ಗುರುವಾರ , ಜುಲೈ 7, 2022
23 °C

200 ಯುನಿಟ್‌ ವಿದ್ಯುತ್‌ ಬಳಕೆಗೆ ಶುಲ್ಕವಿಲ್ಲ: ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ 200 ಯುನಿಟ್‌ ವಿದ್ಯುತ್‌ ಬಳಕೆಗೆ ಗ್ರಾಹಕರು ಯಾವುದೇ ಶುಲ್ಕ ಭರಿಸಬೇಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್‌ ಆದ್ಮಿ ಪಾರ್ಟಿಯ (ಎಎಪಿ) ಮುಖ್ಯಸ್ಥರೂ ಆಗಿರುವ ಕೇಜ್ರಿವಾಲ್‌ ಈ ಘೋಷಣೆ ಮಾಡಿದ್ದಾರೆ.

‘200 ಯುನಿಟ್‌ ವಿದ್ಯುತ್‌ ಬಳಕೆಗೆ ಸಂಪೂರ್ಣ ಸಬ್ಸಿಡಿ ನೀಡಲಾಗುವುದು. 201 ರಿಂದ 400 ಯುನಿಟ್‌ ಬಳಕೆದಾರರಿಗೆ ಶೇ 50 ರಷ್ಟು ಸಬ್ಸಿಡಿ ನೀಡಲಾಗುವುದು. ಗುರುವಾರದಿಂದಲೇ (ಆಗಸ್ಟ್‌ 1) ಇದು ಜಾರಿಗೆ ಬರಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್‌ ತಿಳಿಸಿದರು.

‘ಈ ಯೋಜನೆಯಿಂದ ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್‌ ಉಳಿತಾಯಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ. ಸಬ್ಸಿಡಿಗಾಗಿ ಸರ್ಕಾರ ಪ್ರತಿ ವರ್ಷ ₹1,800 ಕೋಟಿಯಿಂದ ₹2,000 ಕೋಟಿ ಖರ್ಚು ಮಾಡಲಿದೆ’ ಎಂದು ಹೇಳಿದರು.

‘ದೆಹಲಿಯಲ್ಲಿ 2015ರಲ್ಲಿ ಎಎಪಿ ಅಧಿಕಾರಕ್ಕೆ ಬಂದಿದ್ದು, ಅಂದಿನಿಂದ ವಿದ್ಯುತ್‌ ಶುಲ್ಕಕ್ಕೆ ಶೇ 50 ರಷ್ಟು ಸಬ್ಸಿಡಿ ನೀಡಲಾಗಿದೆ. ದೆಹಲಿ ಜನರು ಪ್ರಾಮಾಣಿಕ ಸರ್ಕಾರವನ್ನು ಆಯ್ಕೆ ಮಾಡಿದ್ದು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿದ್ಯುತ್‌ ಶುಲ್ಕವನ್ನು ಏರಿಕೆ ಮಾಡಿಲ್ಲ’ ಎಂದು ಅವರು ತಿಳಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಗಿದೆ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ದೊಡ್ಡ ದೊಡ್ಡ ನಾಯಕರು, ಅಧಿಕಾರಿಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಆದರೆ, ನಾನು 24 ಗಂಟೆಗಳ ಕಾಲವೂ ದುಡಿಯುವ ಸಾಮಾನ್ಯ ಜನರಿಗೆ ಉಚಿತ ವಿದ್ಯುತ್‌ ನೀಡಿದ್ದೇನೆ‘ ಎಂದು ಕೇಜ್ರಿವಾಲ್‌ ತಮ್ಮ ನಿರ್ಧಾರ ಸಮರ್ಥಿಸಿಕೊಂಡರು.

ಚುನಾವಣಾ ತಂತ್ರ: ಬಿಜೆಪಿ ಟೀಕೆ
200 ಯುನಿಟ್‌ವರೆಗೆ ವಿದ್ಯುತ್‌ ಬಳಸುವ ಗ್ರಾಹಕರು ಶುಲ್ಕ ಪಾವತಿಸಬೇಕಿಲ್ಲ ಎಂಬ ಅರವಿಂದ್‌ ಕೇಜ್ರಿವಾಲ್‌ ಘೋಷಣೆಯು ‘ಚುನಾವಣಾ ತಂತ್ರ’ ಎಂದು ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ ಟೀಕಿಸಿದ್ದಾರೆ.

ಇದೊಂದು ಸ್ವಾಗತಾರ್ಹ ಕ್ರಮ, ಆದರೆ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಈ ಘೋಷಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು