ಜಾರ್ಖಂಡ್‌| ಏಳು ತಾಸು ಥಳಿಸಿ. ’ಜೈ ಶ್ರೀರಾಮ್‌’ಹೇಳುವಂತೆ ಒತ್ತಾಯ, ವ್ಯಕ್ತಿ ಸಾವು

ಗುರುವಾರ , ಜೂಲೈ 18, 2019
29 °C

ಜಾರ್ಖಂಡ್‌| ಏಳು ತಾಸು ಥಳಿಸಿ. ’ಜೈ ಶ್ರೀರಾಮ್‌’ಹೇಳುವಂತೆ ಒತ್ತಾಯ, ವ್ಯಕ್ತಿ ಸಾವು

Published:
Updated:

ಸರಾಯಕೆಲ –ಖಾರ‍್ಸಾವಾನ್‌ (ಜಾರ್ಖಂಡ್‌): ‘ಗುಂಪು ಹಲ್ಲೆಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ತಬ್ರೇಜ್‌ ಅನ್ಸಾರಿ (24) ಎಂಬುವರು ಘಟನೆ ನಡೆದು ನಾಲ್ಕು ದಿನಗಳ ಬಳಿಕ ಸಾವನ್ನಪ್ಪಿದರು’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಜೂನ್‌ 18ರಂದು ತಬ್ರೇಜ್‌ ಮೇಲೆ ಹಲ್ಲೆ ನಡೆದಿತ್ತು. ಅಂದು ಜಮ್‌ಶೆಡ್‌ಪುರದಿಂದ ಗೆಳೆಯರ ಜೊತೆಗೆ ಬರುತ್ತಿದ್ದಾಗ ಧಾತ್ಕಿಡಾ ಗ್ರಾಮದ ಬಳಿ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ಬೈಕ್‌ ಕಳವು ಮಾಡಿದ್ದಾರೆ ಎಂಬ ಗುಮಾನಿಯಿಂದ ಇವರ ಮೇಲೆ ದಾಳಿ ನಡೆಸಲಾಗಿತ್ತು ಎನ್ನಲಾಗಿದೆ.

‘ಜೈ ಶ್ರೀರಾಂ’, ‘ಜೈ ಹನುಮಾನ್‌’ ಘೋಷಣೆ ಕೂಗುವಂತೆ ಹಲ್ಲೆ ನಡೆಸಿದ ಗುಂಪು ತಬ್ರೇಜ್‌ ಅವರನ್ನು ಒತ್ತಾಯಿಸಿತ್ತು. ಆ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಬಗ್ಗೆ ಸೋಮವಾರ ಮಾಹಿತಿ ನೀಡಿದ ಸರಾಯಕೆಲ–ಖಾರ‍್ಸಾವಾನ್‌ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌, ‘ಜೂನ್‌ 17ರಂದು ಅನ್ಸಾರಿ ಮತ್ತು ಇನ್ನಿಬ್ಬರು ಗ್ರಾಮದ ಮನೆಯೊಂದಕ್ಕೆ ಕಳವು ಮಾಡಲು ತೆರಳಿದ್ದರು. ಆಗ ಎಚ್ಚೆತ್ತ ಗ್ರಾಮಸ್ಥರ ಕೈಗೆ ಅನ್ಸಾರಿ ಸಿಕ್ಕಿಬಿದ್ದಿದ್ದ. ಬೆಳಿಗ್ಗೆ ಗ್ರಾಮಕ್ಕೆ ತೆರಳಿದ್ದ ಪೊಲೀಸರು ದೂರು ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅನ್ಸಾರಿಯನ್ನು ಜೈಲಿಗೆ ಕಳುಹಿಸಿದ್ದರು’ ಎಂದರು.

‘ಅದೇ ದಿನ ಅನ್ಸಾರಿಯ ಆರೋಗ್ಯಸ್ಥಿತಿ ಹದಗೆಟ್ಟಿತ್ತು. ಆತನನ್ನು ಸಾದರ್‌ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಗಂಭೀರ ಸ್ವರೂಪದ ಏಟುಗಳು ಬಿದ್ದಿರುವುದು ಕಂಡುಬಂತು. ಬಳಿಕ ಟಾಟಾ ಆಸ್ಪತ್ರೆಗೆ ಸೇರಿಸಲಾಯಿತು. ವೈರಲ್‌ ಆಗಿರುವ ವಿಡಿಯೊ ಅನ್ನು ಅನ್ಸಾರಿ ಕುಟುಂಬದವರು ನೀಡಿದ್ದಾರೆ. ಆ ಬಗ್ಗೆಯೂ ತನಿಖೆ ನಡೆದಿದೆ ಎಂದರು.

‘ಘಟನೆಯ ಬಗ್ಗೆ ತನಿಖೆಗೆ ವಿಶೇಷ ದಳ ರಚಿಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಕೃತ್ಯ ನಡೆದ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ’ ಎಂದು ಎಸ್‌ಪಿ ಕಾರ್ತಿಕ್‌ ತಿಳಿಸಿದರು.

ಅನ್ಸಾರಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು. ‘ಪತಿಯನ್ನು ಜೈಲಿಗೆ ಕಳುಹಿಸುವ ಬದಲು ಪೊಲೀಸರು ಅವರಿಗೆ ಚಿಕಿತ್ಸೆ ಕೊಡಿಸಬೇಕಾಗಿತ್ತು’ ಎಂದು ಅವರ ಪತ್ನಿ ಪರ್ವೀನ್‌ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಈ ಮಧ್ಯೆ, ಪ್ರಕರಣದ ಬಗ್ಗೆ ಸಂಪೂರ್ಣ ವಿವರಗಳನ್ನು ಪಡೆಯುವ ಸಲುವಾಗಿ ಕಾಂಗ್ರೆಸ್‌ ಪಕ್ಷವು ಏಳು ಜನರ ತಂಡವನ್ನು ರಚಿಸಿದೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 8

  Sad
 • 1

  Frustrated
 • 64

  Angry

Comments:

0 comments

Write the first review for this !