ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ: ನೀವು ತಿಳಿಯಬೇಕಾದ 10 ಅಂಶಗಳು

7
ಕಾಂಗ್ರೆಸ್ ಕೈ ಹಿಡಿಯಿತೆ ಮೃದು ಹಿಂದುತ್ವದ ರಣತಂತ್ರ?

ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ: ನೀವು ತಿಳಿಯಬೇಕಾದ 10 ಅಂಶಗಳು

Published:
Updated:

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಹೋರಾಟ ಕಂಡುಬರುತ್ತಿದೆ. ಮಧ್ಯಾಹ್ನ 12.05ರ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿರುವ ಮಧ್ಯಪ್ರದೇಶಕ್ಕೆ ಬಿಜೆಪಿ ಪ್ರಾಬಲ್ಯ ಹೊಂದಿರುವ ಉತ್ತರ ಭಾರತದ ರಾಜಕಾರಣದಲ್ಲಿ ಪ್ರಮುಖ ಸ್ಥಾನವಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಾಲ್ಕನೇ ಬಾರಿಗೆ ಆಡಳಿತ ನಡೆಸಲು ಅವಕಾಶ ಕೋರಿ ಜನರ ಮುಂದೆ ಹೋಗಿದ್ದಾರೆ. ಹಿರಿಯ ನಾಯಕ ಕಮಲ್‌ನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್‌ಗೆ ಹಿಂದಿ ಭಾಷಿಕರ ಹೃದಯ ಭಾಗದಲ್ಲಿ ಅಧಿಕಾರ ಹಿಡಿಯುವ ಆಸೆ ಇದೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳು ಇಲ್ಲಿವೆ...

1) ಮಧ್ಯಪ್ರದೇಶದ ಒಟ್ಟು 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 28ರಂದು ಚುನಾವಣೆ ನಡೆದಿತ್ತು. ಒಟ್ಟು 2900 ಅಭ್ಯರ್ಥಿಗಳು ಕಣದಲ್ಲಿದ್ದರು. ನವೆಂಬರ್ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 165, ಕಾಂಗ್ರೆಸ್ 58 ಸ್ಥಾನ ಪಡೆದಿದ್ದವು.

2) 15 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಶಿವರಾಜ್‌ಸಿಂಗ್ ಚೌಹಾಣ್ ಅವರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು. ಬುಧ್ನಿ ಕ್ಷೇತ್ರದಿಂದ ಚೌಹಾಣ್ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. 2003ರಿಂದ ಅವರು ಈ ಕ್ಷೇತ್ರದಲ್ಲಿ ಜಯಗಳಿಸುತ್ತಿದ್ದಾರೆ. ಕಾಂಗ್ರೆಸ್‌ ಗೆಲುವು ಸಾಧಿಸಿದರೆ ಕಮಲ್‌ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಸ್ಪರ್ಧೆ ನಡೆಯಲಿದೆ.

3) 15 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಛತ್ತೀಸಗಡದಂತೆ ಇಲ್ಲಿಯೂ ಬಿಜೆಪಿ ಆಡಳಿತ ವಿರೋಧಿ ಅಲೆಯ ಸವಾಲು ಎದುರಿಸುತ್ತಿದೆ. ಮಧ್ಯಪ್ರದೇಶದಿಂದ ಲೋಕಸಭೆಗೆ 15 ಸದಸ್ಯರು ಆಯ್ಕೆಯಾಗುತ್ತಾರೆ. ಹೀಗಾಗಿ ರಾಷ್ಟ್ರರಾಜಕಾರಣದಲ್ಲಿ ಹಿಡಿತ ಸಾಧಿಸುವ ಉದ್ದೇಶ ಹೊಂದಿರುವ ಬಿಜೆಪಿ–ಕಾಂಗ್ರೆಸ್‌ಗೆ ಮಧ್ಯಪ್ರವೇಶ ಮಹತ್ವದ ರಾಜ್ಯವಾಗಿದೆ.

4) ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉದ್ಯೋಗ ಸೃಷ್ಟಿ, ಕೃಷಿ ಸುಧಾರಣೆ ಮತ್ತು ಮೀಸಲಾತಿಯ ಮರು ಹೊಂದಾಣಿಕೆ ಪ್ರಧಾನವಾಗಿ ಕಾಣಿಸುತ್ತದೆ. ಸಂಭಾಲ್ ಯೋಜನೆಯಡಿ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅಟ್ರಾಸಿಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳ ನ್ಯಾಯಬದ್ಧ ವಿಚಾರಣೆಯನ್ನೂ ಬಿಜೆಪಿ ಪ್ರಸ್ತಾಪಿಸಿದೆ.

5) ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪರ ಬಿಜೆಪಿ ಕೊನೆಯ ಗಳಿಗೆಯಲ್ಲಿ ಒಲವು ತೋರಿಸಿತು. ಬೆಂಬಲ ಬೆಲೆ ಪಡೆದುಕೊಳ್ಳಲು ಸಾಧ್ಯವಿಲ್ಲದ ಸಣ್ಣ ರೈತರಿಗಾಗಿ ‘ಲಘು ಕಿಸಾನ್ ಸ್ವಾವಲಂಬನ್ ಯೋಜನಾ’ ಆರಂಭಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.

6) ಪ್ರತಿಷ್ಠಿತ ಶರ್ಬತಿ ಜೋಳಕ್ಕೆ ಜಿಯಾಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಪಡೆಯುವುದು, ರಾಜ್ಯದ ಉತ್ತರ–ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಕಿಸಾನ್ ಕಾರಿಡಾರ್ ರೂಪಿಸುವುದು, ರಾಜ್ಯದ ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಮಾರುಕಟ್ಟೆ ಹುಡುಕುವ ಬಗ್ಗೆ ಬಿಜೆಪಿ ಪ್ರಣಾಳಿಕೆ ಭರವಸೆ ನೀಡಿದೆ.

7) ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹಿಂದುತ್ವದ ಅಂಶಗಳೇ ರಾರಾಜಿಸುತ್ತಿವೆ. ಮುಸ್ಲಿಂ ಪರ ಪಕ್ಷ ಎನ್ನುವ ಇಮೇಜ್ ಕಳಚಿಕೊಳ್ಳಲು ಪಕ್ಷ ಪ್ರಯತ್ನಿಸಿದೆ. ಬಿಜೆಪಿಯ ಹಿಂದುತ್ವ ರಾಜಕಾರಣದ ಎದುರು ತತ್ತರಿಸಿದ್ದ ಕಾಂಗ್ರೆಸ್ ಪಕ್ಷ ಈಗ ಅದೇ ರಾಜಕಾರಣದ ಚುಂಗು ಹಿಡಿದು ಆಡಳಿತದ ಸನಿಹಕ್ಕೆ ಬರಲು ಯತ್ನಿಸುತ್ತಿದೆ.

8) ಕಾಂಗ್ರೆಸ್‌ನ ಹಿಂದಿನ ಪ್ರಣಾಳಿಕೆಗಳು ಮದ್ರಸಾಗಳಿಗೆ ಅನುದಾನ, ಉರ್ದು ಮತ್ತು ಅರೇಬಿಕ್ ಭಾಷೆಗಳ ಬಗ್ಗೆ ಸಾಚಾರ್ ಸಮಿತಿಯ ಶಿಫಾರಸುಗಳು, ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಮಾತನಾಡುತ್ತಿತ್ತು. ಆದರೆ ಈ ಬಾರಿಯ ‘ವಚನ್ ಪತ್ರ’ (ಕಾಂಗ್ರೆಸ್ ಪ್ರಣಾಳಿಕೆ) ಗೋಶಾಲೆ, ಗೋ ರಕ್ಷಣೆ, ಗೋ ಕ್ಷೇಮಧಾಮ, ಗಂಜಲ ಮತ್ತು ಸೆಗಣಿಯಿಂದ ವಾಣಿಜ್ಯ ಉತ್ಪನ್ನಗಳ ತಯಾರಿ, ಪವಿತ್ರ ನದಿಗಳು ಮತ್ತು ಪವಿತ್ರ ಗ್ರಂಥಗಳ ಸಂರಕ್ಷಣೆ, ರಾಮನ ವನವಾಸ ಪಥ, ಸಂಸ್ಕೃತ ಉತ್ತೇಜನಕ್ಕೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದೆ.

9) ಕೇವಲ ಪ್ರಣಾಳಿಕೆ ಮಾತ್ರವಲ್ಲ, ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಅಳವಡಿಸಿಕೊಂಡ ಕಾರ್ಯತಂತ್ರವೂ ಹಿಂದುತ್ವದ ಬಗ್ಗೆ ತನಗಿದ್ದ ಬದ್ಧತೆಯನ್ನು ಸಾರಿ ಹೇಳುವಂತಿತ್ತು. 2014ರ ನಂತರ ಬಿಜೆಪಿ–ಆರ್‌ಎಸ್‌ಎಸ್‌ನ ಏಕಸ್ವಾಮ್ಯದಲ್ಲಿದ್ದ ಹಿಂದೂಗಳ ಮತವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‌ ಯೋಗ್ಯ ರಣತಂತ್ರ ರೂಪಿಸಿಯೇ ಕಣಕ್ಕಿಳಿಯಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ‘ಮೃದು ಹಿಂದುತ್ವ’ವನ್ನು ಮುನ್ನೆಲೆ ತಂದಿತು. ರಾಹುಲ್ ತಮ್ಮ ಜನಿವಾರ ಪ್ರದರ್ಶಿಸಲೂ ಹಿಂಜರಿಯಲಿಲ್ಲ. ತಮ್ಮನ್ನು ತಾವು ಶಿವಭಕ್ತ ಎಂದು ಕರೆದುಕೊಂಡು ಮತದಾರರನ್ನು ನಂಬಿಸಲು ಯತ್ನಿಸಿದರು.

10) ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಸಾಕಷ್ಟು ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕುಟುಂಬ ರಾಜಕಾರಣದಲ್ಲಿ ಸಕ್ರಿಯರಾಗಿರುವ 20 ಮಂದಿಯನ್ನು ಬಿಜೆಪಿ ಮತ್ತು 17 ಮಂದಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !