ಚುನಾವಣೆ ದಿನಾಂಕ ಶೀಘ್ರ ಪ್ರಕಟ

ಶನಿವಾರ, ಮಾರ್ಚ್ 23, 2019
21 °C

ಚುನಾವಣೆ ದಿನಾಂಕ ಶೀಘ್ರ ಪ್ರಕಟ

Published:
Updated:
Prajavani

ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಸದ್ಯದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಏಪ್ರಿಲ್–ಮೇ ತಿಂಗಳಲ್ಲಿ 7–8 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ.

ದಿನಾಂಕ ಹಾಗೂ ಇತ್ಯಾದಿ ವಿವರಗಳು ಇದೇ ವಾರದ ಕೊನೆ ಅಥವಾ ಮುಂದಿನ ಮಂಗಳವಾರದ ಒಳಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

17ನೇ ಲೋಕಸಭೆ ಚುನಾವಣೆ ನಡೆಸುವ ಸಂಬಂಧ ಚುನಾವಣಾ ಆಯೋಗವು ದೇಶದಾದ್ಯಂತ ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಿದೆ. ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ದಿನಾಂಕ ಘೋಷಣೆಯಾದ ಬಳಿಕ ಮೊದಲ ಹಾಗೂ ಎರಡನೇ ಹಂತದ ಮತದಾನದ ಬಗ್ಗೆ ಚರ್ಚಿಸಲು ಚುನಾವಣಾ ವೀಕ್ಷಕರ ಸಭೆ ನಡೆಯಲಿದೆ. ಮಾರ್ಚ್‌ ಕೊನೆ ವೇಳೆಗೆ ಮೊದಲ ಹಂತದ ಅಧಿಸೂಚನೆ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಪ್ರಸಕ್ತ ಲೋಕಸಭೆಯ ಅವಧಿ ಜೂನ್‌ 3ರಂದು ಮುಕ್ತಾಯವಾಗಲಿದೆ. 2014ರಲ್ಲಿ ಮಾರ್ಚ್ 5ರಂದು ಚುನಾವಣಾ ದಿನಾಂಕವನ್ನು ಆಯೋಗ ಪ್ರಕಟಿಸಿತ್ತು. 

ವಿಧಾನಸಭೆಗಳಿಗೆ ಜತೆಗೆ ಮತದಾನ

ಈ ಬಾರಿ ಲೋಕಸಭಾ ಚುನಾವಣೆ ಜೊತೆ ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾ, ಅರುಣಾಚಲ ಪ್ರದೇಶ ವಿಧಾನಸಭೆಗಳಿಗೂ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. 

ವಿಸರ್ಜನೆಗೊಂಡಿರುವ ಜಮ್ಮು–ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ. ಆದರೆ ಭಾರತ–ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಕಾರಣ ಭದ್ರತೆ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿದೆ. ವಿಧಾನಸಭೆ ವಿಸರ್ಜನೆಯಾದ ಆರು ತಿಂಗಳೊಳಗೆ ಚುನಾವಣೆ ನಡೆಯಬೇಕಿರುವ ಕಾರಣ ಇದೇ ಮೇ ತಿಂಗಳೊಳಗೆ ಮತದಾನ ಆಗಬೇಕಿದೆ. 

ಕೇಂದ್ರ ಹಾಗೂ ರಾಜ್ಯದ ಆಡಳಿತಕ್ಕೆ (ರಾಜ್ಯಪಾಲರು) ಕಣಿವೆ ರಾಜ್ಯದಲ್ಲಿ ಒಟ್ಟಿಗೇ ಎರಡು ಚುನಾವಣೆ ನಡೆಸುವ ಬಗ್ಗೆ ಅಸಮ್ಮತಿಯಿದೆ. ಆದರೆ ಲೋಕಸಭೆ ಹಾಗೂ ವಿಧಾನಸಭೆಗೆ ಒಂದೇ ಬಾರಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗ ನಡೆಸಿದ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. 

ಆರು ವರ್ಷಗಳ ಜಮ್ಮು–ಕಾಶ್ಮೀರ ಸರ್ಕಾರದ ಅವಧಿಯು ಮಾರ್ಚ್ 16, 2021ರಲ್ಲಿ ಕೊನೆಯಾಗಬೇಕಿತ್ತು. ಆದರೆ ಬಿಜೆಪಿ–ಪಿಡಿಪಿ ಸರ್ಕಾರದ ಮೈತ್ರಿಯು ಅವಧಿಗೆ ಮುನ್ನವೇ ಮುರಿದುಬಿದ್ದಿತ್ತು. 

ಸಿಕ್ಕಿಂ ವಿಧಾನಸಭೆ ಅವಧಿಯು ಮೇ 27ರಂದು, ಆಂಧ್ರ ಪ್ರದೇಶ ಜೂನ್ 18, ಒಡಿಶಾ ಜೂನ್ 11, ಅರುಣಾಚಲ ಪ್ರದೇಶ ವಿಧಾನಸಭೆಯು ಜೂನ್ 1ರಂದು ಮುಕ್ತಾಯವಾಗಲಿವೆ. 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !