ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಬಿಎಸ್‌ಎಫ್ ಸೇರಲು ಆರ್ಥಿಕ ಭದ್ರತೆಯೇ ಕಾರಣ: ವರದಿ

ಸ್ವತಃ ಗಡಿ ಭದ್ರತಾ ಪಡೆ ನಡೆಸಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 8 ಸೆಪ್ಟೆಂಬರ್ 2019, 14:20 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸೇರಲು, ಆ ಕೆಲಸದಿಂದ ದೊರೆಯುವ ಆರ್ಥಿಕ ಭದ್ರತೆಯೇ ಕಾರಣ ಎಂಬ ಅಂಶ ಸ್ವತಃ ಬಿಎಸ್‌ಎಫ್‌ ನಡೆಸಿರುವ ಅಧ್ಯಯನದ ವರದಿಯಲ್ಲಿ ಬಹಿರಂಗವಾಗಿದೆ.

ರಾಷ್ಟ್ರೀಯ ಭದ್ರತೆಗಿಂತ ಆರ್ಥಿಕ ಭದ್ರತೆಯೇ ಮಹಿಳೆಯರನ್ನು ಕಡುಕಠಿಣವಾದ ಈ ಕೆಲಸದತ್ತ ಆಕರ್ಷಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಬ್ಯೂರೊ ಹೊರತರುವ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ.

ಅಧ್ಯಯನದ ವೇಳೆ ಪತ್ತೆಯಾದ ಅಂಶಗಳು

* ರಜೆ ಸೌಲಭ್ಯ, ತಮಗೆ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಉಚಿತ ವೈದ್ಯಕೀಯ ಸವಲತ್ತು, ಕ್ಯಾಂಟೀನ್‌ ಮತ್ತು ಇತರ ಭತ್ಯೆಗಳ ಕಾರಣ ಮಹಿಳೆಯರು ಈ ಕೆಲಸಕ್ಕೆ ಸೇರಿದ್ದಾರೆ

* ಈ ಕೆಲಸಕ್ಕೆ ಸೇರಿದ ನಂತರ ಸಮಾಜದಲ್ಲಿ ತಮ್ಮ ಕುಟುಂಬದ ಗೌರವ ಮತ್ತು ಸ್ಥಾನಮಾನ ಹೆಚ್ಚಾಗಿದೆ ಎಂದು ಬಹುತೇಕ ಮಹಿಳಾ ಸಿಬ್ಬಂದಿ ಹೇಳಿದ್ದಾರೆ

* ಬಹುತೇಕ ಮಹಿಳೆಯರನ್ನು ಗೇಟಿನ ನಿರ್ವಹಣೆ ಮತ್ತು ಗಸ್ತು ಕೆಲಸಗಳಿಗಷ್ಟೇ ನಿಯೋಜಿಸಲಾಗುತ್ತದೆ. ಆದರೆ ಈ ಕೆಲಸಗಳಲ್ಲೂ ಪುರುಷ ಸಹದ್ಯೋಗಿಗಳ ಜತೆಗೆ ಕಾರ್ಯನಿರ್ವಹಿಸಬೇಕಿದೆ. ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅವಕಾಶವಿಲ್ಲ

* ತಮಗೆ ಒದಗಿಸಿರುವ ಬ್ಯಾರಕ್‌ಗಳಲ್ಲಿ ಶೌಚಾಲಯ ಇರುವುದಿಲ್ಲ. ಇದ್ದರೂ ನೀರಿನ ಲಭ್ಯತೆ ಇರುವುದಿಲ್ಲ ಎಂದು ಬಹುತೇಕ ಎಲ್ಲಾ ಮಹಿಳಾ ಸಿಬ್ಬಂದಿ ಹೇಳಿದ್ದಾರೆ

* ಋತುಸ್ರಾವದ ವೇಳೆ ತಮಗೆ ಬಿಡುವು ಮತ್ತು ವಿಶ್ರಾಂತಿ ದೊರೆಯುವುದಿಲ್ಲ ಎಂದು ಎಲ್ಲಾ ಮಹಿಳಾ ಸಿಬ್ಬಂದಿ ಹೇಳಿದ್ದಾರೆ

* ತಮ್ಮ ಬಗ್ಗೆ ಪುರುಷ ಸಿಬ್ಬಂದಿ ಅತೀವ ಕಾಳಜಿ ವಹಿಸುವುದು ಮುಜುಗರ ಉಂಟುಮಾಡುತ್ತದೆ ಎಂದು ಬಹುತೇಕಎಲ್ಲಾ ಮಹಿಳಾ ಸಿಬ್ಬಂದಿ ಹೇಳಿದ್ದಾರೆ

* ಶೇ 98– ಕೆಲಸದ ವೇಳೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಎದುರಿಸಿಲ್ಲ ಎಂದ ಮಹಿಳಾ ಸಿಬ್ಬಂದಿ ಪ್ರಮಾಣ

* ಶೇ 8 – ಕೆಲಸದ ವೇಳೆ ತಮ್ಮನ್ನು ಗುರಿಯಾಗಿಸಿಕೊಂಡು ಪುರುಷರು ಲೈಂಗಿಕ ಹಾಸ್ಯ ಮಾಡುತ್ತಾರೆ ಎಂದಮಹಿಳಾ ಸಿಬ್ಬಂದಿ ಪ್ರಮಾಣ

ಮಹಿಳಾ ಸಿಬ್ಬಂದಿಯ ಪ್ರಮಾಣ ಹೆಚ್ಚಳಕ್ಕೆ ಕಳವಳ

ಬಿಎಸ್‌ಎಫ್‌, ಇಂಡೊ–ಟಿಬೆಟಿಯನ್ ಬಾರ್ಡರ್ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲಗಳಲ್ಲಿ ಮಹಿಳಾ ಸಿಬ್ಬಂದಿಯ ಪ್ರಮಾಣವನ್ನು ಶೇ 15ಕ್ಕೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದ ಈ ಪಡೆಗಳ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

‘ಬಿಎಸ್‌ಎಫ್‌ನಲ್ಲಿ ಈಗ ಮಹಿಳಾ ಸಿಬ್ಬಂದಿಯನ್ನು ಅತ್ಯಂತ ಕಡಿಮೆ ಅಪಾಯವಿರುವ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ. ಈ ಪಡೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಶೇ 15ಕ್ಕೆ ಏರಿಸಿದರೆ, ಮಹಿಳಾ ಸಿಬ್ಬಂದಿ ಸಂಖ್ಯೆ ಸುಮಾರು 30,000ದಷ್ಟಾಗುತ್ತದೆ. ಅಂದರೆ ಅಷ್ಟೇ ಪುರುಷ ಸಿಬ್ಬಂದಿಯ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ದಾಳಿ–ಪ್ರತಿದಾಳಿ ಮತ್ತು ಶೋಧ ಕಾರ್ಯಗಳಿಗೆ ಲಭ್ಯವಿರುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಲಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ಶೇ 80 – ಆರ್ಥಿಕ ಭದ್ರತೆಯ ಕಾರಣಕ್ಕಾಗಿ ನಾವು ಬಿಎಸ್‌ಎಫ್‌ ಸೇರಿದ್ದೇವೆ ಎಂದ ಮಹಿಳಾ ಸಿಬ್ಬಂದಿ ಪ್ರಮಾಣ

* 2.65 ಲಕ್ಷ – ಬಿಎಸ್‌ಎಫ್‌ ಸಿಬ್ಬಂದಿಯ ಒಟ್ಟು ಸಂಖ್ಯೆ

* 4,147 – ಮಹಿಳಾ ಸಿಬ್ಬಂದಿ ಸಂಖ್ಯೆ

* ಶೇ 1.66 – ಮಹಿಳಾ ಸಿಬ್ಬಂದಿಯ ಪ್ರಾತಿನಿಧ್ಯದ ಪ್ರಮಾಣ

* ಶೇ 15ರಷ್ಟು ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT