ಮಂಗಳವಾರ, ಆಗಸ್ಟ್ 20, 2019
27 °C

ಕಳ್ಳನೆಂಬ ಶಂಕೆಯಿಂದ ದಲಿತ ಯುವಕನಿಗೆ ಥಳಿಸಿ ಕಿಚ್ಚಿಟ್ಟು ಕೊಂದರು! 

Published:
Updated:

ಲಖನೌ: ಕಳ್ಳನೆಂಬ ಶಂಕೆಯಿಂದ 28ರ ಹರೆಯದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಕೊಂದ ಘಟನೆ ಉತ್ತರ ಪ್ರದೇಶದ ಬರಬಂಕಿ ಜಿಲ್ಲೆಯ ರಘೋಪುರ್ ಗ್ರಾಮದಲ್ಲಿ ನಡೆದಿದೆ.

ಸುಜಿತ್ ಕುಮಾರ್ ಎಂಬ ಯುವಕ ಜುಲೈ 19ರಂದು ರಾತ್ರಿ 2 ಗಂಟೆಗೆ ತನ್ನ ಅತ್ತೆ ಮನೆಗೆ ಹೋಗುತ್ತಿದ್ದಾಗ ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು.  ನಾಯಿಗಳಿಂದ ರಕ್ಷಣೆ ಪಡೆಯಲು ಸುಜಿತ್ ಮನೆಯೊಂದಕ್ಕೆ ನುಗ್ಗಿದ್ದಾರೆ,. ಮನೆಯೊಳಗೆ ನುಗ್ಗಿದ ಯುವಕನನ್ನು ಕಳ್ಳನೆಂದು ತಪ್ಪಾಗಿ ತಿಳಿದ ಮನೆಯವರು ಹಿಗ್ಗಾಮುಗ್ಗ ಥಳಿಸಿ ಆಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟಿದ್ದಾರೆ ಎಂದು ಬರಬಂಕಿ ಎಸ್‌ಐ ಆಕಾಶ್ ತೋಮರ್ ಹೇಳಿದ್ದಾರೆ.

ಶೇ. 40ರಷ್ಟು ದೇಹ ಸುಟ್ಟ ಸ್ಥಿತಿಯಲ್ಲಿದ್ದ ಯುವಕನನ್ನು ಲಖನೌದಲ್ಲಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಆತ ಮೃತಪಟ್ಟಿದ್ದಾನೆ.  ಕಾಲು ಪೂರ್ಣವಾಗಿ ಸುಟ್ಟು ಹೋಗಿ ಗಂಭೀರ ಸ್ಥಿತಿಯಲ್ಲಿದ್ದ ಯುವಕನ ದೇಹದ ಇತರ ಭಾಗಗಳಿಗೂ ಸೋಂಕು ಸೋಂಕು ತಗಲಿ ಮೃತಪಟ್ಟಿದ್ದಾನೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಅಶುತೋಶ್ ದುಬೆ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳಾದ 4 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಕಳೆದ ವಾರ ಶ್ರವಣ್ ಮತ್ತು ಉಮೇಶ್ ಯಾದವ್ ಎಂಬವರನ್ನು ಬಂಧಿಸಲಾಗಿತ್ತು. ಇನ್ನಿಬ್ಬರನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
 

Post Comments (+)