ಸೋಮವಾರ, ಜುಲೈ 26, 2021
22 °C

ಚೀನಾದ ಸೌರಫಲಕಗಳಿಗೆ ಸುಂಕ ವಿಧಿಸಲು ಪ್ರಸ್ತಾವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಸಂಬಂಧ ಭಾರತದಲ್ಲಿ ಸಾರ್ವಜನಿಕರ ಆಕ್ರೋಶ ಮುಂದುವರಿದಿದೆ. ಸರ್ಕಾರವೂ ಚೀನಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಆದರೆ, ಚೀನಾದ ವಸ್ತುಗಳ ಆಮದನ್ನು ನಿಲ್ಲಿಸುವುದರಿಂದ ಭಾರತದ ಉದ್ಯಮಗಳಿಗೆ ಹೊಡೆತ ಬೀಳಲಿದೆ ಎಂದು ಭಾರತೀಯ ರಫ್ತುದಾರರ ಸಂಘ ಎಚ್ಚರಿಕೆ ನೀಡಿದೆ.

ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಸಂಬಂಧ ದೇಶದ ಹಲವೆಡೆ ಗುರುವಾರವೂ ಪ್ರತಿಭಟನೆ ನಡೆದಿದೆ. ಮುಂಬೈನಲ್ಲಿ ಚೀನಾದ ಕಂಪನಿಗಳ ಮೊಬೈಲ್ ಮಾರಾಟ ಮಳಿಗೆಗಳ ನಾಮಫಲಕಗಳನ್ನು ಪರದೆ ಹಾಕಿ ಮುಚ್ಚಲಾಗಿದೆ.

ಸುಂಕ ವಿಧಿಸುವ ಪ್ರಸ್ತಾವ: ಚೀನಾದಿಂದ ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳ ಆಮದಿನ ಮೇಲೆ ಸುಂಕ ವಿಧಿಸಲು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಆರ್‌.ಕೆ.ಸಿಂಗ್ ಅವರು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಚೀನಾದಿಂದ ಆಮದು ಮಾಡಿಕೊಳ್ಳುವ ಸೌರಶಕ್ತಿಗೆ ಸಂಬಂಧಿಸಿದ ಉಪಕರಣಗಳ ಮೇಲೆ ಈಗ ಶೇ 15ರಷ್ಟು ವಿಶೇಷ ಸುಂಕ ವಿಧಿಸಲಾಗುತ್ತಿದೆ. ಈ ಸುಂಕದ ಅವಧಿ ಜುಲೈ ಅಂತ್ಯಕ್ಕೆ ಕೊನೆಯಾಗಲಿದೆ. ನಂತರದ ಒಂದು ವರ್ಷದ ಅವಧಿಗೆ ಆಮದು ಸುಂಕದ ಪ್ರಮಾಣವನ್ನು ಶೇ 20–25ಕ್ಕೆ ಏರಿಸಬೇಕು. ಎರಡನೇ ವರ್ಷದಲ್ಲಿ ಸುಂಕದ ಪ್ರಮಾಣವನ್ನು ಶೇ 40ಕ್ಕೆ ಏರಿಕೆ ಮಾಡಬೇಕು ಎಂದು ಅವರು ಪ್ರಸ್ತಾವ ಸಲ್ಲಿಸಿದ್ದಾರೆ.

ಆಮದು ಬಹಿಷ್ಕರಿಸಿದರೆ ಅಪಾಯ: ‘ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಎಲೆಕ್ಟ್ರಾನಿಕ್ ಉಪಕರಣ ಮತ್ತು ಬಿಡಿಭಾಗಗಳಲ್ಲಿ ಮಾಲ್‌ವೇರ್‌ಗಳನ್ನು ಅಳವಡಿಸಲಾಗಿದೆ ಎಂಬ ವರದಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

‘ಭಾರತೀಯ ಉದ್ಯಮಗಳು ಚೀನಾದ ಸರಕಿನ ಮೇಲೆ ಅವಲಂಬಿತವಾಗಿವೆ. ಚೀನಾದಿಂದ ಸರಕುಗಳನ್ನು ಬಹಿಷ್ಕರಿಸಿದರೆ, ಅದು ಈ ಉದ್ಯಮಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದರಿಂದ ತೊಂದರೆಯೇ ಹೆಚ್ಚು‌’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

‘ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಸರಕುಗಳನ್ನು ಭಾರತದಲ್ಲೇ ತಯಾರಿಸುವಂತಾಗಬೇಕು ಇಲ್ಲವೇ ಬೇರೆ ದೇಶಗಳಿಂದ ತರಿಸುವಂತಾಗಬೇಕು. ಇದಕ್ಕಾಗಿ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಇವೆಲ್ಲವು ಸಾಧ್ಯವಾದಾಗ ಮಾತ್ರ ಚೀನಾದ ಸರಕುಗಳನ್ನು ಬಹಿಷ್ಕರಿಸಲು ಸಾಧ್ಯವಾಗುತ್ತದೆ’ ಎಂದು ಒಕ್ಕೂಟವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು