ಗುರುವಾರ , ಆಗಸ್ಟ್ 22, 2019
27 °C

ಕೇರಳದಲ್ಲಿ ಮಹಾ ಮಳೆ: ಮಲಪ್ಪುರಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ; ಪ್ರವಾಹ ಭೀತಿ

Published:
Updated:

ಕೋಯಿಕ್ಕೋಡ್: ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ಉತ್ತರ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ನಲ್ಲಿ ಬಹುತೇಕ ಮನೆ, ಕಟ್ಟಡಗಳು ನೀರಿನಲ್ಲಿ ಮುಳುಗಿದೆ. ಕಳೆದ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಇಲ್ಲಿನ ಭೂ ಪ್ರದೇಶಗಳು ಜಲಾವೃತವಾಗಿದೆ.

ನಿಲಂಬೂರ್ ಸಂಪೂರ್ಣ ಜಲಾವೃತವಾಗಿದ್ದು ಜನರನ್ನು ಸುರಕ್ಷಿತ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ಬುಧವಾರ ರಾತ್ರಿಯಿಂದ ನಿಲಂಬೂರ್ ಮತ್ತು ಸಮೀಪ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚುತ್ತಿದ್ದರೂ ಮನೆ ಬಿಟ್ಟು ಸುರಕ್ಷಿತ ಕೇಂದ್ರಗಳಿಗೆ ಹೋಗಲು ಜನರು ನಿರಾಕರಿಸುತ್ತಿದ್ದಾರೆ. ಮಳೆ ನಿಂತು ನೀರಿನ ಮಟ್ಟ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಜನರು.

ನೆಡುಕ್ಕಯಂ, ಮುಂಡಕ್ಕಡಲ್ ಕಾಲನಿಯಲ್ಲಿರುವ ನೂರರಷ್ಟು ಜನರು ಮಳೆ ನೀರಲ್ಲಿ ಸಿಲುಕಿಕೊಂಡಿದ್ದು, ಗುರುವಾರ ಬೆಳಗ್ಗೆ ಇವರನ್ನು ರಕ್ಷಿಸಲಾಗಿದೆ. ಗುರುವಾರವೂ ಮಳೆ ಸುರಿಯುತ್ತಿದ್ದು, ನೀರಿನ ಮಟ್ಟ ಏರುತ್ತಲೇ ಇದೆ.

ಕಳೆದ ವರ್ಷ ಆಗಸ್ಟ್ 8ರಂದು ನಿಲಂಬೂರಿನಲ್ಲಿ ಪ್ರವಾಹವುಂಟಾಗಿತ್ತು. ಒಂದು ವರ್ಷದ ನಂತರ ಅದೇ ಪರಿಸ್ಥಿತಿ ಬರಬಹುದೇ ಎಂದು ಇಲ್ಲಿನ ಜನರು ಆತಂಕಕ್ಕೀಡಾಗಿದ್ದಾರೆ.

ಮಳೆಯೊಂದಿಗೆ ಬಿರುಗಾಳಿಯೂ ಬೀಸಿದ್ದು ಕಣ್ಣೂರ್ ಜಿಲ್ಲೆ ಕಾಣಿಚ್ಚಾರ್ ಎಂಬಲ್ಲಿ ಮನೆ, ಮರಗಳು ಧರೆಗುರುಳಿವೆ. ಕೋಯಿಕ್ಕೋಡ್, ಮಲಪ್ಪುರಂ ಜಿಲ್ಲೆಯ ಕರಾವಳಿ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಕೊಟ್ಟಿಯೂರ್ ಚಪ್ಪಮಲ ಅಡಯ್ಕತ್ತೋಡ್, ಕಣ್ಣಪ್ಪನ್‌ಕುಂಡ್ ಮುಟ್ಟಿಕುನ್ನ್ ಎಂಬಲ್ಲಿ ಭೂಕುಸಿತ ಉಂಟಾಗಿದೆ. ವಳಪಟ್ಟಣಂ ಹೊಳೆ ತುಂಬಿ ಹರಿಯುತ್ತಿದೆ.

ಮಲಪ್ಪುರಂ ನೆಡುಕ್ಕುಂಡ ಕಾಲನಿಯಲ್ಲಿ ನೀರಲ್ಲಿ ಮುಳುಗಿದೆ. ವಯನಾಡ್  ತೋಣಿಚ್ಚಾಲ್, ಮಕ್ಕಯೋಡ್ ಪ್ರದೇಶದಲ್ಲಿ ಭೂಕುಸಿತ ಮತ್ತು ಪ್ರವಾಹವುಂಟಾಗಿದೆ.ತಾಮರಶ್ಶೇರಿ ಚುರಂ (ತಾಮರಶ್ಶೇರಿ ಘಾಟ್) ನಲ್ಲಿ ಭೂಕುಸಿತವುಂಟಾದ ಕಾರಣ ಸಾರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.

ಇಡುಕ್ಕಿ ವಂಡಿಪ್ಪೆರಿಯಾರ್ ಎಂಬಲ್ಲಿ ರಸ್ತೆ ಜಲಾವೃತವಾಗಿದ್ದು, ಜಿಲ್ಲೆಯ ಹಲವಾರು ಭಾಗಗಳಲ್ಲಿ ಭೂಕುಸಿತವುಂಟಾಗಿದೆ. ಮುಲಮಟ್ಟ ಎಂಬಲ್ಲಿ ಅಪಾರ ಹಾನಿ ಸಂಭವಿಸಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಇಡುಕ್ಕಿಯಲ್ಲಿ ಅಪಾರ ನಾಶ ನಷ್ಟವುಂಟಾಗಿರುವ ಬಗ್ಗೆ ವರದಿಯಾಗಿದ್ದು, ಮುನ್ನಾರ್‌ನಲ್ಲಿ ನೀರಿನ ಪ್ರಮಾಣ ಅಧಿಕವಾಗಿದೆ. ಮುನ್ನಾರ್ ಪೆರಿಯವರದಲ್ಲಿರುವ ತಾತ್ಕಾಲಿಕ ಸೇತುವೆ ಕುಸಿದ ಕಾರಣ ಮರಯೂರ್ ಪ್ರದೇಶ ಸಂಪರ್ಕ ಕಡಿದುಕೊಂಡಿದೆ. ನೀರಿನ ಮಟ್ಟ ಹೆಚ್ಚಾದ ಕಾರಣ  ಪಾಂಬ್ಲ, ಕಲ್ಲಾರ್‌ಕುಟ್ಟಿ ಡ್ಯಾಮ್‌ಗಳಲ್ಲಿ ನೀರು ಹೊರ ಹರಿಯ ಬಿಡಲಾಗಿದೆ.

ಮಲಂಕರ ಡ್ಯಾಮ್‌ನಿಂದಲೂ ಹೆಚ್ಚಿನ ನೀರು ಹೊರ ಬಿಡಲಾಗುವುದು. ಮರಯೂರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಮುರಿದು ಬಿದ್ದಿದೆ. ಅರಯಾತ್ತಿನಿಮಣ್ಣಿಲ್ ಸಂಪರ್ಕ ರಸ್ತೆ ಮುಳುಗಿದ್ದು, ಅಲ್ಲಿನ ಕುಟುಂಬಗಳು ಸಂಕಷ್ಟದಲ್ಲಿವೆ. ಕುಟ್ಟನಾಡಿನಲ್ಲಿಯೂ ಮಳೆಯ ರೌದ್ರಾವತಾರಕ್ಕೆ ಅಪಾರ ಹಾನಿ ಸಂಭವಿಸಿದೆ.

ಪರಶ್ಶಿನಿಕಡವ್ ದೇವಾಲಯಕ್ಕೆ ನುಗ್ಗಿದ ನೀರು 
ಕಣ್ಣೂರ್: ಇಲ್ಲಿನ ಪ್ರಸಿದ್ಧ ದೇವಾಲಯ ಪರಶ್ಶಿನಿ ಕಡವ್ ಮುತ್ತಪ್ಪ ದೇಗುಲದೊಳಗೆ ಗುರುವಾರ ನೀರು ನುಗ್ಗಿದೆ. ದೇವಾಲಯದೊಳಗೆ ಇದ್ದ ಭಕ್ತರನ್ನು ದೋಣಿಯ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಬುಧವಾರ ಬೆಳಗ್ಗಿನಿಂದ ಕಣ್ಣೂರ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಜೋರಾಗಿತ್ತು. ಇರಿಟ್ಟಿ, ಶ್ರೀಕಂಠಪುರಂ, ಪರಶ್ಶಿನಿ ಕಡವ್, ಕೊಟ್ಟಿಯೂರ್, ಕೇಳಕಂ ಮೊದಲಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.ಇರಟ್ಟಿಯಲ್ಲಿ ನಾಲ್ಕು ನೆರೆ ಸಂತ್ರಸ್ತರ ಶಿಬಿರಗಳನ್ನು ತೆರೆಯಲಾಗಿದೆ.
 

Post Comments (+)