ಮಲ್ಯ ಪರಾರಿಗೆ ಮೋದಿ ಬಂಟನ ನೆರವು!

7
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ l ಆರೋಪ ನಿರಾಕರಿಸಿದ ಸಿಬಿಐ

ಮಲ್ಯ ಪರಾರಿಗೆ ಮೋದಿ ಬಂಟನ ನೆರವು!

Published:
Updated:
Deccan Herald

ನವದೆಹಲಿ: ಉದ್ಯಮಿ ವಿಜಯ ಮಲ್ಯ ವಿರುದ್ಧದ ’ಲುಕ್‌ಔಟ್‌ ನೋಟಿಸ್‌’ ದುರ್ಬಲಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಬಂಟ ಹಾಗೂ ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಕಾರಣ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಮಲ್ಯ, ವಜ್ರಾಭರಣ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಪರಾರಿಯಾಗಲು ಕೂಡ ಇದೇ ಅಧಿಕಾರಿ ಯೋಜನೆ ರೂಪಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ಗುಜರಾತ್‌ ಕೇಡರ್‌ ಅಧಿಕಾರಿಯಾಗಿರುವ ಶರ್ಮಾ ಅವರನ್ನು ಪ್ರಧಾನಿ ಮೋದಿ ಅವರ ‘ನೀಲಿ ಕಂಗಳ ಹುಡುಗ’ (ಪರಮಾಪ್ತ) ಎಂದು ರಾಹುಲ್‌ ಶನಿ
ವಾರ ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರ ಆರೋಪಗಳನ್ನು ಸಿಬಿಐ ನಿರಾಧಾರ ಎಂದು ತಳ್ಳಿ ಹಾಕಿದೆ. ಮಲ್ಯ ಬಂಧನಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಲುಕ್‌ಔಟ್‌ ನೋಟಿಸ್‌ ಬದಲಿಸಬೇಕಾಯಿತು ಎಂದು ಸ್ಪಷ್ಟಪಡಿಸಿದೆ.

ಅದು ಕೇವಲ ಒಬ್ಬ ಅಧಿಕಾರಿ ತೆಗೆದುಕೊಂಡ ನಿರ್ಧಾರವಲ್ಲ. ಹಿರಿಯ ಅಧಿಕಾರಿಗಳ ಸಾಮೂಹಿಕ ನಿರ್ಧಾರ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.

ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಪರಾರಿಯಲ್ಲಿಯೂ ಶರ್ಮಾ ಅವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಲ್ಯ ವಿದೇಶಕ್ಕೆ ಪರಾರಿಯಾಗಲು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಹಾಯ ಮಾಡಿದ್ದಾರೆ ಎಂದು ರಾಹುಲ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ದೇಶ ತೊರೆಯುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದಾಗಿ ಮಲ್ಯ ಹೇಳಿದ ನಂತರ ಮೋದಿ ಮತ್ತು ಜೇಟ್ಲಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ತೀವ್ರಗೊಂಡಿದೆ. ಮಲ್ಯ ಪರಾರಿ ಪೂರ್ವಾಪರ ಬಗ್ಗೆ ತನಿಖೆಗೆ ಕಾಂಗ್ರೆಸ್‌ ಪಟ್ಟು ಹಿಡಿದಿದೆ.

ದೇಶದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ 23 ಜನರು ನಾಲ್ಕು ವರ್ಷಗಳಲ್ಲಿ ದೇಶದಿಂದ ಪರಾರಿಯಾಗಿದ್ದಾರೆ. ಬಿಜೆಪಿಯು ಜನಸಾಮಾನ್ಯರಿಗಿಂತ ಹೆಚ್ಚು ಶ್ರೀಮಂತರಿಗೆ ನಿಷ್ಠೆಯಾಗಿರುವುದು ಇದರಿಂದ ಗೊತ್ತಾಗುತ್ತದೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ಕಾಂಗ್ರೆಸ್‌ ಮೌನ ಪ್ರಶ್ನಿಸಿದ ಶಿವಸೇನಾ

ಮುಂಬೈ : ‘ಮಲ್ಯ ದೇಶ ತೊರೆಯುವ ಮುನ್ನ ಹಣಕಾಸು ಸಚಿವ ಜೇಟ್ಲಿ ಅವರನ್ನು ಭೇಟಿ ಮಾಡಿದ ವಿಷಯ ಗೊತ್ತಿದ್ದರೆ ಇಷ್ಟು ದಿನ ಮೌನವಹಿಸಿದ್ದೇಕೆ’ ಎಂದು ಶಿವಸೇನಾ ಶನಿವಾರ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ.

‘ಮಲ್ಯ ಒಬ್ಬ ಸುಳ್ಳುಗಾರ. ಆತನ ಹೇಳಿಕೆಯನ್ನು ನಂಬಿ ಕಾಂಗ್ರೆಸ್‌ ಆಧಾರರಹಿತ ಆರೋಪ ಮಾಡುತ್ತಿದೆ’ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಸಂಪಾದಕೀಯ ತರಾಟೆಗೆ ತೆಗೆದುಕೊಂಡಿದೆ.

ಜೆಪಿಸಿ ತನಿಖೆಗೆ ಒತ್ತಾಯ

ಪುದುಚೇರಿ: ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ಒತ್ತಾಯಿಸಿದ್ದಾರೆ.

ಎನ್‌ಡಿಎ ಸರ್ಕಾರದ ವಿರುದ್ಧ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಫೇಲ್‌ ಹಗರಣ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಬಣ್ಣಿಸಿದರು. ಪ್ರಧಾನಿ ಮೋದಿ ಪ್ರಾಮಾಣಿಕತೆ ಪ್ರಶ್ನಿಸಿದ ವಾಸ್ನಿಕ್‌, ‘ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಉದ್ಯಮಿಯ ಖಜಾನೆ ತುಂಬಿಸಲು ಪ್ರಧಾನಿ ಮುಂದಾಗಿದ್ದಾರೆ’ ಎಂದು ಆಪಾದಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !