ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಮುದಾಯಕ್ಕೆ ಹರಡಿಲ್ಲ: ಐಸಿಎಂಆರ್

Last Updated 11 ಜೂನ್ 2020, 16:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್–19 ಸಮುದಾಯ ಪ್ರಸರಣ ಹಂತವನ್ನು ತಲುಪಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ. ಕೇಂದ್ರ ಸರ್ಕಾರವೂ ಇದನ್ನೇ ಪುನರುಚ್ಚರಿಸಿದೆ. ದೇಶದಲ್ಲಿ ಒಂದೇ ದಿನ 9,900ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ ದಿನದಂದೇ ಐಸಿಎಂಆರ್ ಮತ್ತು ಸರ್ಕಾರ ಈ ಹೇಳಿಕೆ ನೀಡಿವೆ.

ಸೋಂಕು ತಗುಲಿರುವ ಸಾಧ್ಯತೆ ಬಗ್ಗೆ ದೇಶದ 83 ಜಿಲ್ಲೆಗಳಲ್ಲಿ ಐಸಿಎಂಆರ್‌ ನಡೆಸಿದ್ದ ಸಮೀಕ್ಷೆಯ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಈ ಸಮೀಕ್ಷೆಯ ವರದಿಯ ಅಧಾರದ ಮೇಲೆ, ದೇಶದಲ್ಲಿ ಕೋವಿಡ್ ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ‘ಆದರೆ, ಭಾರಿ ಪ್ರಮಾಣದಲ್ಲಿ ಜನರಿಗೆ ಸೋಂಕು ತಗುಲುವ ಅಪಾಯವಿದೆ’ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಕಳವಳ ವ್ಯಕ್ತಪಡಿಸಿದ್ದಾರೆ.

‘ಸಮೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಆಯ್ದ ಜಿಲ್ಲೆಗಳಲ್ಲಿ ಮತ್ತು ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಈಗ ಈ ಹಂತದ ಸಮೀಕ್ಷೆಯ ವರದಿ ಬಂದಿದೆ. ಸೋಂಕು ವ್ಯಾಪಕವಾಗಿ ಹರಡಿರುವ ಜಿಲ್ಲೆ–ನಗರಗಳಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆ ಈಗ ನಡೆಯುತ್ತಿದೆ’ ಎಂದು ಭಾರ್ಗವ ಮಾಹಿತಿ ನೀಡಿದ್ದಾರೆ.

‘ಮೊದಲ ಹಂತದಲ್ಲಿ 83 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಇವುಗಳಲ್ಲಿ 65 ಜಿಲ್ಲೆಗಳಲ್ಲಿ ಜನರು ಕೋವಿಡ್ ಬಾಧಿತರ ಸಂಪರ್ಕಕ್ಕೆ ಬಂದಿರುವುದು ಪತ್ತೆಯಾಯಿತು. ಈ ಜಿಲ್ಲೆಗಳಲ್ಲಿ ಹೀಗೆ ಸಂಪರ್ಕಕ್ಕೆ ಬಂದವರ ಪ್ರಮಾಣ ಶೇ 0.73ರಷ್ಟು ಮಾತ್ರ. ಹೀಗಾಗಿ ಲಾಕ್‌ಡೌನ್ ಮತ್ತು ಸೋಂಕು ನಿಯಂತ್ರಣ ಕ್ರಮಗಳು ಯಶಸ್ವಿಯಾಗಿವೆ ಎಂದು ಹೇಳಬಹುದು’ ಎಂದು ಭಾರ್ಗವ್ ಮಾಹಿತಿ ನೀಡಿದ್ದಾರೆ.

‘ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಇದೆ ಎಂದು ನಿರಾಳವಾಗಿ ಇರುವಂತಿಲ್ಲ. ನಗರ ಪ್ರದೇಶಗಳಲ್ಲಿ ಮತ್ತು ನಗರಗಳ ಕೊಳೆಗೇರಿಗಳಲ್ಲಿ ಅತ್ಯಧಿಕ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುವ ಅಪಾಯವಿದೆ. ಹೀಗಾಗಿ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸಾನಿಟೈಸರ್ ಬಳಕೆ, ಆಗಾಗ ಕೈತೊಳೆಯುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯದೇ ಇರುವುದನ್ನು ಇನ್ನಷ್ಟು ದಿನ ಪಾಲನೆ ಮಾಡಬೇಕಾದ ಅನಿವಾರ್ಯ ಇದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಪಾಸಣೆ, ಸೋಂಕಿತರ ಪತ್ತೆ, ಕ್ವಾರಂಟೈನ್ ಮತ್ತು ನಿಯಂತ್ರಣ ಕ್ರಮಗಳನ್ನು ನಾವು ಸಡಿಲಿಸಬಾರದು. ಕೋವಿಡ್ ವಿರುದ್ಧದ ಹೋರಾಟವನ್ನು ಮುಂದುವರಿಸಬೇಕು

ಬಲರಾಮ್ ಭಾರ್ಗವ, ಐಸಿಎಂಆರ್ ಪ್ರಧಾನ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT