ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿದಂಬರಂ, ಕಾರ್ತಿ ಹಾಗೂ ಐಎನ್‌ಎಕ್ಸ್: ಏನಿದು ಹಗರಣ?

ಮಾಫಿ ಸಾಕ್ಷಿ ಇಂದ್ರಾಣಿ ಮುಖರ್ಜಿ ಹೇಳಿದ ₹10 ಲಕ್ಷದ ‘ವ್ಯವಹಾರ’
Last Updated 22 ಆಗಸ್ಟ್ 2019, 4:42 IST
ಅಕ್ಷರ ಗಾತ್ರ

ಮಗಳು ಶೀನಾಬೋರಾ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ ಹಾಗೂ ಅವರ ಪತಿ ಪೀಟರ್ ಮುಖರ್ಜಿ ಅವರು ಸಹ ಸಂಸ್ಥಾಪಕರಾಗಿರುವ ಸಂಸ್ಥೆಯೇಐಎನ್ಎಕ್ಸ್ ಮೀಡಿಯಾ. ಸಂಸ್ಥೆಗೆ ₹305 ಕೋಟಿ ವಿದೇಶಿ ಬಂಡವಾಳ ಸ್ವೀಕರಿಸಲು ‘ವಿದೇಶಿ ಬಂಡವಾಳ ಹೂಡಿಕೆ ಉತ್ತೇಜನ ಸಂಸ್ಥೆ’ಯಿಂದ (ಎಫ್‌ಐಪಿಬಿ) ಒಪ್ಪಿಗೆ ಪಡೆಯುವಾಗ ನಡೆದಿದೆ ಎನ್ನಲಾದ ಅವ್ಯವಹಾರವೇ ಈ ಪ್ರಕರಣ. ಅವ್ಯವಹಾರ ನಡೆದ ಸಮಯದಲ್ಲಿ ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದು ಅವರಿಗೆ ಉರುಳಾಗಿ ಸುತ್ತಿಕೊಂಡಿದೆ.

ಐಎನ್‌ಎಕ್ಸ್ ಪರ ವಹಿಸಿದ್ದ ಕಾರ್ತಿ:

ಇಂದ್ರಾಣಿ ಜೊತೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡಾ ಪ್ರಕರಣದ ಆರೋಪಿ. ವಿದೇಶಿ ಬಂಡವಾಳ ಸ್ವೀಕರಿಸಲು ಹೂಡಿಕೆ ಉತ್ತೇಜನ ಮಂಡಳಿಯಿಂದ ಅಗತ್ಯ ಒಪ್ಪಿಗೆ ಪಡೆದಿಲ್ಲ ಎಂಬುದು ಆರೋಪ. ಐಎನ್‌ಎಕ್ಸ್ ಮೀಡಿಯಾ ಪರವಾಗಿ ಮಂಡಳಿಯ ಒಪ್ಪಿಗೆ ಪಡೆಯಲು ಕಾರ್ತಿ ಚಿದಂಬರಂ ಮತ್ತು ಮುಖರ್ಜಿ ನಡುವೆ ₹10 ಲಕ್ಷದ ವ್ಯವಹಾರ ನಡೆದಿತ್ತು. ಈ ವ್ಯವಹಾರದ ಬಗ್ಗೆ ಮಾರ್ಚ್ 2018ರಲ್ಲಿ ಇಂದ್ರಾಣಿ ಮುಖರ್ಜಿ ಅವರು ಸಿಬಿಐ ವಿಚಾರಣೆಯಲ್ಲಿ ಹೇಳಿಕೆ ಕೊಟ್ಟಿದ್ದರು.

ಕಾರ್ತಿ ಸಂಸ್ಥೆಗೆ ಹಣ ವರ್ಗಾವಣೆ:

ಹಣಕಾಸು ಸಚಿವಾಲಯದ ಹಣಕಾಸು ಗುಪ್ತಚರ ವಿಭಾಗವು (ಎಫ್‌ಐಯು–ಐಎನ್‌ಡಿ) 2008ರ ಜನವರಿಯಲ್ಲಿ ₹305 ಕೋಟಿಯ ವಿದೇಶಿ ಬಂಡವಾಳ ಹೂಡಿಕೆ ಬಗ್ಗೆ ಮೊಟ್ಟ ಮೊದಲು ಎಚ್ಚರಿಸಿತ್ತು. ಮಾರಿಷಸ್ ಮೂಲದ ಮೂರು ಕಂಪನಿಗಳು ಇಲ್ಲಿ ಬಂಡವಾಳ ಹೂಡಿದ್ದವು. ಆದಾಯ ತೆರಿಗೆ ಇಲಾಖೆಯು ಇ.ಡಿ.ಗೆ ಪ್ರಕರಣ ವರ್ಗಾಯಿಸಿತು. 2010ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಫೆಮಾ) ಉಲ್ಲಂಘನೆಯಡಿ ಐಎನ್‌ಎಕ್ಸ್ ಮೀಡಿಯಾ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿತು.

ಕಾರ್ತಿಗೆ ಸೇರಿದ ಸಂಸ್ಥೆಯೊಂದರ ಸಂಬಂಧ ವಿಚಾರಣೆ ನಡೆಸುತ್ತಿದ್ದ ಇ.ಡಿ, ಐಎನ್‌ಎಕ್ಸ್ ಮೀಡಿಯಾಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕಾರ್ತಿ ಅವರ ಲೆಕ್ಕಪತ್ರ ಪರಿಶೋಧಕ ಭಾಸ್ಕರರಾಮನ್ ಅವರ ಕಂಪ್ಯೂಟರ್‌ನಲ್ಲಿ ಪತ್ತೆಹಚ್ಚಿತು. ಎಫ್‌ಐಪಿಎ ಒಪ್ಪಿಗೆ ನೀಡಿದ ಸಮಯದಲ್ಲೇ ಐಎನ್‌ಎಕ್ಸ್ ಸಂಸ್ಥೆಯು ಕಾರ್ತಿಗೆ ಸೇರಿದ ಸಂಸ್ಥೆಗೆ ಹಣ ವರ್ಗಾವಣೆ ಮಾಡಿದ್ದ ಅಂಶವು ಅನುಮಾನಗಳನ್ನು ಪುಷ್ಟೀಕರಿಸಿತು.

ಇ.ಡಿ ನೀಡಿದ ಈ ಮಾಹಿತಿ ಆಧರಿಸಿ, ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿತು.ಕಾರ್ತಿ ಚಿದಂಬರಂ ಅವರನ್ನು ಕಳೆದ ಫೆಬ್ರುವರಿಯಲ್ಲಿ ಸಿಬಿಐ ಬಂಧಿಸಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು. ಜಾರಿ ನಿರ್ದೇಶನಾಲಯ (ಇ.ಡಿ) ಕೂಡಾ ಹಲವು ಬಾರಿ ಕಾರ್ತಿ ಅವರನ್ನು ಪ್ರಶ್ನಿಸಿದೆ. ಕಳೆದ ಡಿಸೆಂಬರ್ ಹಾಗೂ ಜನವರಿಯಲ್ಲಿ ಪಿ. ಚಿದಂಬರಂ ಅವರನ್ನೂ ಇ.ಡಿ ಪ್ರಶ್ನೆ ಮಾಡಿದೆ. ಕಾರ್ತಿ, ಇಂದ್ರಾಣಿಗೆ ಸೇರಿದ ಆಸ್ತಿಗಳನ್ನುಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಕಾರ್ತಿ ಆಸ್ತಿಯ ಮೌಲ್ಯ ₹54 ಕೋಟಿ.

ಇಂದ್ರಾಣಿ ಮಾಫಿಸಾಕ್ಷಿ:

ಪ್ರಕರಣದಲ್ಲಿ ಮಾಫಿಸಾಕ್ಷಿ (ಅಪ್ರೂವರ್) ಆಗಲು ಇಂದ್ರಾಣಿ ಮುಖರ್ಜಿಗೆ ದೆಹಲಿ ಕೋರ್ಟ್ ಕಳೆದ ತಿಂಗಳು ಅನುಮತಿ ನೀಡಿದೆ. ಮಾಫಿಸಾಕ್ಷಿ ಆಗಿ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ನೀಡಿದರೆ ತಮಗೆ ಕ್ಷಮಾದಾನ ನೀಡುವಂತೆ ಕೋರ್ಟ್‌ಗೆ ಇಂದ್ರಾಣಿ ಮನವಿ ಮಾಡಿದ್ದಾರೆ.

ಚಿದಂಬರಂ–ಐಎನ್‌ಎಕ್ಸ್ ಪ್ರಕರಣದ ನಂಟು

2007ರಲ್ಲಿ ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಗೆ ₹305 ಕೋಟಿ ವಿದೇಶಿ ಹೂಡಿಕೆಗೆ ಎಫ್‌ಐಪಿಬಿ ಅನುಮತಿ ಸಿಕ್ಕಿತ್ತು. ಅನುಮತಿ ನೀಡಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಸಿಬಿಐ ಮೇ 15, 2017ರಲ್ಲಿ ಎಫ್‌ಐಆರ್ ದಾಖಲಿಸಿತ್ತು. ಈ ಎಫ್‌ಐಆರ್ ಆಧರಿಸಿ, ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿತು. ಈ ಕುರಿತ ಎರಡು ಪ್ರಕರಣಗಳಲ್ಲಿ ಕಾರ್ತಿ ಹೆಸರನ್ನೂ ಸೇರಿಸಿತ್ತು.

ಆದಾಯ ತೆರಿಗೆ ಇಲಾಖೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ತನಿಖೆ ಆರಂಭಿಸಿದಾಗ, ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ ಸೂಚಿಸಿತು. ಆ ವೇಳೆಗಾಗಲೇ ಐಎನ್‌ಎಸ್ ಮೀಡಿಯಾ ಸಂಸ್ಥೆಯು ಕಾರ್ತಿ ಜೊತೆ ಸಂಪರ್ಕದಲ್ಲಿತ್ತು. ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯದ ಅಡಿ ಕೆಲಸ ಮಾಡುವ ಎಫ್‌ಐಪಿಬಿ ಅಧಿಕಾರಿಗಳ ಜತೆ ಪ್ರಕರಣವನ್ನು ‘ಸೌಹಾರ್ದಯುತವಾಗಿ’ ಬಗೆಹರಿಸುವ ಹೊಣೆಯನ್ನು ಸಂಸ್ಥೆಯು ಕಾರ್ತಿಗೆ ವಹಿಸಿತ್ತು. ತಂದೆ ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಸಂದರ್ಭವನ್ನು ಕಾರ್ತಿ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದರು ಎಂಬುದು ಸಿಬಿಐ ಆರೋಪ.

ಹೂಡಿಕೆ ಉತ್ತೇಜನ ಮಂಡಳಿಯು ತನಿಖೆ ನಡೆಸುವ ಬದಲಾಗಿ, ಮೀಡಿಯಾ ಸಂಸ್ಥೆ ಪರವಾಗಿ ಕೆಲಸ ಮಾಡಿತು ಎನ್ನುವುದು ಸಿಬಿಐ ಆರೋಪ. ವಿದೇಶಿ ಬಂಡವಾಳ ಸ್ವೀಕಾರ ಅನುಮತಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮಾಧ್ಯಮ ಸಂಸ್ಥೆಗೆ ಮಂಡಳಿ ಸೂಚಿಸಿತು. ಆದರೆ ಸಂಸ್ಥೆಯು ಅದಾಗಲೇ ವಿದೇಶಿ ಬಂಡವಾಳ ಸ್ವೀಕರಿಸಿ ಆಗಿತ್ತು ಎಂಬುದು ಇಲ್ಲಿ ಗಮನಾರ್ಹ.

2017

ಮೇ 15:ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ) ನೀಡಿದ ಒಪ್ಪಿಗೆ ಸಂಬಂಧ ಅವ್ಯವಹಾರ ಆರೋಪದಲ್ಲಿಸಿಬಿಐನಿಂದ ಎಫ್‌ಐಆರ್ ದಾಖಲು

ಜೂನ್ 16: ಗೃಹಸಚಿವಾಲಯದಡಿ ಬರುವ ವಿದೇಶಿ ಪ್ರಾದೇಶಿಕ ನೋಂದಣಾಧಿಕಾರಿ (ಎಫ್‌ಆರ್‌ಆರ್‌ಒ) ಮತ್ತು ವಲಸೆ ಬ್ಯೂರೊದಿಂದ ಕಾರ್ತಿ ವಿರುದ್ಧ ಲುಕ್‌ಔಟ್ ನೋಟಿಸ್‌ (ಎಲ್‌ಒಸಿ)

ಆಗಸ್ಟ್ 10:ಲುಕ್‌ಔಟ್ ನೋಟಿಸ್‌ಗೆ ಮದ್ರಾಸ್ ಹೈಕೋರ್ಟ್ ತಡೆ

ಆಗಸ್ಟ್ 14: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ನೀಡಿದ ಲುಕ್‌ಔಟ್ ನೋಟಿಸ್‌ ಮುಂದುವರಿಕೆಗೆ ನಿರ್ದೇಶನ

ಸೆ.11: ಕಾರ್ತಿ ಅವರ ಸಾಗರೋತ್ತರ ಆಸ್ತಿಗಳು ಹಾಗೂ ವಿದೇಶದಲ್ಲಿ ನಡೆಸಿರಬಹುದಾದ ಸಂಭವನೀಯ ವ್ಯವಹಾರಗಳ ಕುರಿತ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಒದಗಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿದ ಸಿಬಿಐ

ಸೆ.22: ವಿದೇಶದ ಕೆಲವು ಬ್ಯಾಂಕ್ ಖಾತೆಗಳನ್ನು ಕಾರ್ತಿ ಸ್ಥಗಿತಗೊಳಿಸುತ್ತಿರುವ ಕಾರಣ, ಅವರು ವಿದೇಶಕ್ಕೆ ಪ್ರಯಾಣಿಸದಂತೆ ನಿರ್ಬಂಧಿಸಲು ಸುಪ್ರೀಂಗೆ ಸಿಬಿಐ ಮನವಿ

ಅ.9: ತಮ್ಮ ವಿರುದ್ಧ ಬಿಜೆಪಿ ನೇತೃತ್ವದ ಸರ್ಕಾರ ರಾಜಕೀಯ ಹಗೆ ಸಾಧಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪಿ.ಚಿದಂಬರಂ ಹೇಳಿಕೆ

ನ.20:ಕೇಂಬ್ರಿಜ್‌ ವಿವಿಯಲ್ಲಿ ತಮ್ಮ ಪುತ್ರಿಯ ಪ್ರವೇಶಾತಿ ಸಂಬಂಧ ಇಂಗ್ಲೆಂಡ್‌ಗೆ ತೆರಳಲು ಸುಪ್ರೀಂನಿಂದ ಅನುಮತಿ ಪಡೆದ ಕಾರ್ತಿ. ಬ್ಯಾಂಕ್‌ಗಳಿಗೆ ಭೇಟಿ ನೀಡುವುದಿಲ್ಲ ಎಂದು ವಾಗ್ದಾನ.

ಡಿ.8: ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣದಲ್ಲಿ ಸಿಬಿಐ ಸಮನ್ಸ್ ಪ್ರಶ್ನಿಸಿ ಸುಪ್ರೀಕೋರ್ಟ್‌ ಮೊರೆ ಹೋದ ಕಾರ್ತಿ

2018

ಫೆ.16: ಅಕ್ರಮವಾಗಿ ಗಳಿಸಿದ ಸಂಪತ್ತು ನಿರ್ವಹಣೆ ಮಾಡುವ ಬಗ್ಗೆ ಸಲಹೆ ನೀಡುತ್ತಿದ್ದ ಆರೋಪದಲ್ಲಿ ಕಾರ್ತಿ ಅವರ ಚಾರ್ಟೆಟ್ ಅಕೌಂಟೆಂಟ್ ಎಸ್.ಭಾಸ್ಕರರಾಮನ್ ಬಂಧನ‌

ಫೆ. 28: ಚೆನ್ನೈ ವಿಮಾನ ನಿಲ್ದಾನದಲ್ಲಿ ಕಾರ್ತಿಯನ್ನು ಬಂಧಿಸಿದ ಸಿಬಿಐ

ಮಾ.23: 23 ದಿನಗಳ ಬಂಧನದ ಬಳಿಕ ಕಾರ್ತಿಗೆ ಜಾಮೀನು

ಜು. 23: ಇ.ಡಿ.ದಾಖಲಿಸಿದ್ದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಚಿದಂಬಂರ ಅರ್ಜಿ

ಜು.25: ಪಿ.ಚಿದಂಬರಂ ಅವರಿಗೆ ಬಂಧನದಿಂದ ರಕ್ಷಣೆ ನೀಡಿ ಹೈಕೋರ್ಟ್ಮಧ್ಯಂತರ ಆದೇಶ

ಅ.11: ಭಾರತ, ಬ್ರಿಟನ್, ಸ್ಪೇನ್‌ನಲ್ಲಿ ಕಾರ್ತಿಗೆ ಸೇರಿದ ₹54 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ

2019

ಜು.11: ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಪ್ರಕರಣದಲ್ಲಿ ಮಾಫಿಸಾಕ್ತಿ ಆಗಲು ಒಪ್ಪಿಗೆ

ಆ.11: ಮುಟ್ಟುಗೋಲು ಹಾಕಿಕೊಂಡಿರುವ ದೆಹಲಿಯ ಜೋರ್ ಬಾಗ್ ಹೌಸ್ ತೆರವುಗೊಳಿಸಲು ಕಾರ್ತಿಗೆ ಇ.ಡಿ ಸೂಚನೆ

ಆ. 20: ಪಿ.ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಇವನ್ನು ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT