ದೆಹಲಿ ಆಪ್ ಚುನಾವಣಾ ತಂತ್ರ:‘ಚಹಾ’ದ ಜೋಡಿ ಸಾಧನೆಯ ಗುಣಗಾನ

ನವದೆಹಲಿ: ಬಿಜೆಪಿ 2014 ರ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅನುಸರಿಸಿದ್ದ ವಿಭಿನ್ನ ಮಾದರಿಯ ಅಭಿಯಾನದ ತಂತ್ರವನ್ನೇ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ಆಮ್ ಆದ್ಮಿ ಪಕ್ಷ (ಆಪ್) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸುತ್ತಿದೆ.
‘ಮೋದಿ ಬಾಲ್ಯದಲ್ಲಿ ಚಹಾ ಮಾರಿದ್ದರು’ ಎಂಬುದನ್ನು ದೇಶದಾದ್ಯಂತ ಪ್ರಚುರಪಡಿಸಲು ‘ಚಾಯ್ ಪೇ ಚರ್ಚಾ’ ಅಭಿಯಾನ ಆರಂಭಿಸಿದ್ದ ಬಿಜೆಪಿಯ ರೀತಿಯಲ್ಲೇ ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿ ‘ಕಾಮ್ ಕಿ ಚಾಯ್’(ಕೆಲಸದ ಚಹಾ) ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಆರಂಭಿಸಿದೆ.
ಎಂಬಿಎ ಪದವೀಧರರಾಗಿರುವ ಅಹಮದಾಬಾದ್‌ನ ಪ್ರಫುಲ್ ಬಿಲ್ಲೋರ್ ಎಂಬ ಯುವಕ ಕೇಜ್ರಿವಾಲ್ ಅವರನ್ನು ಸಂಪರ್ಕಿಸಿ ಚಹಾ ಅಂಗಡಿಯ ಮೂಲಕ ಪಕ್ಷದ ಸಾಧನೆಯ ಪ್ರಚಾರದ ಉಪಾಯ ನೀಡಿದರು. ಕೇಜ್ರೀವಾಲ್ ನೇತೃತ್ವದ ಆಪ್ ಸರ್ಕಾರದ ಸಾಧನೆಯನ್ನು ಸಾರುವ ಮೂರು ರೀತಿಯ ಚಹಾ ಈ ‘ಕಾಮ್ ಕಿ ಚಾಯ್’ ಸ್ಟಾಲ್‌ಗಳಲ್ಲಿ ಸಿಗುತ್ತವೆ.
ಇಲ್ಲಿನ ಎಲ್ಲ 70 ವಿಧಾನಸಭೆ ಕ್ಷೇತ್ರಗಳಲ್ಲಿನ ಪ್ರಮುಖ ಬೀದಿಗಳಲ್ಲಿ ಚಹಾ ಅಂಗಡಿಗಳು ಇರಲಿದ್ದು, 30 ರಿಂದ 40 ಜನ ಸ್ವಯಂ ಸೇವಕರು ಜನತೆಗೆ ಚಹಾ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
‘ಶಿಕ್ಷಾವಾಲಿ ಚಾಯ್ ’(ಶಿಕ್ಷಣದ ಚಹಾ), ‘ಸ್ವಾಸ್ಥ್ಯವಾಲಿ ಚಾಯ್’ (ಆರೋಗ್ಯದ ಚಹಾ) ಹಾಗೂ ‘ವಿಕಾಸ್‌ವಾಲಿ ಚಾಯ್’ (ಅಭಿವೃದ್ಧಿಯ ಚಹಾ) ಎಂದು ಹೆಸರಿಸಲಾದ ಚಹಾವನ್ನು ಮತದಾರರಿಗೆ ನೀಡುತ್ತಿದ್ದಾರೆ.
ಉದ್ಯೋಗ ತ್ಯಜಿಸಿ ಅಹಮದಾಬಾದ್‌ನಲ್ಲಿ ‘ಎಂಬಿಎ–ಮಿಸ್ಟರ್ ಬಿಲ್ಲೋರ್ ಚಾಯ್‌ವಾಲಾ’ ಎಂಬ ಸ್ಟಾಲ್ ಆರಂಭಿಸಿ ಜನಪ್ರಿಯವಾಗಿರುವ ಪ್ರಫುಲ್, ಚುನಾವಣೆ ಸಂದರ್ಭ ಕೇಜ್ರೀವಾಲ್ ಅವರಿಗೆ ಸಹಾಯ ಮಾಡಲೆಂದೇ ದೆಹಲಿಗೆ ಬಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.