ಸೋಮವಾರ, ಸೆಪ್ಟೆಂಬರ್ 27, 2021
22 °C

ಭಾರತೀಯ ವಾಯುಪಡೆಗೆ ಬಲ: ಅಮೆರಿಕದಿಂದ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್‌ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ನವದೆಹಲಿ: ಬೋಯಿಂಗ್‌ ಕಂಪನಿ ನಿರ್ಮಿತ ಅಪಾಚೆ ಗಾರ್ಡಿಯನ್‌ ಅಟ್ಯಾಕ್‌ ಹೆಲಿಕಾಪ್ಟರ್‌ (ಎಎಚ್‌–64ಇ I) ಅನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ.

ವಾಯುಪಡೆಗೆ ಸೇರ್ಪಡೆಯಾಗಲಿರುವ ಮೊದಲ ಅಪಾಚೆ ಹೆಲಿಕಾಪ್ಟರ್‌ ಇದಾಗಿದ್ದು, ಇದರೊಂದಿಗೆ ದಾಳಿ ಮಾಡುವ ಸಾಮರ್ಥ್ಯ ಮತ್ತಷ್ಟೂ ಹೆಚ್ಚಲಿದೆ. ಮೊದಲ ಹೆಲಿಕಾಪ್ಟರ್‌ ಜುಲೈನಲ್ಲಿ ವಾಯುಪಡೆ ಸೇರಲಿದೆ.

ಅಮೆರಿಕದ ಆರಿಝೋನಾ ಬಳಿ ಮೇಸಾದಲ್ಲಿರುವ ಬೋಯಿಂಗ್‌ ಉತ್ಪಾದನಾ ಘಟಕದಲ್ಲಿ ಏರ್‌ ಮಾರ್ಷಲ್‌ ಎ.ಎಸ್‌.ಬುಟೋಲಾ ಅವರಿಗೆ ಔಪಚಾರಿಕವಾಗಿ ಈ ಹೆಲಿಕಾಪ್ಟರ್‌ ಅನ್ನು ಹಸ್ತಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

₹ 14,000 ಕೋಟಿ ವೆಚ್ಚದಲ್ಲಿ ಒಟ್ಟು 22 ಅಪಾಚೆ ಹೆಲಿಕಾಪ್ಟರ್‌ ಖರೀದಿಗಾಗಿ 2015ರ ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಅಮೆರಿಕ ಸರ್ಕಾರಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಈ ದಾಳಿ ಹೆಲಿಕಾಪ್ಟರ್‌ಗಳನ್ನು ಪಠಾಣ್‌ಕೋಟ್‌ ವಾಯು ನೆಲೆಯಲ್ಲಿರಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ಇನ್ನೊಂದು ತುಕಡಿಯನ್ನು ದೇಶದ ಪೂರ್ವ ಗಡಿಯಲ್ಲಿ ನಿಯೋಜಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಸಾಮರ್ಥ್ಯ: ಭಾರತೀಯ ವಾಯುಪಡೆಯ ಅಗತ್ಯಕ್ಕೆ ತಕ್ಕಂತೆ ಈ ಹೆಲಿಕಾಪ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ಪರ್ವತದಿಂದ ಆವೃತ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವುದು ಈ ಹೆಲಿಕಾಪ್ಟರ್‌ಗಳ ವೈಶಿಷ್ಟ್ಯ.

‘ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ದಾಳಿ ಮಾಡುವ, ಭೂಮೇಲ್ಮೈಯಿಂದ ಎರಗುವ ದಾಳಿಯನ್ನು ಎದುರಿಸುವ ಸಾಮರ್ಥ್ಯ ಇವುಗಳಿಗಿದೆ‘ ಎಂದು ವಾಯುಪಡೆ ಅಧಿಕಾರಿಗಳು ಹೇಳುತ್ತಾರೆ.

’ದಾಳಿ ಸಂದರ್ಭದಲ್ಲಿ ಭೂ ಸೇನೆಗೆ ಪೂರಕವಾಗಿ, ಕಾರ್ಯಾಚರಣೆಯಲ್ಲಿ ಇವು ನೆರವಾಗಲಿವೆ. ಯುದ್ಧ ನಡೆಯುತ್ತಿರುವ ಸ್ಥಳದಿಂದ ಹಾಗೂ ಸ್ಥಳಕ್ಕೆ ಛಾಯಾಚಿತ್ರಗಳನ್ನು ವಿನಿಮಯ ಮಾಡುವ ಸಾಮರ್ಥ್ಯದಿಂದಾಗಿ ಇವುಗಳು ವಿಧ್ವಂಸಕಾರಿ ಎನಿಸಲಿವೆ.

ಅಲಬಾಮಾದಲ್ಲಿ ತರಬೇತಿ
ಅಪಾಚೆ ಗಾರ್ಡಿಯನ್‌ ದಾಳಿ ಹೆಲಿಕಾಪ್ಟರ್‌ಗಳನ್ನು ಯಾರು ಮುನ್ನಡೆಸಬೇಕು ಎಂಬ ವಿಷಯ ವಾಯುಪಡೆ ಮತ್ತು ಭೂಸೇನೆ ನಡುವೆ ಒಂದು ಹಂತದಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪರ್ರೀಕರ್ ಈ ಗೊಂದಲ ಬಗೆಹರಿಸಿ, ವಾಯುಪಡೆಗೆ ಜವಾಬ್ದಾರಿ ವಹಿಸಿದ್ದರು.

ಅದರಂತೆ, ಪೈಲಟ್‌ ಹಾಗೂ ಇತರ ಸಿಬ್ಬಂದಿಗೆ ಅಮೆರಿಕದ ಅಲಬಾಮಾದ ಫೋರ್ಟ್‌ ರಕರ್‌ನಲ್ಲಿರುವ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗಿದೆ.

ಅಪಾಚೆ ಹೆಲಿಕಾಪ್ಟರ್‌ ವೈಶಿಷ್ಟ್ಯಗಳು...
* ರಾಕೆಟ್‌ ಮತ್ತು ಸಣ್ಣ ಪ್ರಮಾಣದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ
* ಗಾಳಿ ಹಾಗೂ ಮಳೆಯ ಒತ್ತಡದ ನಡುವೆಯೂ ಹಾರಾಟ
* ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ
* ಅಗಸದಲ್ಲಿ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ
* ಯುದ್ಧ ಭೂಮಿಯಲ್ಲಿ ಸಂವಹನ ನಡೆಸುವ ಸಾಮರ್ಥ್ಯ
* ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಬಳಕೆ ಮಾಡಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು