ಶುಕ್ರವಾರ, ಆಗಸ್ಟ್ 6, 2021
21 °C
ಮಹಾರಾಷ್ಟ್ರ, ದೆಹಲಿಯಲ್ಲಿ ಸಾವಿನ ಸಂಖ್ಯೆ ಪರಿಷ್ಕರಣೆ

ಕೋವಿಡ್‌: ದೇಶದಲ್ಲಿ ಒಂದೇ ದಿನ 2,003 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಕೋವಿಡ್‌–19ಗೆ ಸತ್ತವರ ಸಂಖ್ಯೆ ಬುಧವಾರ ಒಂದೇ ದಿನ 2,003 ಏರಿಕೆಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11,903ಕ್ಕೆ ತಲುಪಿದೆ. 

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಈ ಹಿಂದೆ ದಾಖಲಿಸದೇ ಇದ್ದ ಪ್ರಕರಣಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿ, ಪರಿಷ್ಕರಿಸಿರುವುದು ಸಾವಿನ ಸಂಖ್ಯೆ ಏಕಾಏಕಿ ಏರಿಕೆಯಾಗಲು ಕಾರಣವಾಗಿದೆ.

ಮಹಾರಾಷ್ಟ್ರವು ಬುಧವಾರ ಮುಂಜಾನೆ 1,409 ಸಾವಿನ ಪ್ರಕರಣವನ್ನು ವರದಿ ಮಾಡಿದ್ದು, ಈ ಪೈಕಿ 1,328 ಪ್ರಕರಣಗಳು ಈ ಹಿಂದೆ ವರದಿ ಆಗಿರಲಿಲ್ಲ. ಮಹಾರಾಷ್ಟ್ರದಲ್ಲಿ ಮಂಗಳವಾರ 81 ಜನರು ಸೋಂಕಿನಿಂದ ಮೃತಪಟ್ಟಿದ್ದರು. ದೆಹಲಿಯು ಮಂಗಳವಾರ 437 ಸಾವು ದೃಢಪಟ್ಟಿರುವುದನ್ನು ವರದಿ ಮಾಡಿದೆ. ತಮಿಳುನಾಡಿನಲ್ಲಿ 49 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

ಬುಧವಾರ 10,974 ಜನರಲ್ಲಿ ಕೋವಿಡ್‌–19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,54,065 ತಲುಪಿದೆ. ಈ ಪೈಕಿ 1,86,935 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದೇಶದ ಶೇ 51 ಕೋವಿಡ್‌ ಪ್ರಕರಣಗಳು ಮುಂಬೈ, ದೆಹಲಿ, ಚೆನ್ನೈ, ಠಾಣೆ ಮತ್ತು ಅಹಮದಾಬಾದ್‌ ನಗರಗಳಲ್ಲಿ ದಾಖಲಾಗಿವೆ. ಅಹಮದಾಬಾದ್‌, ಪುಣೆ ಮತ್ತು ಠಾಣೆಯಲ್ಲಿ ಕೋವಿಡ್‌–19 ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತಿದ್ದು, ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ನೀತಿ ಆಯೋಗದ ಸಿಇಒ ಅಮಿತಾಬ್‌ ಕಾಂತ್‌ ಅವರು ಬಿಡುಗಡೆಗೊಳಿಸಿರುವ ನಕ್ಷೆಯಲ್ಲಿ ಬಹಿರಂಗವಾಗಿದೆ. 

ದೇಶದ ಶೇ 70 ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿದ್ದು, ಹರಿಯಾಣದಲ್ಲಿ ಬುಧವಾರ ಒಂದೇ ದಿನ 550 ಜನರಲ್ಲಿ ಸೋಂಕು ದೃಢಪಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು