ಮಹಿಳೆಯರ ಬದುಕಿಗೆ ಬೆಳಕಾದ ಬಿದಿರು...

7

ಮಹಿಳೆಯರ ಬದುಕಿಗೆ ಬೆಳಕಾದ ಬಿದಿರು...

Published:
Updated:
Prajavani

‘ಅಂಬಿಗನಿಗೆ ಹುಟ್ಟು ಆದೆ, ಮ್ಯಾದಾರ್ಗೆ ಬುಟ್ಟಿ ಆದೆ; ಹತ್ತುವವಗೆ ಏಣಿ ಆದೆ, ಸತ್ತವಂಗೆ ಚಟ್ಟವಾದೆ; ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ...’ ಈ ಜನಪದ ಹಾಡು ಬಿದಿರಿನ ಮಹತ್ವ ಮತ್ತು ಅಗತ್ಯವನ್ನು ಸಾರಿ ಹೇಳುತ್ತದೆ. ಬಿದಿರು ಪ್ರತಿಯೊಬ್ಬರಿಗೂ ಉಪಯುಕ್ತ. ಆದರೆ, ಮೇದಾರ ಜನಾಂಗಕ್ಕೆ ಬಿದಿರೇ ತಾಯಿ. ಅದರ ಹಸಿರೇ ಇವರ ಉಸಿರು.

ಈ ಬಿದಿರಮ್ಮ ತಾಯಿಯನ್ನೇ ನಂಬಿ ಬದುಕುವ ಮೇದಾರ ಜನಾಂಗ ಬುಟ್ಟಿ, ಮೊರ, ಚಾಪೆ, ಏಣಿ ಮುಂತಾದ ವಸ್ತುಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪ್ಲಾಸ್ಟಿಕ್‌ ವಸ್ತುಗಳ ಭರಾಟೆಯಲ್ಲಿ ಬಿದಿರು ಉತ್ಪನ್ನಗಳು ನಿಧಾನವಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗುತ್ತಿವೆ. ಇದರಿಂದ ಮೇದಾರ ಜನಾಂಗದ ಬದುಕು ಚಿಂತಾಜನಕವಾಗಿದೆ. ಆ ಜನಾಂಗ ಕೂಡ ಹೊಟ್ಟೆಪಾಡಿಗಾಗಿ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸುವಂತಾಗಿದೆ.

ಇದನ್ನೇ ಸವಾಲಾಗಿ ಸ್ವೀಕರಿಸಿದ, ಹುಬ್ಬಳ್ಳಿಯ ಕೇತೇಶ್ವರ ಕಾಲೊನಿಯ ‘ಧಾರವಾಡ ಜಿಲ್ಲಾ ಗಿರಿಜನ ವಿವಿಧ ಉದ್ದೇಶಗಳ (ಲ್ಯಾಂಪ್ಸ್‌) ಸಹಕಾರಿ ಸಂಘ’ದ ಅಧ್ಯಕ್ಷ ಯಲ್ಲಪ್ಪ ಕಾಮಣ್ಣ ಹಳಪೇಟಿ ಮತ್ತು ಪದಾಧಿಕಾರಿಗಳು, ಅಲೆಮಾರಿ ಜನಾಂಗಕ್ಕೆ ನೆಲೆ ಕಲ್ಪಿಸುವ ಯೋಜನೆ ರೂಪಿಸಿದರು. ಅದುವೇ ಆಧುನಿಕ ಶೈಲಿಯ ಬಿದಿರು ಉತ್ಪನ್ನಗಳ ತಯಾರಿಕೆ.

ಮೇದಾರ ಮತ್ತು ಹರಣ ಶಿಕಾರಿ ಜನಾಂಗದ ಮಹಿಳೆಯರಿಗೆ 3 ತಿಂಗಳು ಉಚಿತವಾಗಿ ತರಬೇತಿ ನೀಡಿ, ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ದಿಟ್ಟ ಹೆಜ್ಜೆಯನ್ನು ಇಟ್ಟರು. ಸರ್ಕಾರದ ಅನುದಾನವಿಲ್ಲದೆ ಸಂಘವೇ ಎಲ್ಲ ವೆಚ್ಚಗಳನ್ನು ಭರಿಸಿ, ತರಬೇತಿ ನೀಡಿದ್ದು ವಿಶೇಷ. ಅದರ ಫಲವಾಗಿ 90 ಮಹಿಳೆಯರು ತರಬೇತಿ ಪಡೆದು, ಆಧುನಿಕ ಶೈಲಿಯ ಬಿದಿರು ಉತ್ಪನ್ನಗಳನ್ನು ತಯಾರಿಸಿದ್ದಾರೆ. ಕೀಚೈನ್‌, ಹೇರ್‌ಪಿನ್‌, ಓಲೆ, ಬಳೆ, ಫ್ಲವರ್‌ ಪಾಟ್‌, ಪೆನ್‌ ಪಾಟ್‌, ವಾಲ್‌ ಪಾಟ್‌, ಲ್ಯಾಂಪ್‌, ವಾಸ್ತು ಪ್ರಕಾರದ ಸಾಮಗ್ರಿ, ಬ್ಯಾಸ್ಕೆಟ್‌, ಬೀಸಣಿಗೆ, ಬೋಟ್‌ ಹೌಸ್‌, ಹಡಗು... ಹೀಗೆ 50ಕ್ಕೂ ಅಧಿಕ ಬಗೆಯ ಉತ್ಪನ್ನಗಳನ್ನು ತಯಾರಿಸಿದ್ದಾರೆ.

ಹುಬ್ಬಳ್ಳಿಯಿಂದ ಮೈಸೂರಿಗೆ ಪಯಣ...

ಇಲ್ಲಿ ತಯಾರಾದ ಬಿದಿರು ಉತ್ಪನ್ನಗಳನ್ನು ಮೊದಲ ಬಾರಿಗೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಂಘ ನಿರ್ಧರಿಸಿದೆ. ಅದರಂತೆ, ಮೈಸೂರಿನಲ್ಲಿ ಫೆಬ್ರುವರಿ 10ರಿಂದ 15ರವರೆಗೆ ಆಯೋಜಿಸಿರುವ ಕುಕ್ವಾಡೇಶ್ವರಿ ಅಮ್ಮನವರ ಜಾತ್ರೆ ಮತ್ತು ರಾಜ್ಯ ಮಟ್ಟದ 5ನೇ ಮೇದಾರ ಜನಾಂಗದ ಮಹಾ ಅಧಿವೇಶನಕ್ಕೆ ₹ 1 ಲಕ್ಷ ಮೌಲ್ಯದ ಬಿದಿರು ಉತ್ಪನ್ನಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನವೀನ ವಿನ್ಯಾಸ ಮತ್ತು ಬಣ್ಣಗಳ ಅಲಂಕಾರದಿಂದ ಗ್ರಾಹಕರ ಮನಸೆಳೆಯುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಮೇದಾರ ಮಹಿಳೆಯರ ಅಚಲ ನಂಬಿಕೆ.

‘₹ 10 ಮೌಲ್ಯದ ಕೀ ಚೈನ್‌ನಿಂದ ₹ 3,000 ವರೆಗಿನ ಲ್ಯಾಂಪ್‌ ಸೆಟ್‌ವರೆಗೆ ಬಿದಿರು ಉತ್ಪನ್ನಗಳನ್ನು ಮಹಿಳೆಯರು ತಯಾರಿಸಿದ್ದಾರೆ. ಒಟ್ಟು 90 ಮಹಿಳೆಯರಿಗೆ ತರಬೇತಿ ಕೊಟ್ಟಿದ್ದೇವೆ. ಇದರಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅವರಿಗೆ ನೆರವಾಗುತ್ತದೆ. ಬಿದಿರಿನ ಉತ್ಪನ್ನ ಪರಿಸರ ಸ್ನೇಹಿ ಮತ್ತು ಆರೋಗ್ಯಕರ ಕೂಡ. ಆದ್ದರಿಂದ ಗ್ರಾಹಕರು ಬಿದಿರು ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮೇದಾರ ಜನಾಂಗದ ಮಹಿಳೆಯರ ಕೌಶಲವನ್ನು ಪ್ರೋತ್ಸಾಹಿಸಬೇಕು. ಈ ಕಲೆಯನ್ನು ಉಳಿಸಿ–ಬೆಳೆಸಬೇಕು’ ಎನ್ನುತ್ತಾರೆ ಶಿಕ್ಷಕಿ ಸುನಿತಾ ಕೊರಡೆ.

ಬಿದಿರು ಉತ್ಪನ್ನ ತಯಾರಿಕೆಯ ಜತೆಗೆ, ಟೇಲರಿಂಗ್‌, ಊದುಬತ್ತಿ ತಯಾರಿಕೆ, ಎಂಬ್ರಾಯ್ಡರಿ, ಕ್ಲಾತ್‌ ಬ್ಯಾಗ್‌ ತಯಾರಿಕೆ, ಜರ್ದೋಶಿ ಮತ್ತು ಗಾರ್ಮೆಂಟ್ಸ್‌ ತರಬೇತಿಗಳನ್ನೂ ಸಂಘವು ಹಮ್ಮಿಕೊಂಡಿದೆ. 2014ರಲ್ಲಿ ಸ್ಥಾಪನೆಯಾದ ಈ ಸಂಘದ ಅಡಿ 10 ಸ್ವ ಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 120 ಕುಟುಂಬಗಳಿಗೆ ಸಾಲಸೌಲಭ್ಯ, 130 ಕುಟುಂಬಗಳಿಗೆ ಉಚಿತ ಗ್ಯಾಸ್‌, 200 ಕುಟುಂಬಗಳಿಗೆ ಉಚಿತ ಬಿದಿರು ಸೇರಿದಂತೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮೇದಾರ ಜನಾಂಗಕ್ಕೆ ತಲುಪಿಸಿ, ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ. ತರಬೇತಿ ಪಡೆದ ಮಹಿಳೆಯರಿಗೆ ಶಾಶ್ವತ ಉದ್ಯೋಗ ನೀಡುವ ಯೋಜನೆಯನ್ನೂ ಸಂಘ ಕೈಗೊಂಡಿದೆ.

ಬೊಂಬುಗಳ ಕೊರತೆ

ಹತ್ತು ವರ್ಷಗಳಿಂದೀಚೆಗೆ ಬೊಂಬುಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಪ್ರತೀ ವರ್ಷ ರಾಜ್ಯದಲ್ಲಿರುವ ಮೇದಾರ, ರೈತರು ಮತ್ತು ಬಡವರಿಗೆ ಮನೆ ಕಟ್ಟಿಕೊಳ್ಳಲು 25ರಿಂದ 30 ಲಕ್ಷ ಬೊಂಬುಗಳು ಬೇಕು. ಆದರೆ ಪ್ರಸ್ತುತ 2ರಿಂದ 3 ಲಕ್ಷ ಬೊಂಬುಗಳು ಮಾತ್ರ ಸಿಗುತ್ತಿವೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಿನಲ್ಲಿ ಸಮರ್ಪಕವಾಗಿ ಬಿದಿರು ಬೆಳೆಯುತ್ತಿಲ್ಲ. ಇದರಿಂದ 1 ಲಕ್ಷ ಮೇದಾರ ಗುಡಿ ಕೈಗಾರಿಕೆಗಳು ಸ್ಥಗಿತವಾಗಿವೆ.

ರಾಜ್ಯದಲ್ಲಿ ಬೆಳೆಯುವ ಬಿದಿರುಗಳು ಹೆಚ್ಚು ಮುಳ್ಳುಗಳನ್ನು ಹೊಂದಿರುತ್ತವೆ. ಈ ಬಿದಿರುಗಳಲ್ಲಿ ಉತ್ಪನ್ನ ತಯಾರಿಸಲು ಹೋದರೆ, ಶೇ 70ರಷ್ಟು ವೇಸ್ಟೇಜ್‌ಗೇ ಹೋಗುತ್ತದೆ. ಆದ್ದರಿಂದ ಚೀನಾದಲ್ಲಿ ದೊರೆಯುವ ನೀಳ ಮತ್ತು ಮೃದು ಬಿದಿರುಗಳನ್ನು ನಮ್ಮ ರಾಜ್ಯದ ಕಾಡುಗಳಲ್ಲಿ ಬೆಳೆಸಿದರೆ ಮೇದಾರ ಜನಾಂಗಕ್ಕೆ ಹೆಚ್ಚು ಅನುಕೂಲವಾಗುತ್ತದೆ.

– ಯಲ್ಲಪ್ಪ ಕಾಮಣ್ಣ ಹಳಪೇಟಿ, ಅಧ್ಯಕ್ಷ, ಧಾರವಾಡ ಜಿಲ್ಲಾ ಗಿರಿಜನ ವಿವಿಧ ಉದ್ದೇಶಗಳ (ಲ್ಯಾಂಪ್ಸ್‌) ಸಹಕಾರಿ ಸಂಘ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !