ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್‌ಗಾಗಿ ಸಿಬಿಐ ತನಿಖೆಯ ದಾರಿ ತಪ್ಪಿಸಿದರೇ ಅಸ್ತಾನಾ?

Last Updated 30 ಅಕ್ಟೋಬರ್ 2018, 20:29 IST
ಅಕ್ಷರ ಗಾತ್ರ

ಪಟ್ನಾ: ‘ಈ ವ್ಯಕ್ತಿಗೆ ಅಪ್ರಾಮಾಣಿಕನಾಗುವ ಸಾಮರ್ಥ್ಯವೇ ಇಲ್ಲ’– 1990ರ ದಶಕದ ಕೊನೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಹೀಗೆ ಹೇಳಿದವರು ಆಗ ಸಿಬಿಐನ ಜಂಟಿ ನಿರ್ದೇಶಕರಾಗಿದ್ದ ಯು.ಎನ್‌. ಬಿಸ್ವಾಸ್‌. ಆಗ ಸಿಬಿಐಯಲ್ಲಿ ಎಸ್‌ಪಿ ಆಗಿದ್ದ ಕಿರಿಯ ಸಹೋದ್ಯೋಗಿ ರಾಕೇಶ್‌ ಅಸ್ತಾನಾ ಬಗ್ಗೆ ಈ ಅಭಿಪ್ರಾಯವನ್ನು ಅವರು ಆಗ ವ್ಯಕ್ತಪಡಿಸಿದ್ದರು.

ಅಸ್ತಾನಾ 1984ರ ತಂಡದ ಐಪಿಎಸ್‌ ಅಧಿಕಾರಿ. ಎಲ್ಲ ರಾಜಕೀಯ ಒತ್ತಡವನ್ನೂ ಮೀರಿ ನಿಂತು ₹950 ಕೋಟಿ ಭ್ರಷ್ಟಾಚಾರದ ಮೇವು ಹಗರಣದಲ್ಲಿ ಲಾಲು ಪ್ರಸಾದ್‌ ಅವರನ್ನು ಸತತ ಆರು ತಾಸು ವಿಚಾರಣೆ ನಡೆಸಿದ ಅಸ್ತಾನಾ ಆರೋಪಪಟ್ಟಿಯನ್ನೂ ಸಲ್ಲಿಸಿದರು. ಈ ಆರೋಪಪಟ್ಟಿಯೇ ಲಾಲು ಅವರ ರಾಜಕೀಯ ಸ್ಥಾನಗಳನ್ನು ಕಿತ್ತುಕೊಂಡಿತು.

ಎರಡು ದಶಕಗಳ ಬಳಿಕ ಅದೇ ಅಸ್ತಾನಾ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ. ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಜತೆಗೆ ಬೀದಿ ಕಾಳಗಕ್ಕೆ ನಿಂತಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ರಕ್ಷಿಸುವುದಕ್ಕಾಗಿ ₹1,500 ಕೋಟಿ ಅವ್ಯವಹಾರದ ಶ್ರೀಜನ್‌ ಹಗರಣದ ತನಿಖೆಯನ್ನೇ ಹಾದಿ ತಪ್ಪಿಸಿದ ಆಪಾದನೆಯೂ ಅಸ್ತಾನಾ ವಿರುದ್ಧ ಕೇಳಿ ಬಂದಿದೆ.

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಒಂದು ಟ್ವೀಟ್‌ ಈಗ ಹಲವು ಪ್ರಶ್ನೆಗಳನ್ನು ಎತ್ತಿದೆ. ಆ ಟ್ವೀಟ್‌ ಹೀಗಿದೆ: ‘ದೊಡ್ಡ ಬ್ರೇಕಿಂಗ್ ಸುದ್ದಿ: ಮಹಾ ಮೈತ್ರಿಕೂಟದಿಂದ ಎನ್‌ಡಿಎಗೆ ನಿಷ್ಠೆ ಬದಲಾಯಿಸುವುದಕ್ಕಾಗಿ ₹2,500 ಕೋಟಿ ಅವ್ಯವಹಾರದ ಶ್ರೀಜನ್‌ ಹಗರಣದಿಂದ ನಿತೀಶ್‌ ಕುಮಾರ್‌ ಅವರನ್ನು ಅಸ್ತಾನಾ ರಕ್ಷಿಸಿದರೇ? ಶ್ರೀಜನ್‌ ಹಗರಣದ ಮುಖ್ಯ ಆರೋಪಿಗಳನ್ನು ಸಿಬಿಐ ಇನ್ನೂ ಬಂಧಿಸಿಲ್ಲ. ರಾಜ್ಯದ ಬೊಕ್ಕಸದಿಂದ ₹2,500 ಕೋಟಿಯನ್ನು ಶ್ರೀಜನ್‌ ಎನ್‌ಜಿಒದ ಖಾತೆಗೆ ಮುಖ್ಯಮಂತ್ರಿಯವರು ವರ್ಗಾಯಿಸಿದ್ದಾರೆ’.

ತಿರುವು:ಸಿಬಿಐಯ ಹೆಚ್ಚುವರಿ ಎಸ್‌ಪಿ ಎಸ್‌.ಕೆ. ಮಲಿಕ್‌ ಅವರು 20 ಸದಸ್ಯರ ತಂಡದ ಜತೆಗೆ ತನಿಖೆ ಆರಂಭಿಸಿದರು. ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ಇರುವ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಬಂಧನ ವಾರಂಟ್‌ ಹೊರಡಿಸುವಂತೆ ಮಲಿಕ್‌ ಅವರು ಸಿಬಿಐ ನ್ಯಾಯಾಲಯವನ್ನು ಕೋರಿದರು. ಆದರೆ, ಮಲಿಕ್‌ ಅವರಿಗೆ ದಿಢೀರ್‌ ವರ್ಗಾವಣೆಯಾಯಿತು. ಸಿಬಿಐಯ ಹಿರಿಯ ಅಧಿಕಾರಿಯೊಬ್ಬರ ಒತ್ತಾಸೆಯಂತೆ ಈ ವರ್ಗಾವಣೆ ನಡೆಯಿತು ಎಂದು ಹೇಳಲಾಗುತ್ತಿದೆ.

ಮಲಿಕ್‌ ಅವರು ತನಿಖೆ ನಡೆಸುತ್ತಿದ್ದ ನಾಲ್ವರು ರಾಜಕಾರಣಿಗಳಲ್ಲಿ ಒಬ್ಬರು ಮಾಜಿ ಕೇಂದ್ರ ಸಚಿವರಾದರೆ ಮತ್ತೊಬ್ಬರು ಜಾರ್ಖಂಡ್‌ನಿಂದ ಬಿಜೆಪಿಯ ಲೋಕಸಭಾ ಸದಸ್ಯರು. ಒಬ್ಬರು ಬಿಜೆಪಿಯ ಮಾಜಿ ಸಂಸದರಾದರೆ ಇನ್ನೊಬ್ಬರು ಜೆಡಿಯುನ ಮುಖಂಡ.

ಐವರು ಐ.ಎ.ಎಸ್‌. ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಲು ಮಲಿಕ್‌ ಬಯಸಿದ್ದರು. ಇವರೆಲ್ಲರೂ ಹಿಂದೆ ಭಾಗಲ್ಪುರದ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ್ದವರು. ಇವರಲ್ಲಿ ಒಬ್ಬರು ಸ್ವಯಂ ನಿವೃತ್ತಿ ಪಡೆದು 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದವರು.

‘ಮನೋರಮಾ ದೇವಿ ಅವರ ಮಗ ಅಮಿತ್‌ ಕುಮಾರ್‌ ಮತ್ತು ಸೊಸೆ ಪ್ರಿಯಾ ಕುಮಾರ್‌ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಒಂದು ವರ್ಷದ ಹಿಂದೆ ಅವರ ವಿರುದ್ಧ ವಾರಂಟ್‌ ಹೊರಡಿಸಲಾಗಿದ್ದರೂ ಬಂಧನ ಆಗಿಲ್ಲ ಎಂಬುದನ್ನು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟ’ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಶಿವಾನಂದ ತಿವಾರಿ ಹೇಳುತ್ತಾರೆ.

ಜಾರ್ಖಂಡ್‌ ಮೂಲದ ಸಿಬಿಐಯ ಹಿರಿಯ ಅಧಿಕಾರಿ ಜತೆಗಿನ ಬಾಂಧವ್ಯದಿಂದಾಗಿಯೇ ಅವರು ಬಂಧನದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಲಾಲು ಅವರು ಇತ್ತೀಚೆಗೆ ಮಾಡಿದ ಟ್ವೀಟ್‌ ಹೀಗಿದೆ: ‘ಅಸ್ತಾನಾ ಅವರು ಮೋದಿ ಮತ್ತು ಬಳಗದ ಮೇಲೆ ಹೊಂದಿರುವ ನಿಷ್ಠೆಯು ಭಾರತದ ಸಂವಿಧಾನದ ಬಗ್ಗೆ ಹೊಂದಿರುವ ನಿಷ್ಠೆಗಿಂತ ಹೆಚ್ಚು’.

ಲಾಲು ಅವರ ಆಪ್ತ ಶಕ್ತಿ ಯಾದವ್‌ ಅವರ ಪ್ರತಿಕ್ರಿಯೆ ಇನ್ನಷ್ಟು ನೇರವಾಗಿದೆ: ‘ನಿತೀಶ್‌, ಅಡ್ವಾಣಿ ಮತ್ತು ಸುಶೀಲ್‌ ಮೋದಿ ಜತೆ ಸೇರಿ ಇದೇ ಅಸ್ತಾನಾ ಅವರು ಲಾಲು ಅವರನ್ನು ಸಂಚುಕೋರ ಮಾಡಿದ್ದರು. ಗೋಧ್ರಾ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ದೋಷಮುಕ್ತಗೊಳಿಸಿದ್ದೂ ಇದೇ ಅಸ್ತಾನಾ’.

ಏನಿದು ಶ್ರೀಜನ್‌ ಹಗರಣ?

ಈ ಅವ್ಯವಹಾರ 2017ರ ಆಗಸ್ಟ್‌ 3ರಂದು ಬೆಳಕಿಗೆ ಬಂತು. ಸರ್ಕಾರದ ಬೊಕ್ಕಸದ ಸುಮಾರು ₹500 ಕೋಟಿಯಷ್ಟು ಹಣ ಶ್ರೀಜನ್‌ ಎನ್‌ಜಿಒಗೆ ಸೋರಿಕೆಯಾಗಿದೆ ಎಂಬುದನ್ನು ಭಾಗಲ್ಪುರ ಜಿಲ್ಲಾಧಿಕಾರಿ ಅದೇಶ್‌ ತಿತರ್‌ಮರೆ ಪತ್ತೆ ಮಾಡಿದರು.

ಭೂ ಸ್ವಾಧೀನ (₹270 ಕೋಟಿ), ನಗರಾಭಿವೃದ್ಧಿ ಯೋಜನೆಗಳು (₹70.7 ಕೋಟಿ) ಮತ್ತು ಜಿಲ್ಲಾಡಳಿತ (₹15 ಕೋಟಿ) ಖಾತೆಗಳಿಂದ ಒಟ್ಟು ₹355.7 ಕೋಟಿ ಶ್ರೀಜನ್‌ ಸಹಯೋಗ್‌ ಮಹಿಳಾ ಸಮಿತಿಗೆ ಹೋಗಿದೆ ಎಂಬುದು ಉನ್ನತ ಮಟ್ಟದ ತನಿಖೆಯಿಂದ ತಿಳಿದು ಬಂತು.

ಸಾಮಾಜಿಕ ಕಾರ್ಯಕರ್ತೆ ದಿ. ಮನೋರಮಾ ದೇವಿ ಅವರು ಶ್ರೀಜನ್‌ನ ಸ್ಥಾಪಕಿ. ಪ್ರಭಾವಿ ರಾಜಕಾರಣಿಗಳ ಜತೆಗೆ ನಿಕಟ ಸಂಬಂಧವಿದೆ ಎಂದು ತೋರಿಸಿಕೊಂಡೇ ಸಂಸ್ಥೆಯನ್ನು ಅವರು ವಿಸ್ತರಿಸಿದ್ದರು ಎಂದು ಹೇಳಲಾಗುತ್ತಿದೆ.

ಪೊಲೀಸರು ಒಂಬತ್ತು ಎಫ್‌ಐಆರ್‌ ದಾಖಲಿಸಿದ್ದಾರೆ. ಭಾಗಲ್ಪುರ ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಪ್ರೇಮ್‌ ಕುಮಾರ್‌ ಸೇರಿ 17 ಮಂದಿಯನ್ನು ಬಂಧಿಸಲಾಗಿದೆ. ಬಳಿಕ, ಅವ್ಯವಹಾರದ ಮೊತ್ತ ಸಾವಿರ ಕೋಟಿ ರೂಪಾಯಿಯನ್ನೂ ಮೀರಿದೆ ಎಂಬುದು ತಿಳಿಯಿತು. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆದೇಶಿಸಿದರು.

ಸುಪ್ರೀಂಕೋರ್ಟ್‌ಗೆ ಇನ್ನಷ್ಟು ಪುರಾವೆ ಸಲ್ಲಿಕೆ

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರು ‘ನಮ್ಮ ವ್ಯಕ್ತಿ’ ಎಂದು ಶಂಕಿತ ದಲ್ಲಾಳಿಯೊಬ್ಬ ತನ್ನ ಮಾವನಿಗೆ ಹೇಳಿದ್ದು, ‘ಯಾವ ಕಾರಣಕ್ಕೂ ಭಾರತಕ್ಕೆ ಬರಬೇಡಿ’ ಎಂದು ಅದೇ ದಲ್ಲಾಳಿಗೆ ಭಾರತದ ಗುಪ್ತಚರ ಘಟಕ ‘ರಾ’ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯ ಧ್ವನಿ ಮುದ್ರಿಕೆಗಳನ್ನು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಸಲ್ಲಿಸಲಾಗಿದೆ.

ಅಸ್ತಾನಾ, ‘ರಾ’ ವಿಶೇಷ ಕಾರ್ಯದರ್ಶಿ ಸಮಂತ್ ಗೋಯಲ್‌ ಮತ್ತು ಶಂಕಿತ ದಲ್ಲಾಳಿಗಳಾದ ಮನೋಜ್‌ ಪ್ರಸಾದ್ ಮತ್ತು ಸೋಮೇಶ್‌ ಪ್ರಸಾದ್ ನಡುವಣ ದೂರವಾಣಿ ಸಂಭಾಷಣೆಗಳ ಧ್ವನಿಮುದ್ರಿಕೆಗಳು ಸಿಬಿಐಯ ಡಿಎಸ್‌ಪಿ ಎ.ಕೆ. ಬಸ್ಸಿ ಅವರು ಸಲ್ಲಿಸಿರುವ ಅರ್ಜಿಯ ಭಾಗವಾಗಿವೆ. ಅಸ್ತಾನಾ ವಿರುದ್ಧದ ಲಂಚದ ಆರೋಪಗಳ ಬಗ್ಗೆ ಪೋರ್ಟ್‌ಬ್ಲೇರ್‌ಗೆ ವರ್ಗಾವಣೆಯಾಗುವ ಮೊದಲು ಬಸ್ಸಿ ಅವರು ತನಿಖೆ ನಡೆಸುತ್ತಿದ್ದರು.

ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಬಸ್ಸಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು ಸಂಗ್ರಹಿಸಿದ ಪುರಾವೆಗಳನ್ನು ಈಗಿನ ತನಿಖಾಧಿಕಾರಿ ಸತೀಶ್‌ ಡಾಗರ್‌ ಅವರು ನಾಶ ಮಾಡುವ ಅಪಾಯ ಇದೆ ಎಂದೂ ಬಸ್ಸಿ ಹೇಳಿದ್ದಾರೆ.

ಅಸ್ತಾನಾ, ಸಿಬಿಐ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಮತ್ತು ಪ್ರಸಾದ್‌ ಸಹೋದರರ ವಿರುದ್ಧ ಬಸ್ಸಿ ಅವರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಮಾಂಸ ರಫ್ತು ವ್ಯಾಪಾರಿ ಮೊಯಿನ್‌ ಖುರೇಷಿ ವಂಚನೆ ಪ್ರಕರಣದಲ್ಲಿ ಈ ಎಲ್ಲರ ವಿರುದ್ಧ ವಂಚನೆ ಮತ್ತು ಲಂಚ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೈದರಾಬಾದ್‌ನ ಉದ್ಯಮಿ ಸತೀಶ್‌ ಸನ ಅವರಿಂದ ಅಸ್ತಾನಾ ಲಂಚ ಪಡೆದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಇಡೀ ಕತೆಗೆ ಇನ್ನೊಂದು ಆಯಾಮವೂ ಇದೆ. ಅಸ್ತಾನಾ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿರುವ ದೇವೇಂದರ್‌ ಅವರು, ವರ್ಮಾ ಲಂಚ ಪಡೆದಿದ್ದಾರೆ ಎಂಬ ಸತೀಶ್‌ ಸನ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅಸ್ತಾನಾ ಅವರ ವಾದವನ್ನು ಬಸ್ಸಿ ಅಲ್ಲಗಳೆದಿದ್ದಾರೆ. ಅಲೋಕ್‌ ಅವರು ಲಂಚ ಪಡೆದಿದ್ದಾರೆ ಎಂದು ಸನ ಅವರು ಸೆ. 26ರಂದು ಹೇಳಿಕೆ ನೀಡಿದ್ದಾರೆ ಎಂದು ದೇವೇಂದರ್‌ ಹೇಳಿದ್ದಾರೆ. ಆದರೆ, ಅಂದು ಸನ ಅವರು ಹೈದರಾಬಾದ್‌ನಲ್ಲಿ ಇದ್ದರು ಎಂದು ತಮ್ಮ ದೂರಿನಲ್ಲಿ ಬಸ್ಸಿ ವಿವರಿಸಿದ್ದಾರೆ.

ಉದ್ಯಮಿಗೆ ರಕ್ಷಣೆ ಕೊಡಲು ನಿರ್ದೇಶನ

ಅಸ್ತಾನಾ ವಿರುದ್ಧ ದೂರು ನೀಡಿರುವ ಸತೀಶ್‌ ಸನ ಅವರಿಗೆ ಸಾಕಷ್ಟು ಭದ್ರತೆ ಒದಗಿಸಬೇಕು ಎಂದು ಹೈದರಾಬಾದ್‌ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಸನ ಅವರಿಗೆ ಸಿಬಿಐ ನೀಡಿರುವ ಸಮನ್ಸ್‌ ರದ್ದುಪಡಿಸಬೇಕು ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್‌ ಅವರ ಸಮ್ಮುಖದಲ್ಲೇ ಅವರ ಹೇಳಿಕೆ ದಾಖಲಿಸುವಂತೆ ಸಿಬಿಐಗೆ ಸೂಚಿಸಬೇಕು ಎಂಬ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ತಳ್ಳಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT