ಬುಧವಾರ, ನವೆಂಬರ್ 13, 2019
23 °C

ಐಐಟಿ ಮದ್ರಾಸ್ ಕ್ಯಾಂಪಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಸಾವು: ಆತ್ಮಹತ್ಯೆ ಶಂಕೆ

Published:
Updated:
Prajavani

ಚೆನ್ನೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕ್ಯಾಂಪಸ್‌ನಲ್ಲಿರುವ ವಸತಿನಿಲಯದ ಕೊಠಡಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ಫಾತೀಮಾ ಲತೀಫ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಕೂಡ ಪತ್ತೆಯಾಗಿಲ್ಲ. ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2018ರ ಡಿಸೆಂಬರ್ ಬಳಿಕ ಈವರೆಗೆ ಐಐಟಿ ಮದ್ರಾಸ್‌ನಲ್ಲಿ ನಡೆದಿರುವ ಐದನೇ ಆತ್ಮಹತ್ಯೆ ಇದಾಗಿದೆ.

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ಫಾತಿಮಾ ಕ್ಯಾಂಪಸ್‌ನ ಸರಯೂ ವಸತಿನಿಲಯದಲ್ಲಿ ತಂಗಿದ್ದಳು.

ಶನಿವಾರ ಬೆಳಿಗ್ಗೆ ಪೋಷಕರು ಫಾತೀಮಾ ಲತೀಫ್‌ಗೆ ದೂರವಾಣಿ ಕರೆ ಮಾಡಿದ್ದರು. ಆಕೆ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಪೋಷಕರು ಸ್ನೇಹಿತೆಯರ ಬಳಿ ವಿಚಾರಿಸಿದ್ದರು. ಅವರು ಫಾತಿಮಾಳನ್ನು ನೋಡಲೆಂದು ತೆರಳಿದ್ದಾಗ ಕೊಠಡಿ ಬಾಗಿಲು ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಬಳಿಕ ಕೊಠಡಿ ಬಾಗಿಲನ್ನು ಒಡೆದು ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಳೆದ ವಾರದ ಆಂತರಿಕ ಪರೀಕ್ಷೆಯಲ್ಲಿ ಕಡಿಮೆ ಫಾತಿಮಾ ಅಂಕಗಳನ್ನು ಗಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದು, ಆತ್ಮಹತ್ಯೆ ಹಿಂದೆ ಬೇರೆ ಕಾರಣಗಳಿರಬಹುದೇ ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಐಐಟಿ ಮದ್ರಾಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯು ನವೆಂಬರ್ 8ರಂದು ನಿಧನ ಹೊಂದಿದ್ದಾಳೆ. ವಿದ್ಯಾರ್ಥಿನಿಯ ಸಾವು ಐಐಟಿ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಉಲ್ಲೇಖಿಸಿದೆ.

ಪ್ರತಿಕ್ರಿಯಿಸಿ (+)