ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು–ಹಳೇಬೀಡಿನಲ್ಲಿ ಬೇರೂರಿದ ಕಲೆ, ಸಂಸ್ಕೃತಿ

Last Updated 8 ಫೆಬ್ರುವರಿ 2018, 10:18 IST
ಅಕ್ಷರ ಗಾತ್ರ

ಹಳೇಬೀಡು(ಮಹಾಕವಿ ಜನ್ನ ವೇದಿಕೆ): ಕಲೆ, ಸಂಸ್ಕೃತಿಗೆ ಹೊಯ್ಸಳರು ಪ್ರೋತ್ಸಾಹ ನೀಡಿದ್ದರು ಎಂಬುದಕ್ಕೆ ಶಿಲ್ಪಕಲಾ ಸ್ಮಾರಕಗಳು ಸಾಕ್ಷಿಯಾಗಿ ನಿಂತಿವೆ. ಬೇಲೂರು, ಹಳೇಬೀಡಿನಲ್ಲಿ ಪ್ರಾಚೀನ ಕಾಲದ ಸಂಸ್ಕೃತಿಯ ಬೇರು ನಿಂತಿದೆ ಎಂದು ಸಾಹಿತಿ ಬಿ.ಆರ್‌.ಲಕ್ಷ್ಮಣ್‌ರಾವ್‌ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ನಡೆದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಹಿಂದಿನ ಕಾಲದ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ಹೊಂದಿದ್ದರು. ಮಕ್ಕಳಿಗೆ ಕನ್ನಡ ಭಾಷೆಯನ್ನು ಅಚ್ಚುಕಟ್ಟಾಗಿ ಕಲಿಸಿ, ಬದುಕಿನ ಪಾಠ ಹೇಳುತ್ತಿದ್ದರು. ಅಂದಿನ ಕಾಲದಲ್ಲಿ ಗುಣಮಟ್ಟದ ಶಿಕ್ಷಣ ಕಲಿಸುತ್ತಿದ್ದರು’ ಎಂದು ಅವರು ಹೇಳಿದರು.

‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ತಾರತಮ್ಯ ನೀತಿ ಕಾಣುತ್ತಿದೆ. ಉಳ್ಳವರಿಗೆ ಒಂದು, ಬಡವರಿಗೆ ಮತ್ತೊಂದು ಶಾಲೆಯ ವ್ಯವಸ್ಥೆ ಚಾಲ್ತಿಯಲ್ಲಿದೆ. ಇಂತಹ ವ್ಯವಸ್ಥೆಯಿಂದ ಶಿಕ್ಷಣದಲ್ಲಿ ಸರ್ವರಿಗೂ ಸಮಪಾಲು ಇಲ್ಲದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಹಿತ್ಯ ಸಮ್ಮೇಳನದಲ್ಲಿ ನೆಲ, ಜಲ ಸಂಸ್ಕೃತಿಯ ಬಗ್ಗೆ ಚರ್ಚಿಸಬೇಕು. ನೆಲ ಜಲ ಇದ್ದರೆ ಮಾತ್ರ ಸಾಹಿತ್ಯ ಉಳಿಸಲು ಸಾಧ್ಯ’ ಎಂದು ಅವರು ವಿವರಿಸಿದರು.
ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಅನುಮತಿ ಕೊಟ್ಟಿರುವುದರಿಂದ ಇಂಗ್ಲಿಷ್‌ ಶಾಲೆಗಳು ತಲೆ ಎತ್ತುತ್ತಿವೆ. ಕನ್ನಡ ಭಾಷೆ ಉಳಿಸಲು ಸರ್ಕಾರವೇ ಮನಸ್ಸು ಮಾಡಬೇಕು’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಳ್ಳಿ ಮಂಜೇಗೌಡ ಮಾತನಾಡಿ, ‘ರಾಜಕಾರಣಿಗಳು ಖಾಸಗಿ ಶಾಲೆ ನಡೆಸುತ್ತಿರುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿ ಇಲ್ಲದಂತಾಗಿದೆ. ಸಮಾಜವನ್ನು ತಿದ್ದುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಗಮನ ಹರಿಸಬೇಕು. ಶಿಕ್ಷಕರಿಗೆ ಸರ್ಕಾರ ಬೋಧನೆ ಹೊರತುಪಡಿಸಿ ಬೇರೆ ಕೆಲಸಗಳನ್ನು ಕೊಟ್ಟಿದೆ. ಇದರಿಂದ ಶಿಕ್ಷಕರು ಸಹ ಒತ್ತಡದಲ್ಲಿದ್ದಾರೆ’ ಎಂದರು.

6ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ.ಶ್ರಿವತ್ಸ ಎಸ್‌.ವಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಅಧ್ಯಕ್ಷ ರವಿ ನಾಕಲಗೂಡು, ಜಿಲ್ಲಾ ಪಂಚಾಯತಿ ಸದಸ್ಯರಾದ ಎಚ್‌.ಎಂ.ಮಂಜಪ್ಪ, ಲತಾ ದಿಲೀಪ್‌ ಕುಮಾರ್‌, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಪಿ.ಎಸ್‌.ಹರೀಶ್‌, ಸುಮಾ ಪರಮೇಶ್‌, ಗ್ರಾ.ಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಹರೀಶ್‌, ಸಾಹಿತಿ ಚನ್ನೇಗೌಡ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ತೀರ್ಥೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT