ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ–ಪಾಕ್‌ನಿಂದ ಕ್ಷಿಪಣಿ ದಾಳಿ ಬೆದರಿಕೆ’

ಸರ್ಜಿಕಲ್‌ ಸ್ಟ್ರೈಕ್‌ ವೇಳೆ ಪರಸ್ಪರ ಸಂವಹನ ನಡೆಸಿದ್ದ ಅಧಿಕಾರಿಗಳು: ಮಾಧ್ಯಮ ವರದಿ
Last Updated 17 ಮಾರ್ಚ್ 2019, 20:14 IST
ಅಕ್ಷರ ಗಾತ್ರ

ನವದೆಹಲಿ/ಇಸ್ಲಾಮಾಬಾದ್‌:‘ಪುಲ್ವಾಮಾ ದಾಳಿ ನಂತರ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ವೇಳೆ ಭಾರತ–ಪಾಕಿಸ್ತಾನದ ಅಧಿಕಾರಿಗಳ ನಡುವೆ ಸಂಹವನ ನಡೆದಿತ್ತು. ಈಗಲೂ ಈ ಅಧಿಕಾರಿಗಳ ನಡುವೆ ಸಂವಹನ ನಡೆಯುತ್ತಿದೆ’ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

ಪಾಕಿಸ್ತಾನ ಸಚಿವರ ಹೆಸರನ್ನು ಅದು ಬಹಿರಂಗಪಡಿಸಿಲ್ಲ.

‘ಭಾರತ ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದಾಗ, ನೀವು ಒಂದು ಕ್ಷಿಪಣಿ ಉಡಾಯಿಸಿದರೆ, ನಾವು ಮೂರು ಕ್ಷಿಪಣಿಗಳ ಮೂಲಕ ದಾಳಿ ಮಾಡುತ್ತೇವೆ. ಅಂದರೆ, ಮೂರುಪಟ್ಟು ಹೆಚ್ಚು ಕ್ಷಿಪಣಿಗಳ ಮೂಲಕ ನಾವು ದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನ ಹೇಳಿತ್ತು. ಆದರೆ, ಕ್ಷಿಪಣಿ ದಾಳಿ ಮಾಡುವುದಾಗಿ ಬೆದರಿಕೆ ನೀಡಿದ ಭಾರತದ ಅಧಿಕಾರಿ ಯಾರು ಎಂಬ ಬಗ್ಗೆ ಅವರು ತಿಳಿಸಿಲ್ಲ’ ಎಂದು ರಾಯಿಟರ್ಸ್‌ ಹೇಳಿದೆ.

ಭಾರತವು ಕ್ಷಿಪಣಿ ದಾಳಿ ಬೆದರಿಕೆ ಹಾಕಿತ್ತು ಎಂಬ ಬಗ್ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರಅಜಿತ್‌ ಡೋಭಾಲ್‌ ಅವರ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾರತ ಸರ್ಕಾರ ಪ್ರತಿಕ್ರಿಯಿಸಿದೆ.

ಪಾಕಿಸ್ತಾನದ ಸೇನೆ, ಐಎಸ್‌ಐ ಮತ್ತು ವಿದೇಶಾಂಗ ಸಚಿವಾಲಯ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಭಾರತ, ಪಾಕಿಸ್ತಾನ ಮತ್ತು ಅಮೆರಿಕ ರಾಯಭಾರ ಕಚೇರಿ ಮೂಲಗಳು ಈ ಅಂಶವನ್ನು ಸ್ಪಷ್ಟಪಡಿಸಿವೆ ಎಂದು ಮಾಧ್ಯಮ ವರದಿ ಮಾಡಿದೆ.

ಉಭಯ ದೇಶಗಳ ನಡುವೆ ಸದ್ಯ ಬೆದರಿಕೆಗಳು ವಿನಿಮಯವಾಗಿವೆ. ಅದೃಷ್ಟವಶಾತ್‌ ಇದಕ್ಕಿಂತ ತೀವ್ರ ಕ್ರಮಕ್ಕೆ ಭಾರತ–ಪಾಕಿಸ್ತಾನ ಮುಂದಾಗಲಿಲ್ಲ ಎಂದು ಈ ಮೂಲಗಳು ತಿಳಿಸಿವೆ.

ಅಮೆರಿಕ ಸಂಧಾನ ಪ್ರಯತ್ನ: 2008ರ ಮುಂಬೈ ದಾಳಿ ನಂತರ, ದಕ್ಷಿಣ ಏಷ್ಯಾದಲ್ಲಿ ಎದುರಾಗಿರುವ ಅತಿ ಗಂಭೀರ ಸೇನಾ ಬಿಕ್ಕಟ್ಟು ಇದು ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ಉಭಯ ದೇಶಗಳ ನಡುವೆ ತೀವ್ರತರ ಸಂಘರ್ಷ
ಮಯ ವಾತಾವರಣ ಸೃಷ್ಟಿಯಾಗಿದ್ದು, ಇದನ್ನು ತಹಬಂದಿಗೆ ತರಲು ಅಮೆರಿಕ ಪ್ರಯತ್ನಿಸುತ್ತಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಈ ಕುರಿತು ಕಾರ್ಯೋನ್ಮುಖರಾಗಿದ್ದರು ಎಂದು ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಭಾರತ ವೈಮಾನಿಕ ದಾಳಿ ನಡೆಸಿದ ಮರುದಿನ ರಾತ್ರಿ, ಅಂದರೆ, ಫೆಬ್ರುವರಿ 27ರಂದು ಬೋಲ್ಟನ್‌ ಅವರು ಡೋಭಾಲ್‌ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಕೂಡ ಡೋಭಾಲ್‌ ಮತ್ತು ಭಾರತ–ಪಾಕಿಸ್ತಾನ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದರು’ ಎಂದು ವರದಿ ಹೇಳಿದೆ.

ಈ ಕುರಿತು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಚೀನಾ ಮತ್ತು ಯುಎಇ ಮಾತುಕತೆ ನಡೆಸಿದ್ದವು ಎಂದು ರಾಯಿಟರ್ಸ್‌ ಹೇಳಿದೆ.

‘ಹಿಂದಿರುಗುವುದಿಲ್ಲ ಎಂದಿದ್ದ ಡೋಭಾಲ್‌’

‘ಭಾರತ ಪಾಕಿಸ್ತಾನದ ಮೇಲೆ ಎರಡನೇ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ದಿನದ ಸಂಜೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಅಸೀಂ ಮುನೀರ್‌ ಜೊತೆ ಮಾತನಾಡಿದ್ದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌, ಭಯೋತ್ಪಾದನೆ ನಿಗ್ರಹಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಹಿಂದಿರುಗುವುದಿಲ್ಲ ಎಂದು ಹೇಳಿದ್ದರು. ಪೈಲಟ್‌ ಅಭಿನಂದನ್‌ ಪಾಕಿಸ್ತಾನಕ್ಕೆ ಸೆರೆ ಸಿಕ್ಕ ನಂತರವೂ, ಡೋಭಾಲ್‌ ಈ ಪ್ರತಿಕ್ರಿಯೆ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪಾಕಿಸ್ತಾನದ ನೆಲದಲ್ಲಿ ಕ್ರಿಯಾಶೀಲವಾಗಿರುವ ಭಯೋತ್ಪಾದಕ ಸಂಘಟನೆಗಳನ್ನು ಮಣಿಸುವುದು ನಮ್ಮ ಗುರಿ ಎಂದು ಡೋಭಾಲ್‌ ಮುನೀರ್‌ಗೆ ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT