ವಿವಿಪ್ಯಾಟ್‌ ವೈಫಲ್ಯ ತಡೆಯಲು ಸಣ್ಣ ಬದಲಾವಣೆ: ರಾವತ್‌

7

ವಿವಿಪ್ಯಾಟ್‌ ವೈಫಲ್ಯ ತಡೆಯಲು ಸಣ್ಣ ಬದಲಾವಣೆ: ರಾವತ್‌

Published:
Updated:
Deccan Herald

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ಜತೆಗೆ ಬಳಸುವ ಮತ ದೃಢೀಕರಣ ರಸೀದಿ ಯಂತ್ರಗಳು (ವಿವಿಪ್ಯಾಟ್‌) ಪ್ರತಿಕೂಲ ಹವಾಮಾನದ ಕಾರಣಕ್ಕೆ ವಿಫಲವಾಗುವುದನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ತಿಳಿಸಿದ್ದಾರೆ.

ಕೆಟ್ಟ ಹವಾಮಾನ ಪರಿಸ್ಥಿತಿಯಲ್ಲಿ ವಿವಿಪ್ಯಾಟ್‌ಗಳಲ್ಲಿನ ಕಾಂಟ್ರಾಸ್ಟ್‌ ಸೆನ್ಸರ್‌ ಮತ್ತು ಪೇಪರ್‌ ರೋಲ್‌ (ಕಾಗದದ ಸುರುಳಿ) ತೇವಾಂಶದಿಂದ ಒದ್ದೆಯಾಗುವುದನ್ನು ತಡೆಯಲು ಅವುಗಳಿಗೆ ಸಣ್ಣ ರಕ್ಷಾ ಕವಚ ಅಳವಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಿವಿಪ್ಯಾಟ್‌ನ ಕಾಂಟ್ರಾಸ್ಟ್‌ ಸೆನ್ಸರ್‌ ಮೇಲೆ ನೇರ ಬೆಳಕು ಬೀಳುವುದರಿಂದ ವಿವಿಪ್ಯಾಟ್‌ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ತಜ್ಞರ ಸಮಿತಿ ಪತ್ತೆಹಚ್ಚಿತ್ತು. ಹಾಗಾಗಿ ವಿವಿಪ್ಯಾಟ್‌ಗಳಿಗೆ ಸಣ್ಣ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ರಾವತ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಾಧನವಾದ ವಿದ್ಯುನ್ಮಾನ ಮತಯಂತ್ರದ ಮೇಲೆ ಶಾಖ ಮತ್ತು ತೇವಾಂಶ ಪರಿಣಾಮ ಬೀರುವುದಿಲ್ಲ. ಆದರೆ, ವಿವಿಪ್ಯಾಟ್‌ ಒಳಗಿರುವ ಕಾಗದದ ಸುರುಳಿ ಮತ್ತು ಎಲೆಕ್ಟ್ರೊ-ಮೆಕ್ಯಾನಿಕಲ್ ಭಾಗಗಳ ಕಾರ್ಯದ ಮೇಲೆ ಶಾಖ ಮತ್ತು ತೇವಾಂಶ ಪರಿಣಾಮ ಉಂಟು ಮಾಡುತ್ತದೆ. ಹಾಗಾಗಿ ವಿವಿಪ್ಯಾಟ್‌ಗಳಿಗೆ ಸಣ್ಣ ರಕ್ಷಾ ಕವಚ ಅಳವಡಿಸಲಾಗುತ್ತಿದೆ. ಈ ರೀತಿ ರಕ್ಷಾ ಕವಚ ಅಳವಡಿಸಿದ ವಿವಿಪ್ಯಾಟ್‌ಗಳನ್ನು ನೇರ ಬೆಳಕಿನಲ್ಲಿ ಮತ್ತು ಆದ್ರತೆಯ ಜಾಗದಲ್ಲಿ ಇಟ್ಟಾಗಲೂ ಅವು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಸಿಪಡಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ನಾಲ್ಕು ಲೋಕಸಭಾ ಕ್ಷೇತ್ರಗಳು, ಕೈರಾನ ಮತ್ತು ಭಂಡಾರ ಗೊಂಡಿಯಾ ಕ್ಷೇತ್ರಗಳು ಸೇರಿದಂತೆ ಹತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿವಿಪ್ಯಾಟ್‌ ಯಂತ್ರಗಳು ದೊಡ್ಡ ಸಂಖ್ಯೆಯಲ್ಲಿ ಕೈಕೊಟ್ಟಿದ್ದವು. ಆನಂತರ ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯು ವಿವಿಪ್ಯಾಟ್‌ಗಳ ವೈಫಲ್ಯದ ಮೂಲ ಕಾರಣದ ವಿಶ್ಲೇಷಣೆ ನಡೆಸಿತ್ತು.

‘ಮತಯಂತ್ರ ಪೂರೈಕೆ ವಿಳಂಬವಾಗದು’
‘ವಿದ್ಯುನ್ಮಾನ ಮತಯಂತ್ರಗಳ ಸರಬರಾಜು ವಿಳಂಬದ ಸಮಸ್ಯೆಯನ್ನು ಚುನಾವಣಾ ಆಯೋಗ ಎದುರಿಸುತ್ತಿಲ್ಲ. ಅಗತ್ಯವಿರುವ 13.95 ಲಕ್ಷ ಬ್ಯಾಲೆಟ್‌ ಯೂನಿಟ್‌ ಮತ್ತು 9.3 ಲಕ್ಷ ಕಂಟ್ರೋಲ್‌ ಯೂನಿಟ್‌ಗಳು ಸೆಪ್ಟೆಂಬರ್‌ 30ರೊಳಗೆ ಪೂರೈಕೆಯಾಗಲಿವೆ. ಅಲ್ಲದೆ, 16.15 ಲಕ್ಷ ವಿವಿಪ್ಯಾಟ್‌ಗಳು ನವೆಂಬರ್‌ ಕೊನೆಯೊಳಗೆ ಸರಬರಾಜು ಆಗಲಿವೆ’ ಎಂದು ರಾವತ್‌ ಹೇಳಿದ್ದಾರೆ.

*
ತೇವಾಂಶದಿಂದ ಕೂಡಿದ ಸ್ಥಳಗಳಲ್ಲಿ ಆರ್ದ್ರತೆ ನಿರೋಧಕ ಕಾಗದವನ್ನು ವಿವಿಪ್ಯಾಟ್‌ಗಳಲ್ಲಿ ಬಳಕೆ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದೇವೆ.
–ಒ.ಪಿ.ರಾವತ್‌, ಮುಖ್ಯ ಚುನಾವಣಾ ಆಯುಕ್ತ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !