ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರ: ಬಗೆಹರಿಯದ ಬಿಕ್ಕಟ್ಟು

ಬಹಿರಂಗ ಚರ್ಚೆಗೆ ವೈದ್ಯರ ಪಟ್ಟು; ಇಂದು ದೇಶವ್ಯಾಪಿ ಮುಷ್ಕರ
Last Updated 16 ಜೂನ್ 2019, 19:34 IST
ಅಕ್ಷರ ಗಾತ್ರ

ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರವು ಭಾನುವಾರ ಆರನೇ ದಿನದಲ್ಲಿ ನಡೆದಿದ್ದು ಪ್ರತಿಭಟನಾನಿರತ ವೈದ್ಯರು– ಸರ್ಕಾರದ ನಡುವಿನ ಮಾತುಕತೆ ಕುರಿತ ಅನಿಶ್ಚಿತತೆಯು ಮುಂದುವರಿದಿದೆ.

ಮುಖ್ಯಮಂತ್ರಿ ಜೊತೆಗೆ ರಾಜ್ಯ ಸಚಿವಾಲಯದ ಕೊಠಡಿಯಲ್ಲಿ ಪ್ರತ್ಯೇಕವಾಗಿ ಮಾತುಕತೆ ನಡೆಸಲು ತಮ್ಮ ಸುರಕ್ಷತೆಯ ನೆಪವೊಡ್ಡಿ ನಿರಾಕರಿಸಿದ್ದ ವೈದ್ಯರು, ಭಾನುವಾರ ತಮ್ಮ ನಿಲುವು ಸಡಿಲಿಸಿದರು. ‘ಅನಿಶ್ಚಿತತೆಗೆ ತೆರೆ ಎಳೆಯಲು ನಾವು ಉತ್ಸುಕರಾಗಿದ್ದೇವೆ. ಮಾತುಕತೆಯ ಸ್ಥಳವನ್ನು ಮುಖ್ಯಮಂತ್ರಿಯೇ ನಿಗದಿಪಡಿಸಲಿ. ಆದರೆ ಚರ್ಚೆ ಬಹಿರಂಗವಾಗಿ ನಡೆಯಬೇಕು. ಮಾಧ್ಯಮಗಳು ಅಲ್ಲಿ ಇರಬೇಕು’ ಎಂದು ವೈದ್ಯರು ಒತ್ತಾಯಿಸಿದರು.

ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ನೀಡಿದ್ದ ಆಹ್ವಾನವನ್ನು ಶನಿವಾರ ನಿರಾಕರಿಸಿದ್ದ ವೈದ್ಯರು, ಭಾನುವಾರ ತಮ್ಮ ಸಂಘದ ಆಡಳಿತ ಮಂಡಳಿಯ ಸಭೆ ಕರೆದು ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು. ಬಳಿಕ ಸುದ್ದಿಗೊಷ್ಠಿಯಲ್ಲಿ ಸಭೆಯ ತೀರ್ಮಾನವನ್ನು ಪ್ರಕಟಿಸಿದರು.

‘ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳ ಪ್ರತಿನಿಧಿಗಳು ಭಾಗವಹಿಸಲು ಅನುವಾಗುವಂತೆ ಸಭೆ ನಡೆಯುವ ಸ್ಥಳ ವಿಶಾಲವಾಗಿರಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸರ್ಕಾರವು ಬಿಕ್ಕಿಟ್ಟಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ರೋಗಿಗಳ ಹಿತದೃಷ್ಟಿಯಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಲಸಕ್ಕೆ ಮರಳಬೇಕಿದೆ’ ಎಂದರು.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂದು ಭಾವಿಸಿದ್ದೇವೆ. ಬೇಡಿಕೆಗಳು ಈಡೇರುವವರೆಗೂ ನಮ್ಮ ಮುಷ್ಕರ ಮುಂದುರಿಯಲಿದೆ’ ಎಂದು ಸಂಘದ ವಕ್ತಾರರು ಸ್ಪಷ್ಟಪಡಿಸಿದರು.

ಇಂದು ದೇಶವ್ಯಾಪಿ ಮುಷ್ಕರ
‘ನಿಗದಿಯಂತೆ ಸೋಮವಾರ (ಜೂನ್‌ 17) ವೈದ್ಯರ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ಹೊರರೋಗಿಗಳ ವಿಭಾಗವೂ ಸೇರಿದಂತೆ ತುರ್ತು ಅಲ್ಲದ ಎಲ್ಲ ಸೇವೆಗಳು ಸೋಮವಾರ ಬೆಳಿಗ್ಗೆ 6ಗಂಟೆಯಿಂದ 24 ಗಂಟೆಗಳ ಅವಧಿಗೆ ಸ್ಥಗಿತಗೊಳ್ಳಲಿವೆ’ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ತಿಳಿಸಿದೆ.

ತಮ್ಮ ಬೇಡಿಕೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಕರ್ತವ್ಯನಿರತ ವೈದ್ಯರಿಗೆ ರಕ್ಷಣೆ ಒದಗಿಸಲು ಕಠಿಣ ಕಾನೂನು ರೂಪಿಸಲು ಮನವಿ ಮಾಡಲಾಗಿದೆ ಎಂದು ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT