ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದ 'ಕೀಲಿಕೈ' ಹಿಡಿದಿರುವ JJP: ಯಾವುದೀ ಹೊಸ ಪಕ್ಷ?

ಕೌಟುಂಬಿಕ ವಿವಾದ, ಪಕ್ಷಾಂತರಕ್ಕೆ ಹೆಸರಾದ ನಾಡಿನಿಂದ ಸಿಡಿದು ಬಂದ ಮತ್ತೊಂದು ಪಕ್ಷ
Last Updated 24 ಅಕ್ಟೋಬರ್ 2019, 6:43 IST
ಅಕ್ಷರ ಗಾತ್ರ

ಕೌಟುಂಬಿಕ ಜಗಳದಿಂದಾಗಿ ಸಿಡಿದುಬಂದು ಜೆಜೆಪಿ ಎಂಬ ಹೊಸ ಪಕ್ಷವನ್ನು ಕಟ್ಟಿ, ಬೀಗದ ಕೈ ಚಿಹ್ನೆಯೊಂದಿಗೇ ರಾಜಕೀಯದಲ್ಲಿ ಹೊಸ ಆಟ ಆಡುತ್ತಿರುವವರು ದೇವಿಲಾಲ್ ಮರಿಮೊಮ್ಮಗ ದುಶ್ಯಂತ್ ಸಿಂಗ್.

ಈ ಬಾರಿಯ ವಿಧಾನಸಭೆ ಚುನಾವಣೆಗಾಗಿಯೇ ಸೃಷ್ಟಿಯಾದಂತಿರುವ ಪಕ್ಷ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮತ್ತು ದುಶ್ಯಂತ್ ಚೌಟಾಲಾ ಅವರೇ ಇಂದಿನ ಹೀರೋ. ಭಾರತ ರಾಷ್ಟ್ರೀಯ ಲೋಕ ದಳದ ಒಳಗಿನ (INLD) ಕೌಟುಂಬಿಕ ಜಗಳದಿಂದಾಗಿ ಸಿಡಿದು ಸೃಷ್ಟಿಯಾದ ಶಿಶು ಈ ಜೆಜೆಪಿ. ಹುಟ್ಟಿ ಇನ್ನೂ ಒಂದು ವರ್ಷವಾಗಿಲ್ಲ. ಅಷ್ಟರಲ್ಲೇ ಸದ್ದು ಮಾಡಲಾರಂಭಿಸಿದೆ.

ಪಕ್ಷಾಂತರಕ್ಕೆ, ಪಕ್ಷ ವಿಭಜನೆಗೆ ಹೆಸರಾದ ಮತ್ತು ಕೃಷಿಕರ ಅಭಿವೃದ್ಧಿಯ ಮೂಲ ಮಂತ್ರದೊಂದಿಗೆ ಅಧಿಕಾರಕ್ಕೇರಿದ ಕುಟುಂಬವೇ ಚೌಟಾಲಾ ಕುಟುಂಬ. ದೇವಿಲಾಲ್, ಭಜನ್ ಲಾಲ್, ಚೌಟಾಲಾ - ಈ ಹೆಸರುಗಳು 60ರ ದಶಕದಿಂದೀಚೆಗೆ 'ಆಯಾ ರಾಮ್ ಗಯಾ ರಾಮ್' ಹೆಸರಿನೊಂದಿಗೆ ಪಕ್ಷಾಂತರಕ್ಕೆ, ಪಕ್ಷ ವಿಭಜನೆಗೆ, ಮರು ಪಕ್ಷಾಂತರಕ್ಕೆ ಸಾಕಷ್ಟು ಹಸರು ಗಳಿಸಿದ್ದವು.

ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ, ಸಂಸದ ದುಶ್ಯಂತ್ ಚೌಟಾಲ ಅವರು 2018ರ ಡಿಸೆಂಬರ್ 9ರಂದು ಜಿಂದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಜನನಾಯಕ ಜನತಾ ಪಕ್ಷವನ್ನು ಘೋಷಿಸಿದ್ದರು.

2018ರ ಅಕ್ಟೋಬರ್ ತಿಂಗಳಲ್ಲಿ ಹರಿಯಾಣದ ಗೋಹಾನದಲ್ಲಿ ನಡೆದ ಐಎನ್ಎಲ್‌ಡಿ ರ‍್ಯಾಲಿಯೊಂದರಲ್ಲಿ ಓಂ ಪ್ರಕಾಶ್ ಚೌಟಾಲಾರ ಕಿರಿಯ ಪುತ್ರ ಅಭಯ್ ಚೌಟಾಲಾರ ಮೇಲೆ ಹಲ್ಲೆ ನಡೆದಿತ್ತು. ಇದಕ್ಕೆ ಮೊಮ್ಮಗ ದುಶ್ಯಂತ್ ಹಾಗೂ ಕಿರಿಯ ಸಹೋದರ ದಿಗ್ವಿಜಯ್ ಚೌಟಾಲಾ ಕಾರಣ ಎಂದು ದೂಷಿಸಲಾಗಿತ್ತು. ಈ ಕಾರಣಕ್ಕೆ, ದುಶ್ಯಂತ್ ಹಾಗೂ ದಿಗ್ವಿಜಯ್ ಅವರನ್ನು INLD ಯಿಂದ ಉಚ್ಚಾಟಿಸಲಾಯಿತು. ಇದಕ್ಕೆ ಬೆಂಬಲಿಸಿದ ಇವರಿಬ್ಬರ ತಂದೆ ಅಜಯ್ ಚೌಟಾಲಾನ್ನೂ ಪಕ್ಷದಿಂದ ಉಚ್ಚಾಟಿಸಲಾಯಿತು.

ಜನನಾಯಕ ಎಂಬುದು, ವಿ.ಪಿ.ಸಿಂಗ್ ಹಾಗೂ ಚಂದ್ರಶೇಖರ್ ನೇತೃತ್ವದ ಸಂಯುಕ್ತ ರಂಗ ಸರಕಾರಗಳಲ್ಲಿ ಮಾಜಿ ಉಪಪ್ರಧಾನಿಯಾಗಿದ್ದ ಚೌಧರಿ ದೇವಿ ಲಾಲ್ ಅವರಿಗಿದ್ದ ಜನಪ್ರಿಯ ಹೆಸರು. ದೇವಿಲಾಲ್ ಅವರು ಎರಡು ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಇವರ ಪುತ್ರ ಓಂ ಪ್ರಕಾಶ್ ಚೌಟಾಲಾ, ನಾಲ್ಕು ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಓಂ ಪ್ರಕಾಶ್ ಚೌಟಾಲಾ ಮತ್ತು ಪುತ್ರ ಅಜಯ್ ಚೌಟಾಲಾ ಇಬ್ಬರೂ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿದ್ದಾರೆ. ಕಿರಿಯ ಪುತ್ರ ಅಭಯ್ ಚೌಟಾಲಾರೇ INLD ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. 2014ರ ಚುನಾವಣೆಯಲ್ಲಿ INLD 18 ಸ್ಥಾನಗಳನ್ನು ಗಳಿಸಿತ್ತು. ದುಶ್ಯಂತರ ತಾಯಿ ನೈನಾ ಚೌಟಾಲಾ ಸೇರಿದಂತೆ ಕನಿಷ್ಠ ಮೂವರು ಶಾಸಕರು ಜೆಜೆಪಿ ಸೇರಿದ್ದಾರೆ.

ಇವನ್ನೂ ಓದಿ:

ವಿಶೇಷವೆಂದರೆ, ಹೊಸದಾಗಿ ರಚನೆಯಾಗಿರುವ ಈ ಪಕ್ಷಕ್ಕೆ ಚುನಾವಣಾ ಆಯೋಗ ಒದಗಿಸಿರುವ ಚಿಹ್ನೆ ಕೀಲಿಕೈ! ಈ ಬಾರಿಯ ಚುನಾವಣೆಯಲ್ಲಿ ಹರಿಯಾಣದ ಅಧಿಕಾರ ಕೇಂದ್ರದ ಕೀಲಿಕೈ ಜೆಜೆಪಿ ಕೈಗೆ ಸಿಗುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT