ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಮತ್ತೆ ಗಲಭೆ

Last Updated 20 ಜೂನ್ 2019, 20:23 IST
ಅಕ್ಷರ ಗಾತ್ರ

ಕೋಲ್ಕತ್ತ: ಉತ್ತರ 24 ಪರಗಣ ಜಿಲ್ಲೆಯಲ್ಲಿ ಗುರುವಾರ ಮತ್ತೆ ಗಲಭೆ ಸಂಭವಿಸಿದ್ದು, ಒಬ್ಬ ವ್ಯಕ್ತಿ ಸತ್ತಿದ್ದು ಮೂವರಿಗೆ ಗಾಯಗಳಾಗಿವೆ.

ಘಟನೆಯ ಬಳಿಕ ಜಿಲ್ಲೆಯ ಭಾಟಪಾರ ಮತ್ತು ಜಗತ್‌ದಲ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

‘ಭಾಟಪಾರದಲ್ಲಿ ಕೆಲವು ಸಮಾಜವಿರೋಧಿ ಶಕ್ತಿಗಳಿವೆ. ಈಗ ಹೊರಗಿನ ಕೆಲವು ಶಕ್ತಿಗಳೂ ಅವರನ್ನು ಸೇರಿಕೊಂಡು ಶಾಂತಿ ಕದಡುತ್ತಿವೆ. ಘಟನಾ ಸ್ಥಳದಲ್ಲಿ ಕ್ಷಿಪ್ರ ಕಾರ್ಯಪಡೆ ನಿಯೋಜಿಸಲಾಗಿದೆ’ ಎಂದು ಗೃಹ ಕಾರ್ಯದರ್ಶಿ ಆಲಾಪನ್‌ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಭಾಟಪಾರದಲ್ಲಿ ಹೊಸದಾಗಿ ಆರಂಭಿಸಲಾದ ಪೊಲೀಸ್‌ ಠಾಣೆಯ ಸಮೀಪದಲ್ಲೇ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ನಾಡ ಬಾಂಬ್‌ಗಳನ್ನು ಸಿಡಿಸಲಾಗಿದೆ. ಅಲ್ಲದೆ ಎರಡೂ ಗುಂಪಿನವರು ಗಾಳಿಯಲ್ಲಿ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ತಪ್ಪಿತಸ್ಥರನ್ನು ಶಿಕ್ಷಿಸಿ: ಮಮತಾಗೆ ಮುಸ್ಲಿಮರ ಪತ್ರ
‘ಕರ್ತವ್ಯನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ಮಾಡಿದ ಮತ್ತು ರೂಪದರ್ಶಿ ಉಶೋಷಿ ಸೇನ್‌ಗುಪ್ತ ಅವರಿಗೆ ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ಮುಸ್ಲಿಂ ಮುಖಂಡರ ತಂಡವೊಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರಮುಖೇನ ಗುರುವಾರ ಮನವಿ ಮಾಡಿದೆ.

ಮುಸ್ಲಿಂ ಸಮುದಾಯದವರನ್ನು ರಕ್ಷಿಸಲಾಗುತ್ತಿದೆ ಅಥವಾ ಅವರ ತುಷ್ಟೀಕರಣ ನಡೆಯುತ್ತಿದೆ ಎಂಬ ಭಾವನೆಯನ್ನು ದೂರಮಾಡುವ ಸಲುವಾಗಿ ಅವರು ಪತ್ರ ಬರೆದಿದ್ದಾರೆ.

‘ಇತ್ತೀಚಿನ ಎರಡು ಘಟನೆಗಳಿಂದ ನಾವು ತೀವ್ರವಾಗಿ ಚಿಂತಿತರಾಗಿದ್ದೇವೆ. ಎರಡೂ ಪ್ರಕರಣಗಳಲ್ಲಿ ಹಲ್ಲೆ ನಡೆಸಿದವರು ನಮ್ಮ ಸಮುದಾಯದವರೇ ಆಗಿದ್ದಾರೆ. ಇದರಿಂದ ನಮಗೆ ಬೇಸರ ಮತ್ತು ಮುಜುಗರ ಆಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಎರಡು ಪ್ರಕರಣಗಳಷ್ಟೇ ಅಲ್ಲ, ಮುಸ್ಲಿಮರು ನಡೆಸಿದ ಇಂಥ ಪ್ರತಿಯೊಂದು ಘಟನೆಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಮುಸ್ಲಿಂ ಎಂಬ ಕಾರಣಕ್ಕೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಕೋಲ್ಕತ್ತದ ವಿವಿಧ ಪ್ರದೇಶಗಳಲ್ಲಿ ನೆಲೆಸುವ 46 ಮಂದಿ ಮುಸ್ಲಿಂ ನಾಯಕರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

‘ಸರ್ಕಾರವು ವೋಟ್‌ಬ್ಯಾಂಕ್‌ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಮುಂದಿನ ತಲೆಮಾರಿನ ಒಳಿತನ್ನು ಗಮನದಲ್ಲಿಟ್ಟು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಈ ಪ್ರಕ್ರಿಯೆ ಆರಂಭಿಸಿದ ಕೂಡಲೇ ಸಮಸ್ಯೆಗಳು ತಾವಾಗಿಯೆ ಪರಿಹಾರ ಕಾಣಲಾರಂಭಿಸುತ್ತವೆ’ ಎಂದು ಈ ಪತ್ರವನ್ನು ಸಿದ್ಧಪಡಿಸಿದ ಸಂವಹನ ತಜ್ಞ ಮುದರ್‌ ಪತೆರ್ಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT