ಗುರುವಾರ , ನವೆಂಬರ್ 14, 2019
22 °C
ಇಸ್ರೊ ಮುಖ್ಯಸ್ಥ ಕೆ. ಶಿವನ್‌ ಮಾಹಿತಿ

2030ಕ್ಕೆ ಭಾರತದ್ದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಇಸ್ರೋ ಸಜ್ಜು

Published:
Updated:

ನವದೆಹಲಿ: 2030ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತ ಉದ್ದೇಶಿಸಿದೆ ಎಂದು ಇಸ್ರೊ ಮುಖ್ಯಸ್ಥ ಕೆ.ಶಿವನ್‌ ಗುರುವಾರ ಇಲ್ಲಿ ತಿಳಿಸಿದರು.

 ‘ಗಗನಯಾನ ಯೋಜನೆಯ ಮುಂದುವರಿದ ಭಾಗ ಇದಾಗಿದೆ. ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಯ ಬಳಿಕ ಬಾಹ್ಯಾಕಾಶ ನಿಲ್ದಾಣದ ರೂಪುರೇಷೆಗಳು ಸಿದ್ಧವಾಗಲಿವೆ. ಭಾರತವು, ಈಗಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಭಾಗವಾಗುವುದಿಲ್ಲ. ಭಾರತದ ಬಾಹ್ಯಾಕಾಶ ನಿಲ್ದಾಣ ಅತಿ ಚಿಕ್ಕದಾಗಿರಲಿದೆ’ ಎಂದರು.

‘ಬಾಹ್ಯಾಕಾಶ ಪ್ರವಾಸೋದ್ಯಮ ರೀತಿಯ ದೊಡ್ಡ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶವೂ ಇಸ್ರೊಗೆ ಇಲ್ಲ. ಈ ನಿಲ್ದಾಣವು ಸಂಪೂರ್ಣವಾಗಿ ಭಾರತಕ್ಕೆ ಸೀಮಿತವಾಗಲಿದೆ’ ಎಂದು ಇಸ್ರೊ ಕೈಗೊಳ್ಳುವ ಭವಿಷ್ಯದ ಯೋಜನೆಗಳನ್ನು ಅವರು ವಿವರಿಸಿದರು.

‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ 400 ಟನ್‌ ತೂಕವಿದೆ. ನಾವು 20 ಟನ್‌ ತೂಕದ ಬಾಹ್ಯಾಕಾಶ ನಿಲ್ದಾಣ ಹೊಂದುವ ಉದ್ದೇಶವಿದೆ. ಭೂಮಿಯಿಂದ ಕಡಿಮೆ ದೂರದ ಕಕ್ಷೆಯಲ್ಲಿ ನಿಲ್ದಾಣವಿರಲಿದೆ. ಸುಮಾರು 400 ಕಿಲೋ ಮೀಟರ್‌ ದೂರದಲ್ಲಿ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಗಗನಯಾತ್ರಿಗಳು 15-20 ದಿನಗಳ ಕಾಲ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

‘ಗಗನಯಾನ ಯೋಜನೆ ಬಳಿಕ ಸರ್ಕಾರಕ್ಕೆ ಬಾಹ್ಯಾಕಾಶ ನಿಲ್ದಾಣದ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 5ರಿಂದ 7 ವರ್ಷಗಳು ಬೇಕಾಗಬಹುದು’ ಎಂದು ಶಿವನ್‌ ಮಾಹಿತಿ ನೀಡಿದರು. ಆದರೆ, ಯೋಜನೆಯ ವೆಚ್ಚದ ವಿವರ ನೀಡಲಿಲ್ಲ.


ಕೆ.ಶಿವನ್‌

ಸದ್ಯ ಇಸ್ರೊ ವಿಜ್ಞಾನಿಗಳು ’ಚಂದ್ರಯಾನ–2’ ಯೋಜನೆಯ ಬಗ್ಗೆ ಗಮನಹರಿಸಿದ್ದಾರೆ. ಈ ಯೋಜನೆ ಬಳಿಕ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯಾದ 'ಗಗನಯಾನ'ಕ್ಕೆ ಆದ್ಯತೆ ನೀಡಲಿದ್ದಾರೆ. ಬಾಹ್ಯಾಕಾಶಕ್ಕೆ ಭಾರತದ ಮೂವರು ಗಗನಯಾತ್ರಿಗಳನ್ನು ಒಂದು ವಾರ ಕಳುಹಿಸುವುದು ‘ಗಗನಯಾನ’ ಯೋಜನೆಯಾಗಿದೆ. ಇದಕ್ಕಾಗಿ ಭಾರತೀಯ ವಾಯು ಪಡೆಯ ಪೈಲಟ್‌ಗಳ ಪರೀಕ್ಷೆ ಮುಂದಿನ ಆರು ತಿಂಗಳಲ್ಲಿ ನಡೆಯಲಿದೆ. ಆಯ್ಕೆಯಾದವರಿಗೆ ಕಠಿಣ ತರಬೇತಿಯನ್ನು ಭಾರತ ಮತ್ತು ವಿದೇಶದಲ್ಲಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಕೈಗೊಳ್ಳುವ ಗಗನಯಾನಕ್ಕೆ ಮುನ್ನ ಮಾನವ ರಹಿತವಾದ ಎರಡು ಯೋಜನೆಗಳನ್ನು ಇಸ್ರೊ ರೂಪಿಸಿದೆ. ಜತೆಗೆ, 2020ರಲ್ಲಿ ಸೂರ್ಯನ ಅಧ್ಯಯನಕ್ಕೆ ‘ಆದಿತ್ಯ ಮಿಷನ್‌’ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.

ಪ್ರತಿಕ್ರಿಯಿಸಿ (+)