ಬುಧವಾರ, ಏಪ್ರಿಲ್ 1, 2020
19 °C
ಕ್ರೌರ್ಯದ ಕ್ಷಣಗಳನ್ನು ನೆನೆದು ನಲುಗುವ ಕರವಾನ್‌ನಗರ ನಿವಾಸಿ

ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡೆವು: ದೆಹಲಿ ಕರವಾನ್‌ನಗರ ನಿವಾಸಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ :‘ಬುಧವಾರ ರಾತ್ರಿ ಗುಂಪೊಂದು ನಮ್ಮ ಮನೆ ಮೇಲೆ ದಾಳಿ ನಡೆಸಿತು. ನಾನು ಮತ್ತು ನನ್ನಿಬ್ಬರು ಹೆಣ್ಣುಮಕ್ಕಳು ದುಪ್ಪಟಾ ಕಟ್ಟಿಕೊಂಡು ಮೊದಲನೇ ಮಹಡಿಯಿಂದ ಜಿಗಿದೆವು. ಮುಸ್ಲಿಮರೇ ಹೆಚ್ಚಾಗಿರುವ ರಸ್ತೆ ಸಿಗುವವರೆಗೆ ಓಡಿ, ನಮ್ಮ ಪ್ರಾಣ ಉಳಿಸಿಕೊಂಡೆವು’

– ಈಶಾನ್ಯ ದೆಹಲಿಯ ಕಮಾಲ್‌ನಗರದಲ್ಲಿ ಎನ್‌ಜಿಒ ನಡೆಸುತ್ತಿರುವ 45 ವರ್ಷದ ಮಹಿಳೆಯೊಬ್ಬರು ಕ್ರೌರ್ಯದ ಆ ಕ್ಷಣಗಳನ್ನು ಮೆಲುಕು ಹಾಕಿದ್ದು ಹೀಗೆ.

ಆಘಾತಕ್ಕೆ ಒಳಗಾಗಿರುವ ಮಹಿಳೆಗೆ ಅಲ್‌ ಹಿಂದ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ನಾನು ಮನೆಯಲ್ಲಿದ್ದೆ. ಮನೆ ಹೊಕ್ಕ ಗುಂಪು, ನನಗೆ ಮತ್ತು ನನ್ನಿಬ್ಬರು ಹೆಣ್ಣುಮಕ್ಕಳಿಗೆ ಪೀಡಿಸಲು ಆರಂಭಿಸಿತು. ನಮ್ಮ ಬಟ್ಟೆಗಳನ್ನೂ ಹರಿಯಿತು’ ಎಂದು ಹೇಳಿದರು.

‘ಮೊದಲ ಮಹಡಿಯಿಂದ  ಜಿಗಿದು ನಾವು ಓಡಲಾರಂಭಿಸಿದವು. ಕೆಲ ದೂರದ ವರೆಗೆ ಬೆನ್ನಟ್ಟಿದ ಆ ಗುಂಪು ನಂತರ ಕಣ್ಮರೆಯಾಯಿತು. ನಮಗೆ ಪರಿಚಿತ ಅಯೂಬ್‌ ಅಹ್ಮದ್‌ ಎಂಬುವವರ ಮನೆಯಲ್ಲಿ ಆಶ್ರಯ ಪಡೆದೆವು. ಅವರೇ ನಮಗೆ ಆ ರಾತ್ರಿ ಊಟ, ಬಟ್ಟೆ ಒದಗಿಸಿದರು. ಅವರೇ ನಮನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದರು.

20ರ ಹರೆಯ ಸಲ್ಮಾನ್‌ ಖಾನ್‌ ಸಹ ಗುಂಪು ನಡೆಸಿದ ದಾಳಿಯ ಭೀಕರತೆಯನ್ನು ವಿವರಿಸುತ್ತಾರೆ. ‘ಮಂಗಳವಾರ ರಾತ್ರಿ ನನ್ನ ಮನೆ ಹತ್ತಿರ ನಿಂತಿದ್ದೆ. ನನ್ನ ಮೇಲೆ ದಾಳಿ ನಡೆಸಿದ ಗುಂಪೊಂದು ನನ್ನ ಬೆನ್ನ ಮೇಲೆ ರಾಸಾಯನಿಕವೊಂದನ್ನು ಸುರಿಯಿತು. ಅದರ ಪರಿಣಾಮ ಚರ್ಮ ಸುಟ್ಟು ಹೋಗಿದೆ’ ಎಂದು ಕಣ್ಣೀರಿಡುತ್ತಾರೆ.

ಅಕಿಲ್‌ ಸೈಫಿ (30) ತಮ್ಮ ಮೇಲೆ ನಡೆದ ಹಲ್ಲೆಯನ್ನು ವಿವರಿಸಿ, ‘ನನ್ನ ಎಡಗೈ ಮುರಿದಿದೆ. ನನ್ನ ಬೈಕ್‌ ಹಿಂದೆ ಕುಳಿತಿದ್ದ ಗೆಳೆಯ ಬಿಲಾಲ್‌ಗೂ ಗಾಯಗಳಾಗಿವೆ’ ಎಂದು ಹೇಳಿದರು.

‘ನಮ್ಮ ಆಸ್ಪತ್ರೆಗೆ ದಾಖಲಾದವರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿದ್ದೇವೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ’ ಎಂದು ಅಲ್‌ ಹಿಂದ್‌ ಆಸ್ಪತ್ರೆಯ ವೈದ್ಯ ಮೆಹ್ರಾಜ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು