್‌

ಚುನಾವಣಾ ಸಮಯದಲ್ಲಿ ಸಹ್ರಾವತ್‌ ಫೋಟೊ, ಪಕ್ಷದ ಚಿಹ್ನೆ ಒಳಗೊಂಡ ಭಿತ್ತಿ ಪತ್ರಗಳು ಪ್ರಚಾರಕ್ಕಾಗಿ ಬಳಕೆಯಾಗುತ್ತಿದ್ದರ ಕುರಿತು ಪಾಲಮ್‌ ಪೊಲೀಸ್‌ ಠಾಣೆಯ ಮುಖ್ಯ ಪೇದೆ ರಾವ್‌ ಅವ್ತಾರ್‌ ದೂರು ದಾಖಲಿಸಿದ್ದರು. ಜನಪ್ರತಿನಿಧಿತ್ವ ಅಧಿನಿಯಮ, 1951ರ ಸೆಕ್ಷನ್‌ 127–ಎ ಅನ್ವಯ ನಿಯಮ ಉಲ್ಲಂಘನೆಯಾಗಿರುವುದಾಗಿ 2013ರ ಅಕ್ಟೋಬರ್‌ನಲ್ಲಿ ದೂರು ದಾಖಲಾಗಿತ್ತು. 2014ರ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ’ಚುನಾವಣಾ ಪ್ರಚಾರದಲ್ಲಿ ಭಾಗಿದ್ದರು ಹಾಗೂ ಅಲ್ಲಿ ಅದೇ ಭಿತ್ತಿ ಪತ್ರಗಳಿದ್ದವು ಎನ್ನುವ ಕಾರಣ ಮಾತ್ರದಿಂದಲೇ ಅದನ್ನು ಅವರೇ ಮುದ್ರಿಸಲು ನೀಡಿದ್ದಾರೆ ಎಂದೇ ತಿಳಿಯಲಾಗುತ್ತದೆ’ ಎಂದು ಕೋರ್ಟ್‌ ಹೇಳಿತು. ಸಹ್ರಾವತ್‌ ಆರೋಪ ಸಾಬೀತಾಯಿತು. 

ಪ್ರಕರಣ 15: ಸಾಹಿ ರಾಮ್‌ ಪೆಹಲ್ವಾನ್‌ 

ಓಖಲಾ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿಲ್ಲಿಸುವಂತೆ ದೆಹಲಿ ಕಾರ್ಪೊರೇಷನ್‌ನ ಸೂಪರ್‌ವೈಸರ್‌ಗೆ ಶಾಸಕ ಸಾಹಿ ರಾಮ್‌ ಪೆಹಲ್ವಾನ್‌ ಬೆದರಿ ಹಾಕಿದ್ದಾಗಿ ಆರೋಪಿಸಲಾಗಿತ್ತು. ಸ್ಥಳೀಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾಗಿಯೂ ದೆಹಲಿ ಪೊಲೀಸರು 2016ರ ಸೆಪ್ಟೆಂಬರ್‌ನಲ್ಲಿ ದೂರು ದಾಖಲಿಸಿಕೊಂಡಿದ್ದರು. ಆರೋಪಿಯ ವಿರುದ್ಧ ಮಾಡಲಾದ ಆರೋಪಗಳು ಕೋರ್ಟ್‌ನಲ್ಲಿ ಸಾಬೀತಾದವು. 

ಈ ವರ್ಷ ಫೆಬ್ರುವರಿಯಲ್ಲಿ..

ಫೆಬ್ರುವರಿ 19ರ ರಾತ್ರಿ 11.30ರ ವೇಳೆ. ತಮ್ಮ ನಿವಾಸದಲ್ಲಿ ನಡೆದ ಸಭೆಯೊಂದಕ್ಕೆ ಮುಖ್ಯಕಾರ್ಯದರ್ಶಿ ಅನ್ಶು ಪ್ರಕಾಶ್ ಅವರನ್ನು ಕರೆದಿದ್ದರು ಕೇಜ್ರಿವಾಲ್. ದೆಹಲಿಯ ದುರ್ಬಲರಿಗೆ ನ್ಯಾಯಬೆಲೆ ಪಡಿತರವನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವಾಕಾಂಕ್ಷೆ ಯೋಜನೆ ಸಭೆಯ ವಿಷಯವಸ್ತು. ಎಂಟು ನಿಮಿಷಗಳ ನಂತರ ಈ ಸಭೆಯಿಂದ ಹೊರಬಿದ್ದ ಮುಖ್ಯಕಾರ್ಯದರ್ಶಿ ಈ ಸಭೆಯಲ್ಲಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಯಿತು ಎಂದು ಪೊಲೀಸ್ ದೂರು ನೀಡಿದರು. ಸಭೆಯಲ್ಲಿದ್ದ ಪ್ರಕಾಶ್ ಜರ್ವಾಲ್ ಮತ್ತು ಅಮಾನತ್‌ ಉಲ್ಲಾ ಎಂಬ ಇಬ್ಬರು ಆಪ್ ಶಾಸಕರನ್ನು ಹಲ್ಲೆಯ ಅಪಾದನೆಯ ಮೇರೆಗೆ ಪೊಲೀಸರು ಬಂಧಿಸಿದರು. ಮುಂದೆ ಓದಲು... 

ಇನ್ನಷ್ಟು: ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

 

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !