ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಮರುಪರಿಶೀಲನೆ: ವಿಎಚ್‌ಪಿ, ಸಂತ ಸಮಾಜ ಆಕ್ರೋಶ

Last Updated 17 ನವೆಂಬರ್ 2019, 19:46 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ತೀರ್ಪು ಮರುಪರಿಶೀಲನೆಗೆ ಅರ್ಜಿ ಹಾಕಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮತ್ತು ಜಮೀಯತ್‌ ಉಲೇಮಾ ಎ ಹಿಂದ್‌ ಸಂಘಟನೆ ನಿರ್ಧರಿಸಿರುವುದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಅಖಿಲ ಭಾರತೀಯ ಸಂತ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ.

‘ಸಂವಿಧಾನದ ವಿರುದ್ಧವೇ ಸದಾ ಇರುವವರು ನ್ಯಾಯಾಂಗದ ಮೇಲೆಯೂ ನಿರಂತರ ದಾಳಿ ನಡೆಸುತ್ತಿದ್ದಾರೆ. ಜಿಹಾದ್‌ಗಾಗಿ ಮುಸ್ಲಿಮರಿಗೆ ಕುಮ್ಮಕ್ಕು ನೀಡುತ್ತಿರುವವರು ತಮ್ಮ ಕೊನೆಯ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೆಚ್ಚಿನ ಕಕ್ಷಿದಾರರು ಅಯೋಧ್ಯೆಯಲ್ಲಿ ಜಮೀನು ಪಡೆಯಲು ಒಪ್ಪಿದ್ದಾರೆ. ನಿಮಗೆ ಆ ಜಮೀನು ಬೇಡ ಎಂದಿದ್ದರೆ ಸುಪ್ರೀಂ ಕೋರ್ಟ್‌ಗೆ ಅದನ್ನು ತಿಳಿಸಿ’ ಎಂದು ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌ ಹೇಳಿದ್ದಾರೆ.

ಎಐಎಂಪಿಎಲ್‌ಬಿ ಮತ್ತು ಜಮೀಯತ್‌ ನಿವೇಶನ ವಿವಾದದ ಕಕ್ಷಿದಾರರೇ ಅಲ್ಲ. ಹಾಗಿರುವಾಗ ಈ ಸಂಘಟನೆಗಳು ತೀರ್ಪು ಮರುಪರಿಶೀಲನೆ ಅರ್ಜಿ ಸಲ್ಲಿಸುವುದು ಹೇಗೆ ಸಾಧ್ಯ ಎಂದು ಸಂತ ಸಮಾಜದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಪ್ರಶ್ನಿಸಿದ್ದಾರೆ.

‘ನೀವು ವಿವಾದದಲ್ಲಿ ಕಕ್ಷಿದಾರರೇ ಅಲ್ಲ. ಮರುಪರಿಶೀಲನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ ಎಂದು ನಾಳೆ ನೀವು ಹೇಳುತ್ತೀರಿ. ನಾಟಕ ಮಾಡುವುದನ್ನು ನಿಲ್ಲಿಸಿ’ ಎಂದು ಅವರು ಹೇಳಿದ್ದಾರೆ. ಮರುವಿಮರ್ಶೆ ಅರ್ಜಿ ಸಲ್ಲಿಸುವ ನಿರ್ಧಾರವು ಬೇಜವಾಬ್ದಾರಿ ವರ್ತನೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕಕ್ಷಿದಾರರು (ವಕ್ಫ್‌ ಮಂಡಳಿ ಮತ್ತು ಇಕ್ಬಾಲ್‌ ಅನ್ಸಾರಿ) ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಈ ದೇಶವು ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತದೆ. ಶರೀಯಕ್ಕೆ ಅನುಗುಣವಾಗಿ ಅಲ್ಲ ಎಂದುಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ.

ತೀರ್ಪನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸುವ ನಿರ್ಧಾರವು ‘ಕೋಮು ಸಾಮರಸ್ಯವನ್ನು ಹದಗೆಡಿಸುವ ತಂತ್ರ’ ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಾಗಿರುವ ರಾಕೇಶ್‌ ಸಿನ್ಹಾ ಹೇಳಿದ್ದಾರೆ. ‘ಅವರಿಗೆ ಪರಸ್ಪರ ಪ್ರೀತಿ ಮತ್ತು ಸಾಮರಸ್ಯ ಬೇಕಾಗಿಲ್ಲ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT