ಭಾನುವಾರ, ಆಗಸ್ಟ್ 25, 2019
20 °C

ಬಿಜೆಪಿಗೆ ಕುಸ್ತಿಪಟು ಬಬಿತಾ ಪೋಗಟ್‌ ಸೇರ್ಪಡೆ

Published:
Updated:
Prajavani

ನವದೆಹಲಿ: ಅಂತರರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್‌ ಮತ್ತು ಅವರ ತಂದೆ ಮಹಾವೀರ್‌ ಪೋಗಟ್ ಸೋಮವಾರ ಬಿಜೆಪಿಗೆ ಸೇರ್ಪಡೆಯಾದರು. ಪುತ್ರಿಯರಿಗೆ ಕುಸ್ತಿ ತರಬೇತಿ ನೀಡುವ ಮಹಾವೀರ್‌ ಪೋಗಟ್‌ ಅವರ ಸಾಧನೆಯನ್ನು ಆಧರಿಸಿ ಹಿಂದಿಯ ಯಶಸ್ವಿ ಚಲನಚಿತ್ರ ‘ದಂಗಲ್‌’ ನಿರ್ಮಾಣವಾಗಿತ್ತು.

ಹರಿಯಾಣದಲ್ಲಿ ಬಿಜೆಪಿ ಉಸ್ತುವಾರಿಯೂ ಆಗಿರುವ, ಕೇಂದ್ರ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಕಿರಣ್‌ ರಿಜಿಜು ಮತ್ತು ಬಿಜೆಪಿ ಹರಿಯಾಣ ಘಟಕದ ಅಧ್ಯಕ್ಷ ಸುಭಾಷ್‌ ಬರಲಾ ಉಪಸ್ಥಿತಿಯಲ್ಲಿ ಇಬ್ಬರೂ ಬಿಜೆಪಿಗೆ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೋಗಟ್ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಶ್ಲಾಘಿಸಿದರು.

ಇವರ ಸೇರ್ಪಡೆಯು, ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಹರಿಯಾಣದಲ್ಲಿ ಪಕ್ಷಕ್ಕೆ ನೆರವಾಗಲಿದೆ ಎಂದು ಬಿಜೆಪಿ ಆಶಿಸಿದೆ. ಅರ್ಜುನ ಪ್ರಶಸ್ತಿ ಪುರಸ್ಕೃತೆಯೂ ಆಗಿರುವ ಬಬಿತಾ, ‘ನಾನು ಮೋದಿ ಅವರ ದೊಡ್ಡ ಅಭಿಮಾನಿ. 370ನೇ ವಿಧಿ ರದ್ದತಿ ಮೂಲಕ ಅವರು ಇತಿಹಾಸ ನಿರ್ಮಿಸಿದ್ದಾರೆ’ ಎಂದರು.

Post Comments (+)