ಭಾನುವಾರ, ಮೇ 9, 2021
18 °C
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹೆಚ್ಚುತ್ತಿರುವ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಹೇಳಿಕೆ

ಸಂಖ್ಯಾತ್ಮಕ ಬಹುಮತವೆಂದರೆ ಬಹುಸಂಖ್ಯಾತರ ಸಮ್ಮತಿ ಎಂದರ್ಥವಲ್ಲ: ಪ್ರಣವ್ ಮುಖರ್ಜಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣೆಗಳಲ್ಲಿ ಸಂಖ್ಯಾತ್ಮಕ ಬಹುಮತ ಸಿಗುವುದು ಸ್ಥಿರ ಸರ್ಕಾರ ರಚಿಸಲು ರಾಜಕೀಯ ಪಕ್ಷಕ್ಕೆ ದೊರೆಯುವ ಅವಕಾಶವೇ ವಿನಃ ‘ಬಹುಸಂಖ್ಯಾತ ಆಡಳಿತ’ ನೀಡುವುದಕ್ಕಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಖ್ಯಾತ್ಮಕ ಬಹುಮತವು ನಿಮಗೆ ಸ್ಥಿರ ಸರ್ಕಾರ ರಚಿಸಲು ಅವಕಾಶ ನೀಡುತ್ತದೆ. ಆದರೆ ಜನಪ್ರಿಯತೆಯ ಕೊರತೆಯು ನಿಮ್ಮನ್ನು ಬಹುಸಂಖ್ಯಾತರ ಸರ್ಕಾರವಾಗುವುದನ್ನು ತಡೆಯುತ್ತದೆ’ ಎಂದು ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಪ್ರಣವ್ ಮುಖರ್ಜಿ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜಾಮಿಯಾ ವಿದ್ಯಾರ್ಥಿಗಳ ಮೇಲೆ ‘ಪೊಲೀಸ್‌ ದೌರ್ಜನ್ಯ: ದೇಶದೆಲ್ಲೆಡೆ ಆಕ್ರೋಶ

‘1952ರ ಬಳಿಕ ಅನೇಕ ಬಾರಿ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರೆತಿದೆ. ಆದರೆ ಒಂದೇ ಒಂದು ಪಕ್ಷವೂ ಶೇ 50ರಷ್ಟು ಮತಹಂಚಿಕೆಯೊಂದಿಗೆ ಅಧಿಕಾರ ಪಡೆದಿಲ್ಲ’ ಎಂದು ಪ್ರಣವ್ ಉಲ್ಲೇಖಿಸಿದ್ದಾರೆ.

ಭಾರತ ಹಾಗೂ ಭಾರತೀಯರು ವಿಭಜನೆ ಮತ್ತು ಧಾರ್ಮಿಕ ಅಸಹಿಷ್ಣುತೆಯನ್ನು ಸಹಿಸಲಾರರು. ನಮ್ಮದು 7 ಪ್ರಮುಖ ಧರ್ಮಗಳ ಆಚರಣೆಯುಳ್ಳ, 122 ಭಾಷೆಗಳನ್ನು ಮಾತನಾಡುವ 12.69 ಲಕ್ಷ ಚದರ ಮೈಲಿ ವಿಸ್ತೀರ್ಣ ಹೊಂದಿರುವ ದೇಶ. ಇದನ್ನು ಸಂವಿಧಾನವು ಪ್ರತಿನಿಧಿಸುತ್ತದೆ. ಈ ಸತ್ಯವನ್ನು ಅಟಲ್‌ಜೀ ಅವರು ಒಪ್ಪಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ದೇಶ ಮತ್ತು ದೇಶದ ಜನತೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಹಾಗೂ ದೂರದೃಷ್ಟಿತ್ವ ಹೊಂದಿದ್ದರು. ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಅನೇಕರು ಒಪ್ಪದಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯ ಆಡಳಿತ ನೀಡಿದ್ದರು ಎಂದು ಪ್ರಣವ್ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಿಂದಲೋ ಬಂದವರು: ಇವರು ಕರ್ನಾಟಕದಲ್ಲಿರುವ ಬಾಂಗ್ಲಾ ನಿರಾಶ್ರಿತರು

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಪೊಲೀಸ್ ದೌರ್ಜನ್ಯದ ವಿರುದ್ಧದ ಪ್ರತಿಭಟನೆ ದೇಶದ ವಿವಿಧೆಡೆಗೆ ಸೋಮವಾರ ಹಬ್ಬಿತ್ತು. ಬೆಂಗಳೂರು, ಹೈದರಾಬಾದ್‌, ಲಖನೌ, ಚೆನ್ನೈ, ಕೋಲ್ಕತ್ತ ಮತ್ತು ಮುಂಬೈ ಸೇರಿ ವಿವಿಧ ನಗರಗಳ ವಿದ್ಯಾಸಂಸ್ಥೆಗಳಲ್ಲಿಯೂ ಪ್ರತಿಭಟನೆ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು