ಸರ್ಕಾರದಿಂದಲೇ ಪುನರ್ವಸತಿ ಕೇಂದ್ರಗಳ ನಿರ್ವಹಣೆ: ನಿತೀಶ್‌ ಕುಮಾರ್‌

7
ತ‍ಪ್ಪು ನಡೆದಿದ್ದರೆ ಸಚಿವೆಯ ರಾಜೀನಾಮೆ

ಸರ್ಕಾರದಿಂದಲೇ ಪುನರ್ವಸತಿ ಕೇಂದ್ರಗಳ ನಿರ್ವಹಣೆ: ನಿತೀಶ್‌ ಕುಮಾರ್‌

Published:
Updated:

ಪಟ್ನಾ : ‘ರಾಜ್ಯದಲ್ಲಿರುವ ಎಲ್ಲ ಪುನರ್ವಸತಿ ಕೇಂದ್ರಗಳನ್ನು ಸರ್ಕಾರದ ವತಿಯಿಂದಲೇ ನಿರ್ವಹಣೆ ಮಾಡಲಾಗುವುದು’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಮುಜಪ್ಫರಪುರದ ಪುನರ್ವಸತಿ ಕೇಂದ್ರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಈ ಸ್ಪಷ್ಟನೆ ನೀಡಿದ್ದಾರೆ.

‘ಪುನರ್ವಸತಿ ಕೇಂದ್ರ ನಡೆಸುವ ಜವಾಬ್ದಾರಿಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸುವುದಿಲ್ಲ. ಸರ್ಕಾರದ ವತಿಯಿಂದಲೇ ಕಟ್ಟಡ ಹಾಗೂ ಮೂಲಸೌಕರ್ಯ ವ್ಯವಸ್ಥೆ ನಿರ್ವಹಿಸಲಾಗುವುದು’ ಎಂದು ತಿಳಿಸಿದರು.

ತಪ್ಪೆಸಗಿದ್ದರೆ ಸಚಿವೆ ಮೇಲೆ ಕ್ರಮ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ,ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ತಪ್ಪು ಎಸಗಿರುವುದು ಕಂಡುಬಂದರೆ ಸಚಿವ ಸ್ಥಾನದಿಂದ ಕೈಬಿಡಲಾಗುವದು ಅವರು ಸ್ಪಷ್ಟಪಡಿಸಿದರು.

ಪುನರ್ವಸತಿ ಕೇಂದ್ರದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಚಿವೆ ವರ್ಮಾರ ಪತಿ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಈ ಕಾರಣದಿಂದ ಸಚಿವೆಯನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿರೋಧಪಕ್ಷದ ಮುಖಂಡರು ಒತ್ತಾಯಿಸಿದ್ದರು.

ರಾಜೀನಾಮೆ ಅಗತ್ಯವಿಲ್ಲ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಸಚಿವರು ರಾಜೀನಾಮೆ ನೀಡುವ ಅಗತ್ಯವಿಲ್ಲ’ ಎಂದು ಬಿಜೆಪಿ ಮುಖಂಡ ಹಾಗೂ ಬಿಹಾರ ಉಪಮುಖ್ಯಮಂತ್ರಿ ಸುಶೀಲ್‌ಕುಮಾರ್ ಮೋದಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ರಾಜೀನಾಮೆ ನೀಡಬೇಕು ಎಂದು ಮುಜಪ್ಫರಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಸುರೇಶ್‌ ಶರ್ಮಾ ಒತ್ತಾಯಿಸಿದ್ದರು. 

‘ಸರ್ಕಾರದ ಮೈತ್ರಿ ಪಕ್ಷವಾಗಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ತನಿಖೆ ನಡೆದು ಸಾಬೀತಾದರೆ ಮಾತ್ರ ರಾಜೀನಾಮೆ ಪಡೆಯುವುದು ಸೂಕ್ತ’ ಎಂದು ಅವರು ತಿಳಿಸಿದರು.

ಹೈಕೋರ್ಟ್‌ ನೋಟಿಸ್‌: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಕೇಂದ್ರಿಯ ತನಿಖಾ ಸಮಿತಿ (ಸಿಬಿಐ)ಗೆ ಬಿಹಾರ ಹೈಕೋರ್ಟ್‌ ನೋಟಿಸ್‌ ಜಾರಿಮಾಡಿದೆ.
**
‘ದುರುಪಯೋಗ ತಡೆಗೆ ಕೇಂದ್ರಿಕೃತ ವ್ಯವಸ್ಥೆ’
 ‘ಸ್ವಯಂಸೇವಾ ಸಂಸ್ಥೆಗಳಿಂದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ದುರುಪಯೋಗ ನಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ದೊಡ್ಡ ಪ್ರಮಾಣದ ಒಂದೇ ಕೇಂದ್ರ ತೆರೆಯಬೇಕು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

ಮುಜಫ್ಫರಪುರ, ದೆವರಿಯಾ ಪ್ರಕರಣದ ಬಳಿಕ ಅವರು ಈ ಸೂಚನೆ ನೀಡಿದ್ದಾರೆ.

‘ನಿರಾಶ್ರಿತ ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಒಂದೇ ಒಂದು ಬೃಹತ್‌ ಕೇಂದ್ರ ತೆರೆದು, ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಬೇಕು. ಇಂತಹ ಕೇಂದ್ರಗಳಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡರೆ, ಪರಿಣಾಮಕಾರಿಯಾಗಿ ಇವುಗಳ ನಿಗಾವಹಿಸಬಹುದು’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !