ಶನಿವಾರ, ಏಪ್ರಿಲ್ 4, 2020
19 °C

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರಿದ ಕೊನೆಯ ಕ್ಷಣಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ತಿಹಾರ್‌ ಜೈಲ್‌): ದೇಶದಾದ್ಯಂತ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ. ಈ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ನಾಲ್ವರನ್ನು ಇಂದು ಮುಂಜಾನೆ 5:30ರ ಸುಮಾರಿಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. 

ಮರಣದಂಡನೆಯ ಅಂತಿಮ ಕ್ಷಣಗಳಲ್ಲಿ ತಿಹಾರ್‌ ಜೈಲಿನಲ್ಲಿ ನಡೆದ ಬೆಳವಣಿಗೆಗಳ ಬಗೆಗಿನ ಮಾಹಿತಿ ಇಲ್ಲಿದೆ.

ಇಂದು ನಸುಕಿನ ಸುಮಾರು 3 ಗಂಟೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಬಗ್ಗೆ ವಾದ–ವಿವಾದಗಳು ಆರಂಭಗೊಂಡವು. 3:50ಕ್ಕೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಂಡು, ಗಲ್ಲಿ ಶಿಕ್ಷೆ ಕಾಯಂಗೊಳಿಸಿ ತೀರ್ಪು ನೀಡಲಾಯಿತು. ಆ ವೇಳೆ, ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ ಮತ್ತು ನಿರ್ಭಯಾ ತಂದೆ–ತಾಯಿಗಳು ಸುಪ್ರೀಂ ಕೋರ್ಟ್‌ನಲ್ಲೇ ಭಾವುಕರಾದರು. 

ನಸುಕಿನ ಜಾವ 5.15ರ ಸುಮಾರಿಗೆ ಅಪರಾಧಿಗಳಿಗೆ ನ್ಯಾಯಾಲಯ ಜಾರಿ ಮಾಡಿದ್ದ ಡೆತ್ ವಾರಂಟ್‌ಗೆ ಸಹಿ ಮ್ಯಾಜಿಸ್ಟ್ರೇಟ್ ಹಾಕಿದರು. 

ಆ ನಂತರ ಜೈಲು ಕೋಣೆಯಲ್ಲಿ ಮಲಗಿದ್ದ ಅಪರಾಧಿಗಳನ್ನು ಎಬ್ಬಿಸಿ ಸ್ನಾನ ಮಾಡಲು ಸೂಚಿಸಲಾಯಿತು. ಪ್ರತಿ ಅಪರಾಧಿಯ ಜೊತೆಗೆ 6 ಮಂದಿ ಜೈಲು ಸಿಬ್ಬಂದಿಯನ್ನು ಕಾವಲಿಗಾಗಿ ನಿಯೋಜಿಸಲಾಗಿತ್ತು.

ಸ್ನಾನದ ನಂತರ ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿ 5:25ಕ್ಕೆ ಅಪರಾಧಿಗಳನ್ನು ವಧಾ ಸ್ಥಳಕ್ಕೆ ಕರೆತರಲಾಯಿತು. 

ಮೊದಲೇ ಸಿದ್ಧಪಡಿಸಲಾಗಿದ್ದ ನಾಲ್ಕು ಪ್ರತ್ಯೇಕ ನೇಣುಗಂಬಗಳ ಮುಂದೆ ಅಪರಾಧಿಗಳನ್ನು ಕರೆತಂದು ನಿಲ್ಲಿಸಲಾಯಿತು. 5:30ಕ್ಕೆ ಅವರನ್ನು ಗಲ್ಲಿಗೇರಿಸಲಾಯಿತು. 

ಇದಾದ ಮೂರು ನಿಮಿಷಗಳ ನಂತರ, '2012ರ ದೆಹಲಿ ಅತ್ಯಾಚಾರ ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು' ಎಂದು ತಿಹಾರ್ ಜೈಲಿನ ಮಹಾನಿರ್ದೇಶಕ ಸಂದೀಪ್ ಗೋಯೆಲ್ ಹೇಳಿಕೆ ನೀಡಿದರು. 

ನೇಣುಗಂಬದಲ್ಲಿ ಜೀವಬಿಟ್ಟ ಅಪರಾಧಿಗಳ ಮರಣೋತ್ತರ ಪರೀಕ್ಷೆಯನ್ನು 6 ಗಂಟೆಗೆ ನಡೆಸಲಾಯಿತು.‌

ಮರಣೋತ್ತರ ಪರೀಕ್ಷೆ 6:10ಕ್ಕೆ ಮುಕ್ತಾಯಗೊಂಡಿತು. ವೈದ್ಯರು ಅಪರಾಧಿಗಳ ಸಾವನ್ನು  ದೃಢಪಡಿಸಿದರು.

ಇಲ್ಲಿಗೆ ದೇಶದ ಅತಿ ಪ್ರಮುಖ ಅಪರಾಧವೊಂದಕ್ಕೆ ತೆರೆಬಿದ್ದಿತ್ತು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು