ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ರಾಜ್ಯಪಾಲ ಆರಿಫ್‌ಗೆ ‘ಗೋ ಬ್ಯಾಕ್’ ಘೋಷಣೆ ಕೂಗಿದ ಕಾಂಗ್ರೆಸ್‌ ಶಾಸಕರು

ವಿಧಾನಸಭೆಯಲ್ಲಿ ಹೈ ಡ್ರಾಮಾ
Last Updated 29 ಜನವರಿ 2020, 6:27 IST
ಅಕ್ಷರ ಗಾತ್ರ

ತಿರುವನಂತಪುರ:ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬುಧವಾರ ಬೆಳಿಗ್ಗೆ ವಿಧಾನಸಭೆ ಪ್ರವೇಶಿ ಭಾಷಣ ಮಾಡಲು ತೆರಳುವ ವೇಳೆ ಪ್ರತಿಪಕ್ಷ ಯುಡಿಎಫ್ (ಕಾಂಗ್ರೆಸ್) ಶಾಸಕರು ತಡೆದಿದ್ದಾರೆ.ರಾಜ್ಯಪಾಲರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಹೇಳಿಕೆ ನೀಡಿದ್ದಕ್ಕೆ ಯುಡಿಎಫ್ ಶಾಸಕರು ಈ ರೀತಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ರಾಜ್ಯಪಾಲರು ವಿಧಾನಸಭೆಗೆ ಬಂದಾಗ ಯುಡಿಎಫ್ ಶಾಸಕರು ‘ಗೋ ಬ್ಯಾಕ್’, ‘ನೊ ಟು ಸಿಎಎ’, ಹಾಗೂ ‘ಆರ್‌ಎಸ್‌ಎಸ್ ಏಜೆಂಟ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಭಾಷಣ ಮಾಡಲು ತೆರಳದಂತೆ ತಡೆದಿದ್ದಾರೆ. ಸ್ಪೀಕರ್ ಪೀಠದ ಎದುರಿಗೆ ಬಂದ ಶಾಸಕರು ಸಿಎಎ ವಿರುದ್ಧ ಫಲಕಗಳನ್ನೂ ಪ್ರದರ್ಶಿಸಿದ್ದಾರೆ. ಈ ವೇಳೆ, ರಾಜ್ಯಪಾಲರಿಗೆ ಅಡ್ಡಿಪಡಿಸದಂತೆ ಶಾಸಕರಲ್ಲಿ ಸ್ಪೀಕರ್ ಶ್ರೀರಾಮಕೃಷ್ಣನ್ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಮಾರ್ಷಲ್‌ಗಳು ಬಂದು ರಾಜ್ಯಪಾಲರಿಗೆ ದಾರಿ ಮಾಡಿಕೊಟ್ಟಿದ್ದಾರೆ.

ನಂತರ ಸರ್ಕಾರದ ನೀತಿಗಳ ಬಗ್ಗೆ ಭಾಷಣ ಮಾಡಿದ ರಾಜ್ಯಪಾಲರು ಸಿಎಎ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯದ ಅಂಶಗಳನ್ನೂ ಉಲ್ಲೇಖಿಸಿದ್ದಾರೆ. ಅದಕ್ಕೆ ತಮ್ಮ ಅಸಮ್ಮತಿಯನ್ನೂ ಸೂಚಿಸಿದ್ದಾರೆ. ಭಾಷಣದ ವೇಳೆಯೂ ಘೋಷಣೆಗಳನ್ನು ಕೂಗಿ ಅಡ್ಡಿಪಡಿಸಲು ಯತ್ನಿಸಿದ ಶಾಸಕರು, ಪ್ರತಿಪಕ್ಷ ನಾಯಕರಮೇಶ್‌ ಚೆನ್ನಿತ್ತಲ ಕರೆಯ ಮೇರೆಗೆ ಕಲಾಪ ಬಹಿಷ್ಕರಿಸಿದ್ದಾರೆ.

ಸಿಎಎ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಇತ್ತೀಚೆಗೆ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ರಾಜ್ಯಪಾಲರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿಎಎ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೂ ಸರಿಯಲ್ಲ ಎಂದಿದ್ದರು. ವಿಧಾನಸಭೆಯು ಸಿಎಎ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿರುವ ರಾಜ್ಯಪಾಲರ ವಿರುದ್ಧ ಪ್ರತಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT