ಶುಕ್ರವಾರ, ಸೆಪ್ಟೆಂಬರ್ 17, 2021
22 °C

ತೆಚ್ಚಿಕ್ಕೋಟ್ಟುಕಾವು 'ರಾಮಚಂದ್ರನ್' ಆನೆಗೆ ಜೈಕಾರ; ತ್ರಿಶ್ಶೂರ್ ಪೂರಂಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಶ್ಶೂರ್: ಕೇರಳದ ಪ್ರಸಿದ್ಧ ಜಾತ್ರೆ ತ್ರಿಶ್ಶೂರ್ ಪೂರಂಗೆ ಭಾನುವಾರ ಅದ್ದೂರಿ ಚಾಲನೆ ಸಿಕ್ಕಿದೆ. ಬೆಳಗ್ಗೆ 10.30ಕ್ಕೆ ತೆಚ್ಚಿಕ್ಕೋಟ್ಟುಕಾವು ರಾಮಚಂದ್ರನ್ ಆನೆಯನ್ನು ವಡಕ್ಕುನಾಥನ್ ದೇವಾಲಯಕ್ಕೆ ಕರೆತಂದು ದೇವಾಲಯದ ಬಾಗಿಲು ತೆರೆಯುವ ಮೂಲಕ ಪೂರಂಗೆ ಚಾಲನೆ ನೀಡಲಾಗಿದೆ.

ಈ ಬಾರಿ ತೆಚ್ಚಿಕ್ಕೋಟ್ಟುಕಾವು ರಾಮಚಂದ್ರನ್ ಆನೆ ಭಾಗವಹಿಸಿದ್ದರಿಂದ ಸಂಭ್ರಮಾಚರಣೆಯನ್ನು ವೀಕ್ಷಿಸಲು 10 ಸಾವಿರಕ್ಕಿಂತಲೂ ಹೆಚ್ಚು ಮಂದಿ ನೆರೆದಿದ್ದರು.

ಉತ್ತರ ದ್ವಾರದ ಮೂಲಕ ದೇವಾಲಯ ಪ್ರವೇಶಿಸಿದ 54ರ ಹರೆಯದ ಆನೆ ರಾಮಚಂದ್ರನ್ ಪೂರ್ವ ದೇಗುಲದ ಬಾಗಿಲು ತೆರೆಯುವ ಮೂಲಕ ಪೂರಂಗೆ ಚಾಲನೆ ನೀಡಿದೆ.

ತೆಚ್ಚಿಕ್ಕೋಟ್ಟುಕಾವು ದೇವದಾಸ್ ಆನೆಯ ಬೆಳಗ್ಗೆ ಕುಟ್ಟೂರ್ ದೇವಾಲಯದಿಂದ ನೆಯ್‌ತಲಕ್ಕಾವಿಲಮ್ಮನ ಮೆರವಣಿಗೆಗಾಗಿ ಮೂರ್ತಿ ಹೊತ್ತಿತ್ತು. ಆಮೇಲೆ ಅದನ್ನು ರಾಮಚಂದ್ರನ್ ಆನೆಗೆ ವಹಿಸಿಕೊಡಲಾಯಿತು.ಸಾಮಾನ್ಯವಾಗಿ ದೇವಾಲಯದ ಪೂರ್ವ ದ್ವಾರ ತೆರೆಯುವ ಕಾರ್ಯಕ್ಕೆ ಜನರು ಹೆಚ್ಚು ಸೇರುವುದಿಲ್ಲ. ಪೂರಂ (ಜಾತ್ರೆ)ಯ ಮುನ್ನಾ ದಿನ ನಡೆಯುವ ಈ ಕಾರ್ಯಕ್ಕೆ ಜನರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಈ ಬಾರಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. 

9.30ರಿಂದ 10.30ರ ವರೆಗೆ ಮಾತ್ರ ರಾಮಚಂದ್ರನ್ ಆನೆಯ ಮೆರವಣಿಗೆ ನಡೆಸಲು ತ್ರಿಶ್ಶೂರ್ ಜಿಲ್ಲಾಧಿಕಾರಿ ಅನುಪಮಾ ಅನುಮತಿ ನೀಡಿದ್ದರು. ಈ ಹಿಂದಿನ ವರ್ಷಗಳಲ್ಲಿ ಬೆಳಗ್ಗೆ 11 ಗಂಟೆಯ ನಂತರವೇ ಈ ಕಾರ್ಯ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕಾಗಿ ಮಾತ್ರ ರಾಮಚಂದ್ರನ್ ಆನೆಗೆ 2.10ಕೋಟಿ ವಿಮೆ ಮಾಡಲಾಗಿತ್ತು. 

ರಾಮಚಂದ್ರನ್‍‌ ಭಾಗವಹಿಸುವಿಕೆಗೆ ವಿರೋಧ ಸೂಚಿಸಿದ್ದ ಜಿಲ್ಲಾಧಿಕಾರಿ
ರಾಮಚಂದ್ರನ್ ಆನೆ ಈ ಹಿಂದೆ ಏಳು ಮಂದಿಯನ್ನು ಕೊಂದಿತ್ತು. ಹಠಮಾರಿ ಆನೆಯೂ ಆಗಿರುವುದರಿಂದ ಜನರ ಭದ್ರತಾ ದೃಷ್ಟಿಯಿಂದ ಈ ಆನೆ ಮೆರವಣಿಗೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವಿ ಅನುಪಮಾ ಆದೇಶ ನೀಡಿದ್ದರು. ಆದರೆ ರಾಮಚಂದ್ರನ್ ಆನೆ ಜತೆ ಇಲ್ಲಿನ ಜನರು ಭಾವುಕ ಸಂಬಂಧ ಹೊಂದಿದ್ದಾರೆ. ಅನುಪಮಾ ಆದೇಶದ ವಿರುದ್ಧ ಆಕ್ಷೇಪ ವ್ಯಕ್ತ ಪಡಿಸಿದ ಜನರು ತ್ರಿಶ್ಶೂರ್ ಪೂರಂಗೆ ರಾಮಚಂದ್ರನ್ ಬೇಕೇ ಬೇಕು ಎಂದು ಹಠ ಹಿಡಿದಿದ್ದರು.

ಕೊನೆಗೆ ವೈದ್ಯಕೀಯ ತಂಡವು ರಾಮಚಂದ್ರನ್ ಆರೋಗ್ಯ ತಪಾಸಣೆ ಮಾಡಿ ವರದಿ ಸಲ್ಲಿಸಿದ ನಂತರ ಅನುಪಮಾ ಅವರು ಆನೆಯ ಮೆರವಣಿಗೆಗೆ ಅನುಮತಿ ನೀಡಿದ್ದರು. ರಾಮಚಂದ್ರನ್ ಆನೆ 2014ರಿಂದ ಪೂರಂಗೆ  ಚಾಲನೆ ನೀಡುವ ಕಾರ್ಯವನ್ನು ಮಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು