ಬುಧವಾರ, ಜೂನ್ 23, 2021
30 °C

‘ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ನಿಜವಾದ ಮಿತ್ರ’

ಶೆಮಿನ್ ಜಾಯ್ Updated:

ಅಕ್ಷರ ಗಾತ್ರ : | |

Prajavani

ದೆಹಲಿಯ ಚಾಂದಿನಿಚೌಕ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಕೇಂದ್ರ ಸಚಿವ ಹರ್ಷವರ್ಧನ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಪ್ರಮುಖ ಮುಖ. ಮಿದು ಭಾಷಿಯೂ, ವೈದ್ಯರೂ ಆಗಿರುವ ಅವರು, ಈ ಬಾರಿಯೂ ಕಮಲಕ್ಕೆ ಗೆಲುವಿನ ಟಾನಿಕ್ ನೀಡುವ ಉತ್ಸಾಹದಲ್ಲಿದ್ದಾರೆ. ಅಷ್ಟೇ ಅಲ್ಲ, ಮುಂದಿನ ವರ್ಷಾರಂಭದಲ್ಲಿ ಎದುರಾಗಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಕಮಲ ಅರಳಿಸಲು ಹರ್ಷಚಿತ್ತರಾಗಿದ್ದಾರೆ. ಹರ್ಷವರ್ಧನ್ ಜತೆ ‘ಪ್ರಜಾವಾಣಿ’ಯ ಶೆಮಿನ್ ಜಾಯ್ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* 2019ರಲ್ಲಿ ದೊಡ್ಡ ಸ್ಪರ್ಧೆಯನ್ನು ನೀವು ಎದುರಿಸುತ್ತಿದ್ದೀರಿ. ನಿಮ್ಮ ವಿಚಾರಗಳೇನು?
ನಿಮಗೆ ಹಾಗನ್ನಿಸಬಹುದು. ಆದರೆ 2014ರ ಚುನಾವಣೆಗಿಂತ ಈ ಬಾರಿ ಬಿಜೆಪಿ ದೊಡ್ಡ ಬಹುಮತ ದಾಖಲಿಸಲಿದೆ. ದೆಹಲಿಯೂ ಇದಕ್ಕೆ ಹೊರತಲ್ಲ. ಇದಿಷ್ಟೇ ಅಲ್ಲ, 2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ನಮ್ಮದೇ ಪ್ರಾಬಲ್ಯ ಇರಲಿದೆ. ಇದಕ್ಕಾಗಿ ವೇದಿಕೆಯೂ ಸಜ್ಜುಗೊಂಡಿದೆ. 

* ಬಿಜೆಪಿ ಗೆಲ್ಲಲಿದೆ ಎಂದು ಹೇಗೆ ಹೇಳುವಿರಿ?
ಮೋದಿ ಅವರ ಜಯದ ಬಗ್ಗೆ ಬಿಜೆಪಿ ಕಾರ್ಯಕರ್ತರಿಗಷ್ಟೇ ಅಲ್ಲ, ಜನರಲ್ಲೂ ಅದಮ್ಯ ವಿಶ್ವಾಸ ಮನೆಮಾಡಿದೆ. ಯಾವುದೇ ಕ್ಷೇತ್ರದ ಜನರನ್ನು ಮಾತನಾಡಿಸಿದರೂ ನಕಾರಾತ್ಮಕವಾಗಿ ಇಲ್ಲ. ಫಲಿತಾಂಶದ ಬಗ್ಗೆ ಅನುಮಾನಗಳೇ ಇಲ್ಲ. ಮೋದಿ ನೇತೃತ್ವದಲ್ಲಿ ನವ ಭಾರತ ಉದಯವಾಗಲಿದ್ದು, ಭಾರತ ವಿಶ್ವಗುರು ಎನಿಸಿಕೊಳ್ಳಲಿದೆ. 

* ದೆಹಲಿ ಸರ್ಕಾರಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಎಎಪಿ ಹೇಳುತ್ತಿದೆಯಲ್ಲಾ?
ನಾವು ಅವರಿಗೆ ಸಹಕಾರ ನೀಡುತ್ತಿದ್ದೇವೆ, ಆದರೆ ಅವರು ಯಾವುದೇ ಕ್ಷೇತ್ರದಲ್ಲೂ ಸಹಕಾರ ನೀಡುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯನ್ನೇ ಪರಿಗಣಿಸುವುದಾದರೆ, ರಾಜಕೀಯ ಕಾರಣಗಳಿಗಾಗಿ ಅವರು ಉದ್ದೇಶಪೂರ್ವಕವಾಗಿ ಯೋಜನೆಗೆ ಸೇರುತ್ತಿಲ್ಲ. ಇದರಿಂದ ನಷ್ಟ ಬಡವರಿಗೆ. ದೆಹಲಿಗರಿಗೆ ಗರಿಷ್ಠ ನೆರವು ನೀಡಿದ್ದೇವೆ. ಈ ಬಗ್ಗೆ ಯಾರ ಚಕಾರವೂ ಇಲ್ಲ. ದೆಹಲಿ ಸರ್ಕಾರಕ್ಕೆ ಆರೋಪ ಮಾಡುವುದಷ್ಟೇ ಗೊತ್ತಿರುವುದು. ನೀರಿನ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಮುಖ್ಯಮಂತ್ರಿ ನಿಯಂತ್ರಣದಲ್ಲಿ ಜಲಮಂಡಳಿ ಇದೆ. ಸಮಸ್ಯೆ ಪರಿಹಾರಕ್ಕೆ ಅವರು ಏನು ಮಾಡಿದ್ದಾರೆ. ಕೊಟ್ಟ ಭರವಸೆ ಈಡೇರಿಸಿಲ್ಲ. ಎಎಪಿ ಜನವಿರೋಧಿ.

* ನಿಮ್ಮನ್ನು ಮಣಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ನಿಮ್ಮ ಪ್ರತಿಕ್ರಿಯೆ ಏನು?
ಅವರು ಎರಡು ಮತ್ತು ಮೂರನೇ ಸ್ಥಾನಕ್ಕೆ ಹೋರಾಡುತ್ತಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರದ ಸಂಕೇತ. ಎಎಪಿ ಭ್ರಷ್ಟಾಚಾರದ ನೈಜ ಮಿತ್ರ. ನಾಲ್ಕೂವರೆ ವರ್ಷಗಳಲ್ಲಿ ಎಎಪಿ ಸಾಧನೆ ಶೂನ್ಯ. ಬಹುತೇಕ ಶಾಸಕರು ಭ್ರಷ್ಟಾಚಾರ ಮತ್ತು ಅವ್ಯವಹಾರಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವರದ್ದು ನಕಲಿ ಪದವಿ ಹಗರಣವಾದರೆ, ಮತ್ತೆ ಕೆಲವರು ಸಿಬಿಐ ಬಲೆಯೊಳಗೆ ಇದ್ದಾರೆ. ಸೋಲಿನ ಭೀತಿಯ ಕಾರಣಕ್ಕೋ ಏನೋ ಎರಡೂ ಪಕ್ಷಗಳು ಮೈತ್ರಿಗಾಗಿ ಹಾತೊರೆಯುತ್ತಿದ್ದವು. 

* ಕಾಂಗ್ರೆಸ್ ಬಗ್ಗೆ ಏನು ಹೇಳುವಿರಿ?
ಕಾಂಗ್ರೆಸ್‌ನದ್ದು ಮುಗಿದ ಅಧ್ಯಾಯ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನವರು ಸೊನ್ನೆ ಸುತ್ತಿದರು. ಲೋಕಸಭೆ ಚುನಾವಣೆಯಲ್ಲೂ ಇದೇ ಸ್ಥಿತಿ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೂರನೇ ಸ್ಥಾನ. ಸಂಸತ್ತಿನಲ್ಲಿ 44 ಸ್ಥಾನಕ್ಕೆ ಕುಸಿದರು. ಕಾಂಗ್ರೆಸ್‌ ಬಗ್ಗೆ ಯಾರೂ ಆಶಾಭಾವ ಇಟ್ಟುಕೊಂಡಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು