ಹಾರ್ದಿಕ್‌ ಅರ್ಜಿ: ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

ಬುಧವಾರ, ಏಪ್ರಿಲ್ 24, 2019
33 °C

ಹಾರ್ದಿಕ್‌ ಅರ್ಜಿ: ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

Published:
Updated:
Prajavani

ನವದೆಹಲಿ: ಶಿಕ್ಷೆಗೆ ತಡೆ ಕೊಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಲು ಕೋರ್ಟ್‌ ಒಪ್ಪಿಲ್ಲ.

‘ಹೈಕೋರ್ಟ್‌ 2018ರ ಆಗಸ್ಟ್‌ ತಿಂಗಳಲ್ಲಿ ತೀರ್ಪು ನೀಡಿತ್ತು. ಅದಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈಗ ತುರ್ತಾಗಿ ಕೈಗೆತ್ತಿಕೊಳ್ಳುವ ಅಗತ್ಯವಾದರೂ ಏನು’ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ, ನ್ಯಾಯಮೂರ್ತಿಗಳಾದ ಎಂ.ಎಂ. ಶಾಂತನಗೌಡರ ಮತ್ತು ನವೀನ್‌ ಸಿನ್ಹಾ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.

‘2015ರ ಪಾಟಿದಾರ್‌ ಚಳವಳಿಯ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಹಾರ್ದಿಕ್‌ ಅವರ ಕೈವಾಡವಿದೆ ಎಂಬುದು ಸಾಬೀತಾಗಿದೆ’ ಎಂದಿದ್ದ ಮೆಹ್ಸಾನಾ ಸೆಷನ್ಸ್‌ ಕೋರ್ಟ್‌, ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆನಂತರ ಹೈಕೋರ್ಟ್‌ ಇವರ ಶಿಕ್ಷೆಯನ್ನು ಅಮಾನತು ಮಾಡಿದ್ದರೂ, ಸೆಷನ್ಸ್‌ ಕೋರ್ಟ್‌ನ ತೀರ್ಪನ್ನು ರದ್ದು ಮಾಡಿರಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಹಾರ್ದಿಕ್‌ ಅವರು, ಹೈಕೋರ್ಟ್‌ನ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಮಾರ್ಚ್‌ 29ರಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಲ್ಲದೆ ತನ್ನ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ವಿನಂತಿಸಿದ್ದರು.

ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಎರಡು ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ಎದುರಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದ್ದರಿಂದ ಶಿಕ್ಷೆಯ ತೀರ್ಪಿಗೆ ತಡೆಯಾಜ್ಞೆ ಲಭಿಸದ ಹೊರತು ಅವರು ಚುನಾವಣೆಗೆ ಸ್ಪರ್ಧಿಸಲಾಗುವುದಿಲ್ಲ.

‘ಅತಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೈಕೋರ್ಟ್‌ ತೀರ್ಪಿಗೆ ತಡೆಯಾಜ್ಞೆ ನೀಡಲು ಸಾಧ್ಯ. ಹಾರ್ದಿಕ್‌ ಪ್ರಕರಣ ಅಂಥ ಪ್ರಕರಣಗಳ ಸಾಲಿಗೆ ಸೇರುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !