ನಾಲ್ಕು ಹೊಸ ಪ್ರತಿಮೆಗಳ ನಿರ್ಮಾಣಕ್ಕೆ ಮುಂದಾದ ಉತ್ತರ ಪ್ರದೇಶ ಸರ್ಕಾರ

7

ನಾಲ್ಕು ಹೊಸ ಪ್ರತಿಮೆಗಳ ನಿರ್ಮಾಣಕ್ಕೆ ಮುಂದಾದ ಉತ್ತರ ಪ್ರದೇಶ ಸರ್ಕಾರ

Published:
Updated:

ನವದೆಹಲಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಸ್ವಾಮಿ ವಿವೇಕಾನಂದ ಮತ್ತು ಗೋರಖ್‌ಪುರ ಕ್ಷೇತ್ರದ ಇಬ್ಬರು ಮಹಂತರ ಪ್ರತಿಮೆಗಳ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಮುಂದಾಗಿದೆ.

ಈ ಮೊದಲು ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಹೇಳಿಕೆಗಳಲ್ಲಿ ವಾಜಪೇಯಿ ಅವರ ಪ್ರತಿಮೆಯ ಬಗ್ಗೆ ಮಾತ್ರ ಪ್ರಸ್ತಾಪವಿತ್ತು. ಆದರೆ ಈಗ ಸ್ವಾಮಿ ವಿವೇಕಾನಂದ, ಮಹಂತರಾದ ಅವೈದ್ಯನಾಥ ಮತ್ತು ದಿಗ್ವಿಜಯನಾಥರ ಪ್ರತಿಮೆಗಳೂ ಸೇರಿವೆ. ಮಹಂತರಿಬ್ಬರೂ ಗೋರಖಪುರದ ಗೋರಖನಾಥ ದೇಗುಲದ ಪ್ರಧಾನ ಅರ್ಚಕರಾಗಿದ್ದರು. ಈ ದೇಗುಲದ ಕಾರ್ಯಚಟುವಟಿಕೆಗಳ ನೇತೃತ್ವವನ್ನು ಈಗ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಹಿಸಿಕೊಂಡಿದ್ದಾರೆ.

ನಾಲ್ಕು ಪ್ರತಿಮೆ ನಿರ್ಮಾಣಗಳಿಗೆ ಸರ್ಕಾರ ಸಮ್ಮತಿಸಿರುವ ಸಂಗತಿಯನ್ನು ಉತ್ತರ ಪ್ರದೇಶ ಸರ್ಕಾರದ ವಿಶೇಷ ಕಾರ್ಯದರ್ಶಿ ಶಿಶಿರ್ ಸಿಂಗ್ ದೃಢಪಡಿಸಿದ್ದಾರೆ. ಅವರ ಹೇಳಿಕೆ ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್‌’ ವರದಿ ಮಾಡಿದೆ.

ಅಯೋಧ್ಯೆಯಲ್ಲಿ 221 ಮೀಟರ್ (725 ಅಡಿ) ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಾಗುವುದು ಎಂದು ಸರ್ಕಾರ ಘೋಷಿಸಿದ ಬೆನ್ನಲ್ಲೇ ಮತ್ತಷ್ಟು ಪ್ರತಿಮೆಗಳನ್ನು ನಿರ್ಮಿಸುವ ಹೇಳಿಕೆ ಹೊರಬಿದ್ದಿದೆ. ಉತ್ತರ ಪ್ರದೇಶ ಸರ್ಕಾರದ ಈ ಘೋಷಣೆಯ ನಂತರ ಕಾಂಗ್ರೆಸ್ ನಾಯಕ ಕರಣ್ ಸಿಂಗ್ ರಾಮನ ಪ್ರತಿಮೆಯ ಎತ್ತರವನ್ನು ಕಡಿಮೆ ಮಾಡಿ, ಸೀತೆಯ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಲಖನೌ ನಗರದಲ್ಲಿರುವ ಉತ್ತರ ಪ್ರದೇಶ ಸರ್ಕಾರದ ಆಡಳಿತ ಕೇಂದ್ರ ಲೋಕ್ ಭವನ್ ಸಮೀಪ 25 ಅಡಿ ಎತ್ತರದ ವಾಜಪೇಯಿ ಪ್ರತಿಮೆ ಸ್ಥಾಪಿಸಲಾಗುವುದು. ಉಳಿದ ಪ್ರತಿಮೆಗಳು 12.5 ಅಡಿ ಎತ್ತರ ಇರುತ್ತವೆ. ಉತ್ತರ ಪ್ರದೇಶದ ರಾಜ ಭವನ ಸಮೀಪ ವಿವೇಕಾನಂದರ ಪ್ರತಿಮೆಯನ್ನು ಮತ್ತು ಗೋರಖ್‌ಪುರದಲ್ಲಿ ಅವೈದ್ಯನಾಥ ಮತ್ತು ದಿಗ್ವಿಜಯನಾಥರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ.

ಪ್ರತಿಮೆಗಳ ಸ್ಥಾಪನೆ ಕೆಲಸ ಈಗಾಗಲೇ ಆರಂಭವಾಗಿದೆ. ಜಿಲ್ಲಾಧಿಕಾರಿಗಳು, ಲಖನೌ ಮತ್ತು ಗೋರಖ್‌ಪುರದ ಪೊಲೀಸ್‌ ಮುಖ್ಯಸ್ಥರು ಒಂದು ವಾರದ ಒಳಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.

ಅಯೋಧ್ಯೆಯಲ್ಲಿ ರಾಮನ ಅತಿ ಎತ್ತರದ ಪ್ರತಿಮೆ ಸ್ಥಾಪಿಸುವುದರ ಜೊತೆಗೆ ಅಲಹಾಬಾದ್‌ ಸಮೀಪದ ಶೃಂಗಬೇರಪುರದಲ್ಲಿ ರಾಮನ ಮತ್ತೊಂದು ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಆದಿತ್ಯನಾಥ ಸರ್ಕಾರ ಪ್ರಕಟಿಸಿದೆ. ನಿಷಾಧ (ಬೇಡ) ಸಮುದಾಯವು ಈ ಶೃಂಗಬೇರಪುರವನ್ನು ಪವಿತ್ರ ಸ್ಥಳ ಎಂದು ಭಾವಿಸುತ್ತದೆ.

ರಾಮನ ಪ್ರತಿಮೆಯ ಜೊತೆಗೆ ನಿಷಾಧರಾಜನ ಪ್ರತಿಮೆಯನ್ನೂ ನಿರ್ಮಿಸಲಾಗುವುದು ಎಂದು ಘೋಷಿಸಿರುವ ಸರ್ಕಾರ, ಈ ಯೋಜನೆಗಾಗಿ ₹34 ಕೋಟಿ ಮೀಸಲಿಟ್ಟಿದೆ. ನಿಷಾಧರಾಜನನ್ನು ಅಂಬಿಗರ ಸಮುದಾಯ ತನ್ನ ಸಾಂಸ್ಕೃತಿಕ ನಾಯಕ  ಎಂದು ಪರಿಭಾವಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 16

  Angry

Comments:

0 comments

Write the first review for this !