ಬುಧವಾರ, ನವೆಂಬರ್ 20, 2019
21 °C
ಗಡಿಯೊಳಗೆ ನುಸುಳಲು ಸಿದ್ಧರಾಗಿದ್ದ ಉಗ್ರಗಾಮಿಗಳು

ಗಡಿಯಲ್ಲಿ ಸದ್ದು ಮಾಡುತ್ತಿವೆ ಭಾರತದ ಫಿರಂಗಿಗಳು, ಐವರು ಪಾಕ್ ಸೈನಿಕರ ಹತ್ಯೆ

Published:
Updated:

ಶ್ರೀನಗರ: ಭಾರತೀಯ ಸೇನೆಯು ಭಾನುವಾರ ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಸಕ್ರಿಯವಾಗಿದ್ದ ನಾಲ್ಕು ಉಗ್ರಗಾಮಿ ಶಿಬಿರಗಳ ಮೇಲೆ ವ್ಯಾಪಕ ಫಿರಂಗಿ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯ ಐವರು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.

ಭಾರತದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯಲ್ಲಿ ಸನ್ನದ್ಧರಾಗಿದ್ದ ಭಯೋತ್ಪಾದರಿಗೆ ರಕ್ಷಣೆ ನೀಡಲೆಂದು ಪಾಕ್ ಸೇನೆಯು ಭಾನುವಾರ ಮುಂಜಾನೆ ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ (ಕವರಿಂಗ್ ಫೈರ್) ಆರಂಭಿಸಿತು.

ಗಡಿನಿಯಂತ್ರಣ ರೇಖೆಯ ತಂಗ್ಧರ್ ವಲಯದಲ್ಲಿ ಪಾಕ್ ಸೇನೆಯ ದಾಳಿಗೆ ಭಾರತೀಯ ಸೇನೆಯ ಇಬ್ಬರು ಯೋಧರು ಮತ್ತು ಓರ್ವ ನಾಗರಿಕ ಹುತಾತ್ಮರಾದರು. ಐವರು ಗಂಭೀರವಾಗಿ ಗಾಯಗೊಂಡರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಸೇನೆಯು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಚುರುಕು ಮಾಡಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿಯ ನಂತರ ಉದ್ವಿಗ್ನಗೊಂಡಿರುವ ಕಾಶ್ಮೀರ ಕಣಿವೆಯಲ್ಲಿ ಸಮಾಜ ವಿರೋಧಿ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಗಡಿಯಲ್ಲಿ ಜಮಾವಣೆಗೊಂಡಿರುವ ಉಗ್ರರನ್ನು ಭಾರತದ ನೆಲಕ್ಕೆ ನುಗ್ಗಿಸಲು ಪಾಕ್ ಸೇನೆ ಸತತ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಪಾಕಿಸ್ತಾನವು ಒಟ್ಟು 2050 ಬಾರಿ ಕದನ ವಿರಾಮ ಉಲ್ಲಂಘಿಸಿ, ಭಾರತದ ಮೇಲೆ ಗುಂಡು ಹಾರಿಸಿದೆ. ಭಾರತದ ಕಡೆಯಲ್ಲಿ ಈವರೆಗೆ ಒಟ್ಟು 21 ಮಂದಿ ಹುತಾತ್ಮರಾಗಿದ್ದಾರೆ. 2003ರ ಒಪ್ಪಂದದ ಪ್ರಕಾರ, ಕದನ ವಿರಾಮದ ಬದ್ಧತೆ ಕಾಪಾಡಿಕೊಳ್ಳಿ ಭಾರತೀಯ ಸೇನೆ ಮತ್ತು ಅಧಿಕಾರಿಗಳು ಪಾಕಿಸ್ತಾನಕ್ಕೆ ಹಲವು ಬಾರಿ ಮನವಿ ಮಾಡಿದ್ದರು.

ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತ, ಸಕ್ರಿಯವಾಗಿದ್ದ ಉಗ್ರರ ಶಿಬಿರಗಳನ್ನು ಗುರಿಯಾಗಿರಿಸಿ ಭಾರತೀಯ ಸೇನೆ ಫಿರಂಗಿ ಮತ್ತು ಗುಂಡಿನ ದಾಳಿ ನಡೆಸಿದೆ.

ಪ್ರತಿಕ್ರಿಯಿಸಿ (+)