ಘೋರ ನಿರ್ಲಕ್ಷ್ಯಕ್ಕೆ ನಲುಗಿದ ಮಕ್ಕಳು

ಶುಕ್ರವಾರ, ಏಪ್ರಿಲ್ 26, 2019
35 °C
ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಭೇಟಿ

ಘೋರ ನಿರ್ಲಕ್ಷ್ಯಕ್ಕೆ ನಲುಗಿದ ಮಕ್ಕಳು

Published:
Updated:
Prajavani

ಚಿಕ್ಕಬಳ್ಳಾಪುರ: ಭದ್ರತಾ ಸಿಬ್ಬಂದಿಯೊಬ್ಬರು ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ ಕುರಿತಂತೆ ನಗರದ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಅವರು ಭಾನುವಾರ ಭೇಟಿ ನೀಡಿ ಅಧಿಕಾರಿಗಳ ವಿಚಾರಣೆ ನಡೆಸಿದರು.

ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಎಚ್.ಕೊರಡ್ಡಿ ಜತೆಗೂಡಿ ಸಂಜೀವಕುಮಾರ ಅವರು ಬಾಲಮಂದಿರದ ಮೊದಲ ಮಹಡಿಯಲ್ಲಿ ಬಾಲಕಿಯರ ಜತೆಗೆ ಪ್ರತ್ಯೇಕ ಸಮಾಲೋಚನೆ ನಡೆಸಿದರು. ಬಳಿಕ ಬಾಲ ಮಂದಿರದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲೂಸಿ) ಸದಸ್ಯರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಬಾಲ ಮಂದಿರದ ಕಟ್ಟಡ ಪರಿಶೀಲನೆ ನಡೆಸಿದ ಸಂಜೀವಕುಮಾರ ಅವರು ಸರಿಯಾಗಿ ಸಲಹಾ ಪೆಟ್ಟಿಗೆ ಅಳವಡಿಸದೇ ಇರುವುದು ಕಂಡು ಬಾಲ ಮಂದಿರದ ಅಧೀಕ್ಷಕ ನಾಗಭೂಷಣಾಚಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಲಮಂದಿರದಲ್ಲಿ ಅಧಿಕಾರಿಗಳಿಂದ ಘೋರ ನಿರ್ಲಕ್ಷ್ಯ ಆಗಿದೆ. ಜನವರಿ ಕೊನೆಯ ವಾರದಿಂದ ಇಲ್ಲಿ ಸಂಶಯಾಸ್ಪದ ವಿದ್ಯಮಾನಗಳು ನಡೆಯುತ್ತ ಬಂದಿವೆ. ಭದ್ರತಾ ಸಿಬ್ಬಂದಿ ಬಾಲಕಿಯರಿಗೆ ಹೊರಗಿನಿಂದ ಚಿಕನ್, ಮಾಂಸ ತಂದು ಕೊಡುತ್ತ ಮಕ್ಕಳ ಸ್ನೇಹ ಸಂಪಾದಿಸಿದ್ದಾಳೆ. ಅಂತಹ ಚಟುವಟಿಕೆಗಳನ್ನು ಬಾಲಮಂದಿರ ಸಿಬ್ಬಂದಿ ಆಗಲೇ ತಡೆಗಟ್ಟಿದ್ದರೆ, ಇವತ್ತು ಇಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ’ ಎಂದು ಹೇಳಿದರು.

‘ಕೆಲ ಬಾಲಕಿಯರು ಮಲಗುವ ಕೋಣೆಯ ಕಿಟಕಿ ಸರಳುಗಳನ್ನು ಮುರಿದು ಹೊರಗೆ ಹೋಗಿ ಬಂದು ಮಾಡಿದ್ದಾರೆ. ಆ ವಿಚಾರ ಗೊತ್ತಿದ್ದರೂ ಸಿಬ್ಬಂದಿ ಪೊಲೀಸರ ಗಮನಕ್ಕೆ ತಂದಿಲ್ಲ. ‘ಪೊಕ್ಸೊ’ (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ- 2012) ಕಾಯ್ದೆಯ ಸೆಕ್ಷನ್‌ 19ರ ಅಡಿ ಇಂತಹ ಘಟನೆ ನಡೆಯುತ್ತದೆ ಎಂದು ಅನುಮಾನ ಉಂಟಾದರೂ ಸಾಕು ಕೂಡಲೇ ವಿಶೇಷ ಬಾಲನ್ಯಾಯಾಲಯ ಪೊಲೀಸ್ ಘಟಕಕ್ಕೆ ದೂರು ನೀಡಬೇಕು’ ಎಂದು ತಿಳಿಸಿದರು.

‘ಪೊಕ್ಸೊ’ ಕಾಯ್ದೆ ಸೆಕ್ಷನ್‌ 21 ಅಡಿ ಅಧಿಕಾರಿಗಳು ಇಂತಹ ಪ್ರಕರಣ ವರದಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದು 6 ತಿಂಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವಾಗುತ್ತದೆ. ಬಾಲ ಮಂದಿರದ ಅಧೀಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಮೇಲಾಧಿಕಾರಿಗಳು ಮಕ್ಕಳೆಡೆಗೆ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ಇಂತಹ ಅಪರಾಧಗಳನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

‘ಸದ್ಯ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ಇಬ್ಬರು ಬಾಲಕಿಯರು ಇನ್ನು ಪತ್ತೆಯಾಗಿಲ್ಲ. ಅವರು ಸಿಕ್ಕ ಬಳಿ ಅನೇಕ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಬಾಲ ಮಂದಿರದ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳ ಭದ್ರತೆ ವಿಚಾರದಲ್ಲಿ ರಾಜೀ ಮಾಡಿಕೊಳ್ಳಕೂಡದು’ ಎಂದು ಹೇಳಿದರು.

**

ರಾಜ್ಯದಲ್ಲಿರುವ ಎಲ್ಲ ಬಾಲಕ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕರು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಮಕ್ಕಳೆಡೆಗೆ ವೃತ್ತಿಪರ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು.
–ಸಂಜೀವಕುಮಾರ ಹಂಚಾಟೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !