ಶನಿವಾರ, ನವೆಂಬರ್ 23, 2019
17 °C

ವಕೀಲರು–ಪೊಲೀಸರ ಮಾರಾಮಾರಿ: ತನಿಖೆಗೆ ಕೋರ್ಟ್‌ ಆದೇಶ

Published:
Updated:

ನವದೆಹಲಿ: ತೀಸ್‌ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ಶನಿವಾರ ನಡೆದ ಮಾರಾಮಾರಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್‌ ಭಾನುವಾರ ಆದೇಶಿಸಿದೆ.

ಮಾಧ್ಯಮ ವರದಿಗಳನ್ನು ಗಮನಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮುಖ್ಯನ್ಯಾಯಮೂರ್ತಿ ಡಿ.ಎನ್‌. ಪಟೇಲ್‌ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್‌ ಅವರನ್ನೊಳಗೊಂಡ ಪೀಠವು, ನಿವೃತ್ತ ನ್ಯಾಯಮೂರ್ತಿ ಎಸ್‌.ಪಿ. ಗರ್ಗ್‌ ಅವರು ನ್ಯಾಯಾಂಗ ತನಿಖೆ ನಡೆಸಲಿದ್ದಾರೆ ಎಂದು ಹೇಳಿದೆ.

ತನಿಖೆ ನಡೆಯುತ್ತಿರುವ ಅವಧಿಯಲ್ಲಿ ದೆಹಲಿಯ ವಿಶೇಷ ಆಯುಕ್ತ ಸಂಜಯ್‌ ಸಿಂಗ್‌ ಮತ್ತು ಹೆಚ್ಚುವರಿ ಡಿಸಿಪಿ ಹರಿಂದರ್‌ ಸಿಂಗ್‌ ಅವರನ್ನು ವರ್ಗಾವಣೆ ಮಾಡುವಂತೆ ದೆಹಲಿ ಪೊಲೀಸ್‌ ಆಯುಕ್ತರಿಗೆ ಪೀಠವು ನಿರ್ದೇಶಿಸಿದೆ. ಅಲ್ಲದೆ ಯಾವುದೇ ವಕೀಲರ ವಿರುದ್ಧ ದಬ್ಬಾಳಿಕೆಯ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದೂ ಪೀಠ ಹೇಳಿದೆ.

ಶನಿವಾರ ಮಧ್ಯಾಹ್ನ ತೀಸ್‌ ಹಜಾರಿ ನ್ಯಾಯಾಲಯ ಆವರಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿತ್ತು. ಇದರಲ್ಲಿ 20 ಮಂದಿ ಪೊಲೀಸ್‌ ಸಿಬ್ಬಂದಿ ಮತ್ತು ವಕೀಲರು ಗಾಯಗೊಂಡಿದ್ದರು.

ಪ್ರತಿಕ್ರಿಯಿಸಿ (+)