ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾನರ್‌ ತೆಗೆಸಲು ಕೋರ್ಟ್‌ ಸೂಚನೆ

Last Updated 9 ಮಾರ್ಚ್ 2020, 16:08 IST
ಅಕ್ಷರ ಗಾತ್ರ

ಲಖನೌ: ಅಲಹಾಬಾದ್‌ ನಗರದ ವಿವಿಧೆಡೆ ಅಳವಡಿಸಲಾಗಿರುವ, ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ ಎನ್ನಲಾದವರ ಭಾವಚಿತ್ರಗಳನ್ನು ಹೊಂದಿದ್ದ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಅಲಹಾಬಾದ್‌ ಹೈಕೋರ್ಟ್‌ ಸೋಮವಾರ ಉತ್ತರಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.

ಮಾರ್ಚ್‌ 16ರ ಒಳಗೆ ಈ ಸೂಚನೆಯನ್ನು ಕುರಿತ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂದು ಲಖನೌ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಆಯುಕ್ತರಿಗೆ ಸೂಚಿಸಿರುವ ನ್ಯಾಯಾಲಯವು, ‘ಯಾವುದೇ ಕಾನೂನಾತ್ಮಕ ಅಧಿಕಾರ ಇಲ್ಲದೆ, ಜನರ ವೈಯಕ್ತಿಕ ವಿವರಗಳನ್ನು ಹೊಂದಿರುವ ಇಂಥ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಬಾರದು’ ಎಂದು ಆದೇಶಿಸಿದೆ.

‘ಬ್ಯಾನರ್‌ ಅಳವಡಿಸುವ ಸರ್ಕಾರದ ಕ್ರಮವು ಜನರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇದು ಅನ್ಯಾಯ ಮಾತ್ರವಲ್ಲ ಸರ್ಕಾರವು ಜನರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ಹಲ್ಲೆಯಾಗಿದೆ’ ಎಂದು ನ್ಯಾಯಾಲಯ ಹೇಳಿದೆ.

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ದಾಂದಲೆ ನಡೆಸಿದ್ದಾರೆ ಎನ್ನಲಾದ 50 ಮಂದಿಯ ಹೆಸರು, ಭಾವಚಿತ್ರ ಹಾಗೂ ವಿಳಾಸವನ್ನು ಒಳಗೊಂಡ ಬ್ಯಾನರ್‌ಗಳನ್ನು ಲಖನೌ ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಅಳವಡಿಸಲಾಗಿತ್ತು.

‘ಆಗಿರುವ ಹಾನಿಗೆ ಸರಿಯಾದ ಪರಿಹಾರ ನೀಡದಿದ್ದರೆ ಇವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಬ್ಯಾನರ್‌ನಲ್ಲಿ ಎಚ್ಚರಿಕೆ ನೀಡಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆಯ ಮೇರೆಗೆ ಬ್ಯಾನರ್‌ ಅಳವಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಮಾಜಿ ಐಪಿಎಸ್‌ ಅಧಿಕಾರಿ ಎಸ್‌.ಆರ್‌. ದಾರಾಪುರಿ, ಹೋರಾಟಗಾರ, ರಾಜಕಾರಣಿ ಸದಾಫ್‌ ಜಫರ್‌ ಮುಂತಾದವರ ಭಾವಚಿತ್ರಗಳೂ ಈ ಬ್ಯಾನರ್‌ಗಳಲ್ಲಿದ್ದವು.

‘ಆರೋಪಿಗಳು ಸರ್ಕಾರಿ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟುಮಾಡಿದ್ದಾರೆ. ಇದು ದಂಗೆಯನ್ನು ತಡೆಯುವ ಉದ್ದೇಶದಿಂದ ಕೈಗೊಂಡ ಕ್ರಮವಾಗಿದ್ದು, ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶ ಮಾಡಬಾರದು’ ಎಂದು ಸರ್ಕಾರ ವಾದಿಸಿತ್ತು.

ಎಸ್‌ಪಿ, ಬಿಎಸ್‌ಪಿ ಸ್ವಾಗತ
ಅಲಹಾಬಾದ್‌ ಹೈಕೋರ್ಟ್‌ನ ಆದೇಶವನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಸ್ವಾಗತಿಸಿವೆ.

‘ಸರ್ಕಾರಕ್ಕೆ ನಾಗರಿಕರ ಖಾಸಗಿತನದ ಹಕ್ಕಿನ ಕುರಿತು ಜ್ಞಾನವಾಗಲಿ, ಅವುಗಳ ಬಗ್ಗೆ ಗೌರವವಾಗಲಿ ಇಲ್ಲ. ಈ ಸರ್ಕಾರದಿಂದ ಜನರು ರೋಸಿಹೋಗಿದ್ದಾರೆ. ಕೋರ್ಟ್‌ ಆದೇಶವನ್ನು ನಾವು ಸ್ವಾಗತಿಸುತ್ತೇವೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

‘ಬ್ಯಾನರ್‌ ತೆಗೆಸುವಂತೆ ಕೋರ್ಟ್‌ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT