ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ‘ಸ್ವತಂತ್ರ ಕಾಶ್ಮೀರ’ ಪೋಸ್ಟರ್ ಕಿಡಿ: ಸೇನಾ–ಬಿಜೆಪಿ ವಾಕ್ಸಮರ

ಶಿವಸೇನಾ–ಬಿಜೆಪಿ ಮಧ್ಯೆ ವಾಕ್ಸಮರ; ಪೊಲೀಸರಿಂದ ತನಿಖೆ
Last Updated 8 ಜನವರಿ 2020, 1:26 IST
ಅಕ್ಷರ ಗಾತ್ರ

ಮುಂಬೈ: ಗೇಟ್‌ ವೇ ಆಫ್ ಇಂಡಿಯಾ ಬಳಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಕಂಡುಬಂದ ‘ಸ್ವತಂತ್ರ ಕಾಶ್ಮೀರ’ ಫಲಕವು ವಿವಾದದ ಕಿಡಿ ಹೊತ್ತಿಸಿದೆ.ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ ಆಘಾಡಿ ಹಾಗೂ ಬಿಜೆಪಿ ಮಂಗಳವಾರ ಪರಸ್ಪರ ಆರೋಪ–ಪ್ರತ್ಯಾರೋಪ ನಡೆಸಿವೆ.

ಬ್ಯಾನರ್ ಪ್ರದರ್ಶಿಸಿದ್ದ ಮೆಹಕ್ ಮಿರ್ಜಾ ಪ್ರಭು ಅವರು ವಿವರಣೆ ನೀಡಿದ್ದು,‘ಅಭಿಪ್ರಾಯ ಹಂಚಿಕೊಳ್ಳುವ ಸ್ವಾತಂತ್ರ್ಯ, ಕಾಶ್ಮೀರದಲ್ಲಿ ಅಂತರ್ಜಾಲ ಸೌಲಭ್ಯ ಮತ್ತೆ ದೊರಕಿಸುವ ಬೇಡಿಕೆಯನ್ನು ಫಲಕವು ಧ್ವನಿಸುತ್ತದೆ. ಸಂವಿಧಾನದ ಮೂಲಭೂತ ಹಕ್ಕುಗಳಿಗಾಗಿ ನಾನು ದನಿ ಎತ್ತಿದ್ದೇನೆ. ಪರಿಣಾಮ ಏನಾಗಬಹುದು ಎಂಬ ಅರಿವಿಲ್ಲದೇ ಮಾಡಿದ ಈ ಯತ್ನಕ್ಕೆ ಕ್ಷಮೆ ಇರಲಿ. ದ್ವೇಷಕ್ಕಿಂತ ಪ್ರೀತಿ ಮಿಗಿಲು ಎಂಬ ಸಂದೇಶವನ್ನು ದಯವಿಟ್ಟು ಹರಡಿರಿ’ ಎಂದು ಕತೆಗಾರ್ತಿ ಮೆಹಕ್ ಹೇಳಿದ್ದಾರೆ.

ಫಲಕದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಅವರು ಈ ವಿಚಾರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪ್ರತಿಭಟನೆಯ ಉದ್ದೇಶ ಏನು? ‘ಸ್ವತಂತ್ರ ಕಾಶ್ಮೀರ’ ಘೋಷಣೆ ಏಕೆ? ಮುಂಬೈನಲ್ಲಿ ಇಂತಹ ಪ್ರತ್ಯೇಕತಾವಾದಿಗಳನ್ನು ಸಹಿಸಿಕೊಳ್ಳುವುದು ಹೇಗೆ? ಮುಖ್ಯಮಂತ್ರಿ ಕಚೇರಿಯಿಂದ 2 ಕಿಲೋಮೀಟರ್ ದೂರದಲ್ಲಿ ಆಜಾದಿ ಗುಂಪಿನಿಂದ ಕೇಳಿಬಂದ ಈ ಘೋಷಣೆ ಸರಿಯೇ’ ಎಂದು ಫಡಣವೀಸ್ ಅವರು ಪ್ರಶ್ನಿಸಿದ್ದಾರೆ.

ಫಡಣವೀಸ್ ಮಾತಿಗೆ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಚಿವ ಜಯಂತ್ ಪಾಟೀಲ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ‘ಫಡಣವೀಸ್ ಅವರೇ, ಎಲ್ಲ ರೀತಿಯ ತಾರತಮ್ಯ, ದೂರಸಂಪರ್ಕ ನಿರ್ಬಂಧ ಹಾಗೂ ಕೇಂದ್ರ ಸರ್ಕಾರದ ನಿಯಂತ್ರಣದಿಂದ ಮುಕ್ತಿ ಕೊಡಿ ಎಂದು ಬೇಡಿಕೆ ಮಂಡಿಸಲಾಗಿದೆ. ಪದಗಳನ್ನು ಇಷ್ಟ ಬಂದಂತೆ ವ್ಯಾಖ್ಯಾನಿಸಿ ಜನರನ್ನು ಗೊಂದಲಕ್ಕೆ ತಳ್ಳುವುದು ನಿಮ್ಮಂತಹ ಜವಾಬ್ದಾರಿಯುತ ನಾಯಕರಿಗೆ ಸಲ್ಲದು’ ಎಂದಿದ್ದಾರೆ.

ಸಚಿವರ ವಿರುದ್ಧ ಸೋಮಯ್ಯ ದೂರು

ಇಂಡಿಯಾ ಗೇಟ್‌ ಬಳಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರಿಗೆ ಬೆಂಬಲ ಸೂಚಿಸಿದ ಆರೋಪದ ಮೇಲೆ ಎನ್‌ಸಿಪಿ ಮುಖಂಡ ಹಾಗೂ ಸಚಿವ ಡಾ. ಜಿತೇಂದ್ರ ಆವ್ಹಾಡ ವಿರುದ್ಧ ದೂರು ದಾಖಲಾಗಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಪ್ತರಾಗಿರುವ ಅವರೆನಿಸಿರುವ ಆವ್ಹಾಡ ವಿರುದ್ಧ ಬಿಜೆಪಿ ಮುಖಂಡ ಕಿರಿಟ್ ಸೋಮಯ್ಯ ಅವರು ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕು ಎಂದು ಆಗ್ರಹಿಸುವದೇಶ ವಿರೋಧಿ ಪ್ರತಿಭಟನೆಯಲ್ಲಿ ಆವ್ಹಾಡ ಭಾಗಿಯಾಗಿದ್ದರು. ಈ ಪ್ರತಿಭಟನೆಗೆ ಪೊಲೀಸರ ಅನುಮತಿ ಇರಲಿಲ್ಲ. ಹೀಗಾಗಿ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೋಮಯ್ಯ ಆಗ್ರಹಿಸಿದ್ದಾರೆ.

***

ಉದ್ಧವ್‌ ಠಾಕ್ರೆ ಅವರೇ, ನಿಮ್ಮ ಹತ್ತಿರಲ್ಲಿದಲ್ಲಿಯೇ ನಡೆಯುತ್ತಿರುವ ದೇಶವಿರೋಧಿ ಚಳವಳಿಯಯನ್ನು ಸಹಿಸಿಕೊಳ್ಳುತ್ತೀರಾ?
–ದೇವೇಂದ್ರ ಫಡಣವೀಸ್,ಪ್ರತಿಪಕ್ಷ ನಾಯಕ

ಫಲಕದಲ್ಲಿ ಉಲ್ಲೇಖಿಸಿರುವ ವಿಚಾರವನ್ನುವಿಶಾಲ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ
ಆದಿತ್ಯ ಠಾಕ್ರೆ, ಉದ್ಧವ್‌ ಪುತ್ರ ಹಾಗೂ ಸಚಿವ

ಫಡಣವೀಸ್ ಅವರೇಇದು ಅಧಿಕಾರ ಕಳೆದುಕೊಂಡ ಹತಾಶೆಯೋ ಅಥವಾ ನಿಮ್ಮ ಮೇಲೆ ಸ್ವನಿಯಂತ್ರಣದ ಕಳೆದುಕೊಂಡ ವ್ಯಥೆಯೋ?
–ಜಯಂತ್ ಪಾಟೀಲ್,ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಸಚಿವ

ಕಾಶ್ಮೀರವನ್ನು ನಿರ್ಬಂಧಗಳಿಂದ ಮುಕ್ತಗೊಳಿಸಬೇಕು ಎಂಬುದು ಭಿತ್ತಿಪತ್ರದ ಉದ್ದೇಶವಾಗಿತ್ತು ಎಂದು ಪತ್ರಿಕೆಯಲ್ಲಿ ಓದಿದ್ದೆ. ಪೋಸ್ಟರ್ ಗೊಂದಲಕಾರಿಯಾಗಿದೆ
–ಸಂಜಯ್ ರಾವುತ್, ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT