ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ ಸೆರೆ: ರಾಜಕೀಯ ತಿಕ್ಕಾಟ

Last Updated 22 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ವೈಯಕ್ತಿಕ ಸೇಡು: ಕಾಂಗ್ರೆಸ್ ಅಸಮಾಧಾನ

ಪಿ. ಚಿದಂಬರಂ ಬಂಧನದ ಮೂಲಕ ಮೋದಿ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ವೈಯಕ್ತಿಕ ಸೇಡು ತೀರಿಸಿಕೊಳ್ಳುವ ಸಂಸ್ಥೆಯನ್ನಾಗಿ ಪರಿವರ್ತಿಸಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ಸುಪ್ರೀಂಕೋರ್ಟ್‌ನಲ್ಲಿ ತುರ್ತು ವಿಚಾರಣೆ ಕೈಗೆತ್ತಿಕೊಳ್ಳುವಲ್ಲಿ ಆಗಿರುವ ವಿಳಂಬದ ಬಗ್ಗೆಯೂ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

‘ಒಂದು ಸಣ್ಣ ತಾಂತ್ರಿಕ ಕಾರಣದಿಂದ ವಿಚಾರಣೆಯನ್ನು ತಡೆಹಿಡಿಯಬಹುದೇ? ತಾಂತ್ರಿಕ ಕಾರಣ ಆಧರಿಸಿ ಪ್ರಕರಣಗಳನ್ನುವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಬಹುದೇ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

‘ಕಳೆದ ಎರಡು ದಿನಗಳಲ್ಲಿ ಇಡೀ ಭಾರತವು ಪ್ರಜಾಪ್ರಭುತ್ವದ ಹತ್ಯೆಗೆ ಸಾಕ್ಷಿಯಾಗಿದೆ. ಒಂಬತ್ತು ವರ್ಷಗಳ ಬಳಿಕ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಚಿದಂಬರಂ ಹೆಸರಿಲ್ಲ. ಈವರೆಗೆ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿಲ್ಲ. ಚಿದಂಬರಂ ಅವರನ್ನು 12 ವರ್ಷಗಳ ಬಳಿಕ ಸಿಬಿಐ ಬಂಧಿಸಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಮಗಳ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಹಿಳೆಯ ಹೇಳಿಕೆಯೊಂದನ್ನು ಮಾತ್ರ ಆಧರಿಸಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಿದಂಬರಂ ಬಂಧನ ದುರುದ್ದೇಶಪೂರಿತ, ಪ್ರತೀಕಾರದ ಹಾಗೂ ವೈಯಕ್ತಿಕ ಹಗೆತನದಿಂದ ಕೂಡಿದೆ’ ಎಂದಿದ್ದಾರೆ.

ಮುಳುಗುತ್ತಿರುವ ಆರ್ಥಿಕತೆ ಹಾಗೂ ಉದ್ಯೋಗ ಕಡಿತದಿಂದ ಗಮನ ಬೇರೆಡೆ ತಿರುಗಿಸಲು ಚಿದಂಬರಂ ಅವರನ್ನು ದಿಢೀರೆಂದು ಬಂಧಿಸಲಾಗಿದೆ. ಚಿದಂಬರಂ ಅವರ ವರ್ಚಸ್ಸು ಕುಂದಿಸಿ, ಅವರಿಗೆ ಅಪಮಾನ ಮಾಡುವುದೇ ಬಿಜೆಪಿ ಉದ್ದೇಶ’ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

ಭ್ರಷ್ಟಾಚಾರಕ್ಕೆಕಾಂಗ್ರೆಸ್ ಪೋಷಣೆ: ಬಿಜೆಪಿ ಲೇವಡಿ

ನವದೆಹಲಿ (ಪಿಟಿಐ): ಐಎನ್‌ಎಕ್ಸ್ ಪ್ರಕರಣವನ್ನು ಬೃಹತ್ ಭ್ರಷ್ಟಾಚಾರ ಹಗರಣದ ಎಂದು ಬಿಜೆಪಿಕರೆದಿದೆ. ಚಿದಂಬರಂ ಅವರ ಸಮರ್ಥನೆಗೆ ನಿಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ ಎಂದು ವ್ಯಂಗ್ಯ ಮಾಡಿದೆ.

’2004–14ರ ಅವಧಿಯ ಕಾಂಗ್ರೆಸ್ ಆಡಳಿತವು ಭ್ರಷ್ಟಾಚಾರಕ್ಕೆ ಸಮಾನಾರ್ಥಕವಾಗಿತ್ತು. ಕಾನೂನು ಈಗ ಕಾಂಗ್ರೆಸ್ ನಾಯಕರ ಬೆನ್ನುಬಿದ್ದಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಚಿದಂಬರಂ ಬಂಧನ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಪ್ರಕರಣವು ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದೆ ಎಂದಿದ್ದಾರೆ.

‘ಸಿಬಿಐ ಅಥವಾ ಯಾವುದೇ ತನಿಖಾ ಸಂಸ್ಥೆಗಳ ಕೆಲಸದಲ್ಲಿ ನಾವು ಹಸ್ತಕ್ಷೇಪ ಮಾಡಿಲ್ಲ. ಕಾನೂನು ತನ್ನ ಕ್ರಮ ಜರುಗಿಸಲಿದೆ. ಆದರೆ ಭ್ರಷ್ಟಾಚಾರವನ್ನು ಪೋಷಿಸುವ ವಿಚಾರದಲ್ಲಿ ಕಾಂಗ್ರೆಸ್ ಒಗ್ಗಟ್ಟಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಈ ಪ್ರಕರಣದ ಮೂಲಕ ಒಂದೊಂದೇ ಹಗರಣಗಳಲ್ಲಿ ಸತ್ಯ ಬಯಲಿಗೆ ಬರುತ್ತಿವೆ. ಕಲ್ಲಿದ್ದಲು, 2ಜಿ ತರಂಗಾಂತರ, ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳನ್ನು ಪ್ರಸ್ತಾಪಿಸಿದ ಜಾವಡೇಕರ್, ಕಾಂಗ್ರೆಸ್ ಅಧಿಕಾರಾವಧಿಯು ದಿನಕ್ಕೊಂದು ಹಗರಣ ಎಂಬಂತಾಗಿತ್ತು ಎಂದಿದ್ದಾರೆ.

ರಾಹುಲ್ ಗಾಂಧಿ ಅವರ ಬಾವ ರಾಬರ್ಟ್ ವಾದ್ರಾ ಅವರ ಭೂಹಗರಣವನ್ನೂ ಸಚಿವರು ಪ್ರಸ್ತಾಪಿಸಿದರು.

ಈ ಮಧ್ಯೆಚಿದಂಬರಂ ಬಂಧನ ಖಂಡಿಸಿ ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

₹4.62 ಕೋಟಿಗೆ ಅನುಮತಿ; ಸ್ವೀಕರಿಸಿದ್ದು 350 ಕೋಟಿ!
ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯು ₹4.62 ಕೋಟಿ ವಿದೇಶಿ ಬಂಡವಾಳಕ್ಕೆ ಅರ್ಜಿ ಸಲ್ಲಿಸಿತ್ತು. ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರ ಅನುಮತಿ ಮೇರೆಗೆ ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಮಂಡಳಿಯು (ಎಫ್‌ಐಪಿಬಿ) ಪರವಾನಗಿ ನೀಡಿತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿದ ಸಂಸ್ಥೆಯು, ₹800ಕ್ಕೆ ಒಂದು ಷೇರಿನಂತೆ ₹350 ಕೋಟಿ ವಿದೇಶಿ ಬಂಡವಾಳ ಸ್ವೀಕರಿಸಿತು. ಆದರೆ ಈ ಬಂಡವಾಳ ಹೂಡಿಕೆಯಲ್ಲಿ ಸಂದೇಹ ಕಂಡುಬಂದ ಕಾರಣ ಆದಾಯ ತೆರಿಗೆ ಇಲಾಖೆಯು ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯನ್ನು ಸಂಪರ್ಕಿಸಿ, ತನಿಖೆ ನಡೆಸುವಂತೆ ಆಗ್ರಹಿಸಿತು.

ವಿಷಯವನ್ನು ಪರಿಶೀಲಿಸಲಾಗಿದ್ದು, ಐಎನ್‌ಎಕ್ಸ್ ಸಂಸ್ಥೆಯಿಂದ ಸ್ಪಷ್ಟೀಕರಣ ಕೇಳಲಾಗಿದೆ ಎಂದು ಮಂಡಳಿಯು ಆದಾಯ ತೆರಿಗೆ ಇಲಾಖೆಗೆ ಪ್ರತಿಕ್ರಿಯೆ ನೀಡಿತು.

ದಂಡನಾತ್ಮಕ ಕ್ರಮಗಳಿಗೆ ಒಳಗಾಗುವ ಸಾಧ್ಯತೆಯನ್ನು ಅರಿತ ಐಎನ್‌ಎಕ್ಸ್, ಅದರಿಂದ ತಪ್ಪಿಸಿಕೊಳ್ಳಲು ಕಾರ್ತಿ ಚಿದಂಬರಂ ಜೊತೆ ಸೇರಿ ಕ್ರಿಮಿನಲ್ ಸಂಚಿನಲ್ಲಿ ಭಾಗಿಯಾಯಿತು. ತಂದೆಯ ವರ್ಚಸ್ಸು ಬಳಸಿಕೊಂಡು ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಪ್ರಕರಣವನ್ನು ‘ಸಾಹಾರ್ದಯುತವಾಗಿ’ ಬಗೆಹರಿಸಿಕೊಡುವ ಕೆಲಸವನ್ನು ಕಾರ್ತಿಗೆ ಐಎನ್ಎಕ್ಸ್ ವಹಿಸಿತ್ತು ಎನ್ನುತ್ತದೆ ಸಿಬಿಐ ಎಫ್ಐಆರ್.

ಈಗಾಗಲೇ ಹೂಡಿಕೆ ಆಗಿರುವ ಐಎನ್‌ಎಕ್ಸ್ ಕಂಪನಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹಣಕಾಸು ಸಚಿವಾಲಯ ಅವಕಾಶ ನೀಡಿದ್ದು ಮಾತ್ರವಲ್ಲ,ಆದಾಯ ತೆರಿಗೆ ಇಲಾಖೆಯ ತನಿಖೆಯ ದಿಕ್ಕು ತಪ್ಪಿಸಿತ್ತು. ಎಫ್‌ಐಪಿಬಿ ಪ್ರಕಟಣೆ ಹಾಗೂ ಅನುಮತಿಗೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸಿದ್ದಕ್ಕೆ ಕಾರ್ತಿ ನಿಯಂತ್ರಣದಲ್ಲಿರುವ ಅಡ್ವಾಂಟೇಜ್ ಸ್ಟ್ರಾಟಜಿಕ್ ಸಂಸ್ಥೆಗೆ ₹10 ಲಕ್ಷ ಪಾವತಿ ಮಾಡಲಾಗಿತ್ತು. ಜೊತೆಗೆ ಐಎನ್‌ಎಕ್ಸ್ ಮೀಡಿಯಾಗೆ ₹3.5 ಕೋಟಿಯ ಬಿಲ್ ಸಿದ್ಧಪಡಿಸಿತ್ತು.

ಹೀಗಿದ್ದರೂ ಚಿದಂಬರಂ ಅವರ ಹೆಸರು ಎಫ್‌ಐಆರ್‌ನಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಸಿಬಿಐ ಇನ್ನಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ. ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಚಿದಂಬರಂ, ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು.

*

"ಕಾನೂನು ತನ್ನದೇ ಕ್ರಮ ಜರುಗಿಸಬೇಕು. ಆದರೆ ಬಂಧನದ ವೇಳೆ ಹಿರಿಯ ಮುಖಂಡನನ್ನು ನಡೆಸಿಕೊಂಡ ರೀತಿ ಆಕ್ಷೇಪಾರ್ಹ
-ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ದೇಶದ ಪ್ರಜಾತಂತ್ರ ವ್ಯವಸ್ಥೆ ಕಣ್ಣೀರು ಹಾಕುತ್ತಿದೆ. ಆದರೆ ನ್ಯಾಯಾಂಗ ವ್ಯವಸ್ಥೆಯು ಪ್ರಜಾತಂತ್ರದ ಬೆಂಬಲಕ್ಕೆ ಇನ್ನು ಬಂದಿಲ್ಲ
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT