ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕ್ಕೆ ವಿಸ್ತರಿಸಿದ ಮಳೆಯ ಆರ್ಭಟ

ಪಂಜಾಬ್‌, ಹರಿಯಾಣ, ಹಿಮಾಚಲ ಪ್ರದೇಶ, ದೆಹಲಿಯಲ್ಲಿ ಪ್ರವಾಹ ಭೀತಿ l 35 ಮಂದಿ ಸಾವು, 18 ಮಂದಿ ನಾಪತ್ತೆ
Last Updated 19 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಚಂಡಿಗಡ : ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತದ ಪಂಜಾಬ್‌, ಹರಿಯಾಣ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದ ಜನರು ತತ್ತರಿಸಿ ಹೋಗಿದ್ದಾರೆ. ಒಟ್ಟಾರೆ ಸುಮಾರು 35ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 18ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅನೇಕ ಕಡೆಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ.

ಯಮುನಾ ನದಿಯು ಉಕ್ಕಿಹರಿದು ಹರಿಯಾಣದ ರೂಪ್‌ನಗರ್‌ ಜಿಲ್ಲೆಯ ಕರ್ನಾಲ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಒಂಬತ್ತು ಮಂದಿಯನ್ನು ಭಾರತೀಯ ವಾಯುಪಡೆಯವರು ಸೋಮವಾರ ರಕ್ಷಿಸಿದರು.

ಲುಧಿಯಾನ ಜಿಲ್ಲೆಯ ಹತ್ತು ಹಳ್ಳಿಗಳಿಗೆ ಮಳೆಯ ನೀರು ನುಗ್ಗಿದ್ದು ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ರೋಪಡ್‌ ಅಣೆಕಟ್ಟೆಯಿಂದ 2.5 ಲಕ್ಷ ಕ್ಯುಸೆಕ್‌ ನೀರು ಹೊರಬಿಟ್ಟಿದ್ದರಿಂದ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಹಾಕೋಟ್‌, ನಕೋದರ್‌ ಹಾಗೂ ಫಿಲ್ಲೋರ್‌ಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಗೆ 25 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಮಳೆಯಿಂದಾಗಿ ಸತ್ತವರ ಸಂಖ್ಯೆಯು 46ಕ್ಕೆ ಏರಿದೆ. ರಾಜ್ಯದ ಕೆಲವು ಕಡೆ ಮುಂದಿನ 24 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ ಸರಾಸರಿ 102.5 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿ ಇದು ಈವರೆಗಿನ ದಾಖಲೆಯಾಗಿದೆ.

ಪ್ರವಾಹದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ 500ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಆನೇಕ ರಸ್ತೆಗಳು ಮುಳುಗಡೆಯಾಗಿವೆ. ಹತ್ತಾರು ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದರಿಂದ ನೀರು ಸರಿಯಾಗಿ ಹರಿದುಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡದಿಂದ 22 ಮಂದಿ ಸತ್ತಿದ್ದು ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಸುಮಾರು ₹ 574 ಕೋಟಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಾಯ ಮಟ್ಟ ಮೀರಿದ ಯಮುನೆ

ಯಮುನಾ ನದಿಯು ಸಹ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಇದರಿಂದಾಗಿ ದೆಹಲಿಯ ಕೆಲವು ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತುರ್ತು ಸಭೆ ಕರೆದು ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

‘ಹರಿಯಾಣದ ಹಥಿನಿ ಕುಂಡ ಬ್ಯಾರೇಜ್‌ನಿಂದ ಭಾನುವಾರ ಸಂಜೆ 8.28 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಟ್ಟಿದ್ದರಿಂದ ಯಮುನಾ ನದಿಯ ಹರಿವಿನ ಮಟ್ಟವು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಸೋಮವಾರ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿಗೆ ಸ್ಥಳಾಂತರಗೊಳ್ಳುವಂತೆ ದೆಹಲಿಯ ತಗ್ಗು ಪ್ರದೇಶದ ನಿವಾಸಿಗಳಿಗೆ ಮನವಿ ಮಾಡಲಾಗಿದೆ. ಯಮುನಾ ನದಿಯ ಹಳೆಯ ಸೇತುವೆ ಮೇಲೆ ಸಂಚಾರವನ್ನು ನಿರ್ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಯಮುನಾ ನದಿಯು ದೆಹಲಿಯ ಆರು ಜಿಲ್ಲೆಗಳಲ್ಲಿ ಹರಿಯುತ್ತಿದ್ದು, ಆ ಎಲ್ಲಾ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

ಉತ್ತರಾಖಂಡದಲ್ಲಿ ಮೇಘಸ್ಫೋಟ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ಮೇಘಸ್ಫೋಟವಾಗಿದೆ. ರಾಜ್ಯದಲ್ಲಿ 10 ಮಂದಿ ಸತ್ತಿದ್ದು, ಸುಮಾರು 6 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರನ್ನು ಸೇನಾಪಡೆಯವರು ರಕ್ಷಿಸಿದ್ದಾರೆ. ‘ಮೇಘಸ್ಫೋಟ ಸಂಭವಿಸಿದ ಉತ್ತರಕಾಶಿಯೊಂದರಲ್ಲೇ 9 ಮಂದಿ ಸತ್ತಿದ್ದಾರೆ. ಭಾರಿ ಮಳೆಗೆ ತುತ್ತಾದ ಗ್ರಾಮಗಳಲ್ಲಿ ಈ ವರೆಗೆ 10 ಶವಗಳು ಪತ್ತೆಯಾಗಿವೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 12ಕ್ಕೂ ಹೆಚ್ಚು ಗ್ರಾಮಗಳು ಈಗಲೂ ಪ್ರವಾಹದಲ್ಲಿ ಸಿಲುಕಿವೆ. 13ರಲ್ಲಿ ಒಂಬತ್ತು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

lಪಂಜಾಬ್‌ನಲ್ಲಿ ಮೂವರ ಸಾವು. 209ಕ್ಕೂ ಹೆಚ್ಚು ಗ್ರಾಮಗಳ ಜನರ ಸ್ಥಳಾಂತರ

lಲುಧಿಯಾನ ಭೋಲಾಪುರ್‌ನಲ್ಲಿರುವ ಸತಲೆಜ್‌ನದಿಯ ಧುಸಿ ಬ್ಯಾರೇಜ್‌ ಒಡೆದು ಹತ್ತು ಹಳ್ಳಿಗಳು ಜಲಾವೃತ, ಜನರ ಸ್ಥಳಾಂತರ

l71 ಗ್ರಾಮಗಳ 696 ಜನರ ರಕ್ಷಣೆ

lರೂಪ್‌ನಗರ್‌ ಜಿಲ್ಲೆಯ 700ಮಂದಿ ಸೇರಿ 1000 ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ

lಭಾಕ್ರಾ ಅಣೆಕಟ್ಟೆಯಲ್ಲಿ ನಿಗದಿತ ಮಟ್ಟಕ್ಕಿಂತ ಒಂದು ಅಡಿ ಹೆಚ್ಚು ನೀರು ಸಂಗ್ರಹ

lಕಟ್ಟೆಚ್ಚರದಿಂದ ಇರುವಂತೆ ಸತಲೆಜ್‌ ನದಿ ತಟದ ಜನರಿಗೆ ಸೂಚನೆ

lಹರಿಯಾಣದ ಹಥಿನಿ ಕುಂಡ ಬ್ಯಾರೇಜ್‌ನಲ್ಲಿ ಅಪಾಯ ಮಟ್ಟಕ್ಕೆ ಏರಿರುವ ನೀರಿನ ಸಂಗ್ರಹ. ಪ್ರವಾಹದ ಎಚ್ಚರಿಕೆ

lಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಜಮ್ಮು– ಶ್ರೀನಗರ ಹೆದ್ದಾರಿ ಮೂರು ಗಂಟೆಗಳ ಕಾಲ ಬಂದ್‌

lಜಮ್ಮುವಿನ ತಾವಿ ನದಿಯ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ನಾಲ್ವರು ಮೀನುಗಾರರನ್ನು ಭಾರತೀಯ ವಾಯುಪಡೆಯವರು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದರು.

lಗಂಗಾ ನದಿಯೂ ಸೇರಿದಂತೆ ಉತ್ತರಪ್ರದೇಶದ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಅನೇಕ ಗ್ರಾಮಗಳು ಜಲಾವೃತ

lಹರಿಯಾಣದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಒಂಬತ್ತು ಮಂದಿಯ ರಕ್ಷಣೆ

lಹಲವು ರೈಲುಗಳ ಸಂಚಾರ ರದ್ದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT