ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಅಕ್ಕಿಯಿಂದ ಸಾನಿಟೈಸರ್: ಸರ್ಕಾರದ ನಿರ್ಧಾರಕ್ಕೆ ವ್ಯಕ್ತವಾಗಿದೆ ಆಕ್ಷೇಪ

ಎಫ್‌ಸಿಐ ಹೆಚ್ಚುವರಿ ದಾಸ್ತಾನು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ, ಆಕ್ಷೇಪ
Last Updated 22 ಏಪ್ರಿಲ್ 2020, 2:18 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಗೋದಾಮುಗಳಲ್ಲಿ ಇರುವ ಹೆಚ್ಚುವರಿ ಅಕ್ಕಿಯನ್ನು ಇಥೆನಾಲ್ ಆಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಇಥೆನಾಲ್‌ನಿಂದ ಹ್ಯಾಂಡ್‌ ಸಾನಿಟೈಸರ್‌ ತಯಾರಿಸಲು ಅನುಮತಿ ನೀಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ (ಎನ್‌ಬಿಸಿಸಿ) ಸದಸ್ಯರ ಜತೆ ಸೋಮವಾರ ಪೆಟ್ರೋಲಿಯಂ ಸಚಿವಾಲಯವು ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಎಫ್‌ಸಿಐನ ಗೋದಾಮುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯ ದಾಸ್ತಾನು ಇದೆ. ಇದರಲ್ಲಿ ಸ್ವಲ್ಪ ಪಾಲನ್ನು ಇಥೆನಾಲ್‌ ಆಗಿ ಪರಿವರ್ತಿಸಲಾಗುತ್ತದೆ. ಆ ಇಥೆನಾಲ್‌ ಅನ್ನು ಹ್ಯಾಂಡ್‌ ಸಾನಿಟೈಸರ್‌ ತಯಾರಿಕೆಗೆ ಬಳಸಲಾಗುತ್ತದೆ. ಪೆಟ್ರೋಲ್‌ನಲ್ಲೂ ಇಥೆನಾಲ್ ಬೆರೆಸಲಾಗುತ್ತದೆ. ಇದರಿಂದ ವಾಹನಗಳಿಂದಾಗುವ ವಾಯುಮಾಲಿನ್ಯ ಕಡಿಮೆಯಾಗುತ್ತದೆ’ ಎಂದು ಸಚಿವಾಲಯವು ಸೋಮವಾರ ತಡರಾತ್ರಿ ಟ್ವೀಟ್ ಮಾಡಿದೆ.

ಎಫ್‌ಸಿಐ ಗೋದಾಮಿನಲ್ಲಿ ಇರುವ ಹೆಚ್ಚುವರಿ ಅಕ್ಕಿ ಮತ್ತು ಗೋದಿಯನ್ನು ಇಥೆನಾಲ್ ಆಗಿ ಪರಿವರ್ತಿಸಲು 2018ರ ರಾಷ್ಟ್ರೀಯ ಜೈವಿಕ ಇಂಧನ ನೀತಿ ಅನುವು ಮಾಡಿಕೊಡುತ್ತದೆ.

ಹೆಚ್ಚುವರಿ ದಾಸ್ತಾನು ವಿತರಿಸದೇ ಇರುವುದಕ್ಕೆ ಆಕ್ಷೇಪ

ಎಫ್‌ಸಿಐ ಗೋದಾಮುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅಕ್ಕಿ ಮತ್ತು ಗೋದಿಯ ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ 2.1 ಕೋಟಿ ಟನ್ನಿನಷ್ಟು ಅಕ್ಕಿ ಮತ್ತು ಗೋದಿಯ ದಾಸ್ತಾನು ಬೇಕಿದೆ. ಆದರೆ 3.7 ಕೋಟಿ ಟನ್ನಿನಷ್ಟು ಹೆಚ್ಚುವರಿ ದಾಸ್ತಾನು ಇದೆ.

ಹೆಚ್ಚುವರಿ ದಾಸ್ತಾನನ್ನು ಇಟ್ಟುಕೊಂಡು ಸರ್ಕಾರ ಏನು ಮಾಡುತ್ತಿದೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಕೇಳಿದ್ದಾರೆ.

‘ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ದೇಶದಾದ್ಯಂತ ಹಲವರು ಸತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಹಾಲು, ಹಣ್ಣನ್ನು ಆಯ್ದುಕೊಂಡು ತಿನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಹೆಚ್ಚುವರಿ ಅಕ್ಕಿಯನ್ನು ಬಡವರಿಗೆ ವಿತರಿಸುವ ಕೆಲಸ ಮಾಡಬೇಕು’ ಎಂದು ಶ್ರೀವತ್ಸ ಎನ್ನುವವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT