ಸೋಮವಾರ, ಆಗಸ್ಟ್ 26, 2019
21 °C

ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಇನ್ನಿಲ್ಲ

Published:
Updated:

ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರು ಮಂಗಳವಾರ ನಿಧನರಾಗಿದ್ದಾರೆ.

ಹಿರಿಯ ನಾಯಕಿಯ ಜೀವನ–ಸಾಧನೆ ತಿಳಿಯಲು ಸುಷ್ಮಾ ಸ್ವರಾಜ್‌ ನೆನಪು ಲಿಂಕ್ ಕ್ಲಿಕ್ಕಿಸಿ

ಮಂಗಳವಾರ ರಾತ್ರಿ ಅವರ ಆರೋಗ್ಯದಲ್ಲಿ ದಿಢೀರ್‌ ಏರುಪೇರು ಕಾಣಿಸಿಕೊಂಡಿತು.  ಹೀಗಾಗಿ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌

‘ಸುಷ್ಮಾ ಸ್ವರಾಜ್‌ ಉತ್ತಮ ಸಂಸದೀಯಪಟು. ಪಕ್ಷದಲ್ಲಿ ಅವರು ಮೆಚ್ಚುಗೆ ಹಾಗೂ ಪೂಜನೀಯ ಸ್ಥಾನ ಪಡೆದಿದ್ದರು. ಬಿಜೆಪಿಯ ಸಿದ್ಧಾಂತದ ವಿಚಾರದಲ್ಲಿ ಅವರು ಯಾವುದಕ್ಕೂ ರಾಜಿಯಾಗುತ್ತಿರಲಿಲ್ಲ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ದಿಢೀರ್‌ ಹೃದಯಸ್ತಂಭನ ಉಂಟಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಬಿಜೆಪಿಯ ಹಿರಿಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. 

ಇದನ್ನೂ ಓದಿ: ಆರೋಗ್ಯ ಕಾರಣ’ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್‌

ಸುಷ್ಮಾಸ್ವರಾಜ್‌ ಅವರ ನಿಧನಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ. ‘ಸಹೋದರಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ತೀವ್ರ ನೋವುಂಟಾಗಿದೆ. ಅವರನ್ನು ನೋಡಿದ ತಕ್ಷಣ ಎಲ್ಲರಲ್ಲೂ ತಾಯಿ ಮನೋಭಾವ ಮೂಡುತಿತ್ತು . ಆಕೆ ಅತೀ ಚಿಕ್ಕ ವಯಸ್ಸಿನಲ್ಲೇ ಹರಿಯಾಣ ರಾಜ್ಯದಲ್ಲಿ ಸಂಪುಟ ದರ್ಜೆ ಸಚಿವೆ ಆಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು. ಈ ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿಯೂ ಉತ್ತಮ ಕಾರ್ಯ ನಿರ್ವಹಿಸಿದ್ದರು. ಸುಷ್ಮಾ ನಿಧನದಿಂದ ನಮ್ಮ ದೇಶ ಒಬ್ಬ ಧೈರ್ಯವಂತೆ ಹಾಗೂ ಮಾತೃ ಹೃದಯಿ ಹೆಣ್ಣು ಮಗಳನ್ನ ಕಳೆದು ಕೊಂಡಿದ್ದೀವಿ. ಅವರ ನಿಧನದಿಂದ ರಾಷ್ಟ್ರಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗು ಅವರ ಅಪಾರ ಅಭಿಮಾನಿಗಳಿಗೆ ದುಃಖ ಬರಿಸುವ ಶಕ್ತಿ ತುಂಬಲಿ’ ಎಂದಿದ್ದಾರೆ.

ಬಿಜೆಪಿ ಹಿರಿಯ ನಾಯಕಿ ಸುಷ್ಮಾಸ್ವರಾಜ್‌ ಅವರ ನಿಧನಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ನಿಧನದ ಸುದ್ದಿ ತಿಳಿದು ದು:ಖವಾಯಿತು. ಸ್ವಸಾಮಾರ್ಥ್ಯದಿಂದ ರಾಜಕೀಯವಾಗಿ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾಗಲೇ ಅವರ ಬದುಕಿನ ಪಯಣ ಹಠಾತ್ತನೆ ಕೊನೆಗೊಂಡಿದ್ದು ವಿಷಾದನೀಯ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.

 

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದು, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. 

Post Comments (+)