ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆ ಸೇರಿದ 4 ಅಪಾಚೆ ಹೆಲಿಕಾಪ್ಟರ್: ಮುಂದಿನ ವಾರ ಮತ್ತೆ ನಾಲ್ಕು ಸೇರ್ಪಡೆ

Last Updated 27 ಜುಲೈ 2019, 11:25 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಬೋಯಿಂಗ್ ನಿರ್ಮಿಸಿರುವ ನಾಲ್ಕು ಅಪಾಚೆ ಹೆಲಿಕಾಪ್ಟರ್‌ಗಳನ್ನು ಶನಿವಾರ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಯಿತು. 22 ಹೆಲಿಕಾಪ್ಟರ್‌ಗಳ ಪೈಕಿ ಮತ್ತೆ ನಾಲ್ಕು ಕಾಪ್ಟರ್‌ಗಳು ಮುಂದಿನ ವಾರ ಸೇರ್ಪಡೆಯಾಗಲಿವೆ.

ಬಹುಕೋಟಿ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ ‘ಎಎಚ್‌–64ಎ ಅಪಾಚೆ’ ಹೆಲಿಕಾಪ್ಟರ್‌ಗಳ ಮೊದಲ ತಂಡ ಉತ್ತರ ಪ್ರದೇಶದ ಹಿಂಡಾನ್ ವಾಯುನೆಲೆಗೆ ಬಂದಿಳಿಯಿತು.

ಎಂಟೂ ಹೆಲಿಕಾಪ್ಟರ್‌ಗಳು ಮುಂದಿನವಾರ ಪಠಾಣ್‌ಕೋಟ್ ವಾಯುನೆಲೆಗೆ ತೆರಳಲಿವೆ. ‘ಎಎಚ್‌–64ಎ ಅಪಾಚೆ’ ಜಗತ್ತಿನ ಅತ್ಯಾಧುನಿಕ ಬಹೂಪಯೋಗಿ ಯುದ್ಧ ಹೆಲಿಕಾಪ್ಟರ್ ಎಂದು ಹೆಸರಾಗಿದೆ. 22 ಕಾಪ್ಟರ್ ಖರೀದಿಗೆ ಬೋಯಿಂಗ್ ಹಾಗೂ ಅಮೆರಿಕ ಸರ್ಕಾರದ ಜೊತೆ ಸೆಪ್ಟೆಂಬರ್ 2015ರಲ್ಲಿ ಭಾರತ ವಾಯುಪಡೆ ಸಹಿ ಹಾಕಿತ್ತು.ಇದರ ಜೊತೆಗೆ 2017ರಲ್ಲಿ ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ₹4,168 ಕೋಟಿ ಮೊತ್ತದ 6 ಅಪಾಚೆ ಹೆಲಿಕಾಪ್ಟರ್ ಖರೀದಿಗೆ ಅನುಮೋದನೆ ನೀಡಿತ್ತು.

ಅಪಾಚೆ ಸರಣಿಯ ಕಾಪ್ಟರ್‌ಗಳ ಸೇರ್ಪಡೆಯಿಂದ ವಾಯುಪಡೆ ಬಲ ವೃದ್ಧಿಸಿದೆ ಎಂದು ಹಿರಿಯ ಐಎಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಯುಪಡೆಯ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಹೆಲಿಕಾಪ್ಟರ್‌ಗಳನ್ನು ಪರಿವರ್ತಿಸಿಕೊಳ್ಳಲಾಗಿದೆ.

‘ಭಾರತದ ರಕ್ಷಣಾ ಪಡೆಗಳ ಆಧುನೀಕರಣ ನಿಟ್ಟಿನಲ್ಲಿ ಬೋಯಿಂಗ್ ಸಂಸ್ಥೆಯು ನಿಗದಿತ ಸಮಯಕ್ಕಿಂತ ಮೊದಲೇ ಹೆಲಿಕಾಪ್ಟರ್‌ಗಳನ್ನು ಪೂರೈಸುವ ಮೂಲಕ ಭರವಸೆ ಉಳಿಸಿಕೊಂಡಿದೆ’ ಬೋಯಿಂಗ್ ಹೇಳಿಕೊಂಡಿದೆ.

ಉತ್ಪಾದನೆ ಆರಂಭಿಸಿದ ಬಳಿಕ ಬೋಯಿಂಗ್ ಸಂಸ್ಥೆಯು ಜಗತ್ತಿನಾದ್ಯಂತೆ 2,200 ಅಪಾಚೆ ಹೆಲಿಕಾಪ್ಟರ್‌ಗಳನ್ನು ಪೂರೈಸಿದೆ. ಭಾರತವು ಅಪಾಚೆ ಸರಣಿಯ ಕಾಪ್ಟರ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಂಡ 14ನೇ ದೇಶವಾಗಿದೆ. 2020ರ ವೇಳೆಗೆ ಭಾರತವು ಎಲ್ಲ 22 ಅಪಾಚೆ ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆ ನಡೆಸಲಿದೆ.ಭಾರತೀಯ ವಾಯುಪಡೆಯ ತಂಡವು 2018ರಲ್ಲಿ ಅಮೆರಿಕದಲ್ಲಿ ಅಪಾಚೆ ಕಾಪ್ಟರ್ ಮುನ್ನಡೆಸುವ ತರಬೇತಿ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT