ಗುರುವಾರ , ಫೆಬ್ರವರಿ 27, 2020
19 °C

ಆಂಧ್ರ, ತೆಲಂಗಾಣದಲ್ಲಿ ಐಟಿ ದಾಳಿ ₹2 ಸಾವಿರ ಕೋಟಿ ದಾಖಲೆ ಇಲ್ಲದ ಆದಾಯ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ : ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮೂಲದ ಮೂರು ಮೂಲಸೌಕರ್ಯ ಕಂಪನಿಗಳ ಮೇಲೆ ಕಳೆದ ವಾರ ನಡೆಸಿದ ದಾಳಿ ವೇಳೆ ₹2,000 ಕೋಟಿ ದಾಖಲೆ ಇಲ್ಲದ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 

ಫೆ.6ರಂದು ವಿಜಯವಾಡ, ಹೈದರಾಬಾದ್‌, ವಿಶಾಖಪಟ್ಟಣ, ದೆಹಲಿ ಮತ್ತು ಪುಣೆಯಲ್ಲಿ ಈ ಕಂಪನಿಗಳಿಗೆ ಸೇರಿದ 40 ಕಡೆಗಳಲ್ಲಿ ತಪಾಸಣೆ ನಡೆದಿದೆ. ಈ ಕುರಿತು ಪ್ರಕಟಣೆ ಮೂಲಕ ನೇರ ತೆರಿಗೆ ಕೇಂದ್ರೀಯ ಮಂಡಳಿ ಮಾಹಿತಿ ನೀಡಿದ್ದು, ‘ನಕಲಿ ತುಂಡು ಗುತ್ತಿಗೆ ಹಾಗೂ ನಕಲಿ ಬಿಲ್‌ಗಳ ಮೂಲಕ ಹಣ ಮಾಡುವ ಜಾಲವನ್ನು ಪತ್ತೆಹಚ್ಚಲಾಗಿದೆ. ಅಪರಾಧಕ್ಕೆ ಸಾಕ್ಷ್ಯವಾಗಿ ಹಲವು ದಾಖಲೆಗಳು, ಇಮೇಲ್‌, ವಾಟ್ಸ್‌ಆ್ಯಪ್‌ ಸಂದೇಶಗಳು, ವಿದೇಶಿ ವ್ಯವಹಾರಗಳೂ ಪತ್ತೆಯಾಗಿವೆ’ ಎಂದು ತಿಳಿಸಿದೆ. 

‘ದಾಖಲೆ ಇಲ್ಲದ ₹85 ಲಕ್ಷ ನಗದು ಹಾಗೂ ₹71 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, 25 ಬ್ಯಾಂಕ್‌ ಲಾಕರ್‌ಗಳನ್ನು ನಿಯಂತ್ರಣಕ್ಕೆ ಪಡೆಯಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ಹೆಸರು ಕೆಡಿಸುವ ಪ್ರಯತ್ನ’

ಗುಂಟೂರು (ಪಿಟಿಐ): ರಾಜ್ಯದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಅವರ ಹೆಸರು ಕೆಡಿಸುವ ಪ್ರಯತ್ನವನ್ನು ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್‌ ಮಾಡುತ್ತಿದೆ ಎಂದು ತೆಲುಗು ದೇಶಂ ಪಕ್ಷ ಆರೋಪಿಸಿದೆ.

‘ಜಗನ್‌ಮೋಹನ್‌ ರೆಡ್ಡಿ ಅವರು ಎದುರಿಸುತ್ತಿರುವ ಭ್ರಷ್ಟಾಚಾರ ಪ್ರಕರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಪ್ರಯತ್ನ ಮಾಡಲಾಗಿದೆ. ನಾಯ್ಡು ಅವರ ಆಪ್ತ ಕಾರ್ಯದರ್ಶಿ ಬಳಿಯಿಂದ ಈ ಹಣವನ್ನು ಜಪ್ತಿ ಮಾಡಲಾಗಿದೆ ಎನ್ನುವ ಸುಳ್ಳು ಅಭಿಯಾನವನ್ನು ವೈಎಸ್‌ಆರ್‌ಸಿಪಿ ಮಾಡುತ್ತಿದೆ’ ಎಂದು ಟಿಡಿಪಿ ಪ್ರಕಟಣೆಯಲ್ಲಿ ಆರೋಪಿಸಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು