ಮೋದಿ ವಿರುದ್ಧ ಜನಾಂದೋಲನ

7
ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರಣತಂತ್ರ

ಮೋದಿ ವಿರುದ್ಧ ಜನಾಂದೋಲನ

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ದೇಶವ್ಯಾಪಿ ಜನಾಂದೋಲನ ಹಮ್ಮಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ, ಹದಗೆಟ್ಟ ಆರ್ಥಿಕ ವ್ಯವಸ್ಥೆ, ಬ್ಯಾಂಕಿಂಗ್‌ ಹಗರಣ, ನಿರುದ್ಯೋಗ ಸಮಸ್ಯೆ, ಕೃಷಿ ಕ್ಷೇತ್ರದ ದುಃಸ್ಥಿತಿ ಮುಂದಿಟ್ಟುಕೊಂಡು ಹೋರಾಟ ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪರಿಷ್ಕೃತ ಕರಡುಪಟ್ಟಿಯ ವಿಷಯ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು.

ಎನ್‌ಆರ್‌ಸಿ ಅಸ್ತ್ರವನ್ನು ಕೇಂದ್ರ ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ನಾಯಕರು ರಣತಂತ್ರ ರೂಪಿಸಿದರು.

ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ರಾಹುಲ್‌ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಸಿಡಬ್ಲ್ಯುಸಿ ಸಭೆ ಇದಾಗಿದೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌, ಪಕ್ಷದ ಮುಖಂಡರಾದ ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಉಮ್ಮನ್‌ ಚಾಂಡಿ, ಅಂಬಿಕಾ ಸೋನಿ, ಶೀಲಾ ದೀಕ್ಷಿತ್‌, ಪಿ.ಚಿದಂಬರಂ, ಅಹ್ಮದ್‌ ಪಟೇಲ್‌ ಅನೇಕರು ನಾಯಕರು ಸಭೆಯಲ್ಲಿ ಭಾಗಹಿಸಿದ್ದರು.

ಎನ್‌ಆರ್‌ಸಿ: ರಾಜೀವ್‌ ಗಾಂಧಿ ನಿಲುವು ಸಮರ್ಥನೆ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು 2005ರಿಂದ 2014ರವರೆಗೆ ಬಾಂಗ್ಲಾದೇಶದ 82,728 ಅಕ್ರಮ ನಿವಾಸಿಗಳನ್ನು ದೇಶದಿಂದ ಗಡಿಪಾರು ಮಾಡಿತ್ತು. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂತಹ ಕೇವಲ 1,822 ಜನರನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ತಿಳಿಸಿದರು.

ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ( ಸಿಡಬ್ಲ್ಯುಸಿ) ಸಭೆಯ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದ ನಿರ್ಣಯವು ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಕೈಗೊಳ್ಳಲಾಗಿದ್ದು ಎಂಬುದು ಸತ್ಯ. ಆದರೆ, ನಂತರ ಆ ಕಾರ್ಯಕ್ಕೆ ವಾಜಪೇಯಿ ನೇತೃತ್ವದ ಸರ್ಕಾರ ಕೇವಲ ₹ 5 ಲಕ್ಷ ಅನುದಾನ ಒದಗಿಸಿದ್ದರೆ, ಮನಮೋಹನ್‌ ಸಿಂಗ್‌ ಅವರು ₹ 49 ಕೋಟಿ ಮಂಜೂರು ಮಾಡಿದ್ದರು ಎಂದು ಹೇಳಿದರು.

‘ಅಸ್ಸಾಂ ಒಂದರಲ್ಲೇ 40 ಲಕ್ಷ ಅಕ್ರಮ ಬಾಂಗ್ಲಾದೇಶೀ ನಿವಾಸಿಗಳು ನೆಲೆಸಿದ್ದಾರೆ ಎಂದಾದಲ್ಲಿ, ಪ್ರಧಾನಿ ಮೋದಿ ಅವರು ಎಲ್ಲರನ್ನೂ ಹೊರ ಹಾಕಲು ಪ್ರಯತ್ನ ಮಾಡುವ ಧೈರ್ಯ ತೋರದೇ, ಚುನಾವಣೆ ಸಮೀಪಿಸಿದಾಗ ಆ ವಿಷಯವನ್ನು ಪ್ರಸ್ತಾಪಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.

ಸರ್ಕಾರ ಇಷ್ಟು ದಿನ ಈ ವಿಷಯದಲ್ಲಿ ಕೈ ಕಟ್ಟಿ ಕುಳಿತಿದ್ದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !