ವ್ಯಕ್ತಿಚಿತ್ರ: ದ್ರಾವಿಡ ರಾಜಕಾರಣದ ಕೊಂಡಿಯಾಗಿದ್ದ ಕರುಣಾನಿಧಿ

7

ವ್ಯಕ್ತಿಚಿತ್ರ: ದ್ರಾವಿಡ ರಾಜಕಾರಣದ ಕೊಂಡಿಯಾಗಿದ್ದ ಕರುಣಾನಿಧಿ

Published:
Updated:

ಬೆಂಗಳೂರು: ‘ವಿಚಲಿತಗೊಳ್ಳದ ಶಕ್ತಿ!’

– ಡಿಎಂಕೆ ಅಧ್ಯಕ್ಷರಾಗಿ ಐವತ್ತನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಎಂ.ಕರುಣಾನಿಧಿ ಅವರ ಬಗ್ಗೆ ಅವರ ಪುತ್ರ ಎಂ.ಕೆ. ಸ್ಟಾಲಿನ್‌ ಅವರು ಬಣ್ಣಿಸಿದ್ದು ಹೀಗೆ. ಸ್ಟಾಲಿನ್‌ ಕೆಲವು ದಿನಗಳ ಹಿಂದಷ್ಟೇ ಆಡಿದ ಈ ಮಾತನ್ನು ಸುಳ್ಳು ಮಾಡುವಂತೆ ಕರುಣಾನಿಧಿ ಸಾವಿಗೀಡಾಗಿದ್ದಾರೆ.

ಮುತ್ತುವೇಲು ಕರುಣಾನಿಧಿ ಅವರು ‘ದ್ರಾವಿಡ ಮುನ್ನೇತ್ರ ಕಳಗಂ’ನಲ್ಲಿ (ಡಿಎಂಕೆಯಲ್ಲಿ) ಮುನ್ನೆಲೆಗೆ ಬಂದುದು 1960ರಲ್ಲಿ. ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ನಿಧನರಾದಾಗ ಅವರ ಜಾಗದಲ್ಲಿ ಬಂದು ಕುಳಿತವರು ಕರುಣಾನಿಧಿ. ಅದಾದನಂತರ ಕಳೆದ ಐದು ದಶಕಗಳ ಹಾದಿಯಲ್ಲಿ ಅವರು ಹಿಂತಿರುಗಿ ನೋಡಲಿಲ್ಲ.

ಸಾರ್ವಜನಿಕ ಜೀವನದಲ್ಲಿ 80 ವರ್ಷ. ಚಿತ್ರರಂಗದಲ್ಲಿ 70 ವರ್ಷ. ವಿಧಾನಸಭೆಯಲ್ಲಿ 75 ವರ್ಷ. ಪಕ್ಷದ ಅಧ್ಯಕ್ಷರಾಗಿ 50 ವರ್ಷ, 5 ಬಾರಿ ಮುಖ್ಯಮಂತ್ರಿ ಸ್ಥಾನ. 12 ವಿಧಾನಸಭಾ ಚುನಾವಣೆಗಳಲ್ಲಿ ಸೋಲರಿಯದ ಸರದಾರ – ಕರುಣಾನಿಧಿ ಅವರ ಜೀವನದಲ್ಲಿ ಎದ್ದುಕಾಣಿಸುವ ಈ ಸಾಧನೆಗಳು ಯಾರನ್ನಾದರೂ ಬೆರಗುಗೊಳಿಸುವಂತಹವು.

ಆಕರ್ಷಕ ವ್ಯಕ್ತಿತ್ವ: ಬಿಳಿ ಬಟ್ಟೆ, ಕಣ್ಣುಗಳನ್ನು ಮರೆಮಾಚುವ ಕಪ್ಪು ಕನ್ನಡಕ ಹಾಗೂ ಕೊರಳನ್ನು ಸುತ್ತುವರೆದ ಹಳದಿ ಬಣ್ಣದ ವಲ್ಲಿ – ಇದು ಕರುಣಾನಿಧಿ ಎಂದಕೂಡಲೇ ನೆನಪಾಗುವ ಚಿತ್ರ.

ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಜನಿಸಿದ ಕರುಣಾನಿಧಿ (ಜ: 1924ರ ಜೂನ್ 3) ಅವರು ಬೆಳೆದುಬಂದ ಹಾದಿ ಕೂಡ ಅವರು ರಚಿಸಿದ ಚಿತ್ರಕಥೆಗಳಷ್ಟೇ ರಮ್ಯ ರೋಚಕವಾದುದು. ಹದಿನಾಲ್ಕರ ಹುಡುಗನಾಗಿದ್ದಲೇ ‘ತಮಿಳು ವಿದ್ಯಾರ್ಥಿಗಳ ಒಕ್ಕೂಟ’ದ ಮೂಲಕ ರಾಜಕಾರಣದ ಅಂಗಳಕ್ಕೆ ಧುಮುಕಿದರು. ಪೆರಿಯಾರ್‌ ಪ್ರತಿಪಾದಿಸಿದ ‘ತಮಿಳು ಸ್ವಾಭಿಮಾನ’ದ ಮಂತ್ರವನ್ನು ತಾವೂ ಪಠಿಸಿದರು. ತಮ್ಮನ್ನು ತಾವು ನಾಸ್ತಿಕನೆಂದು ಕರೆದುಕೊಂಡರು. ಬ್ರಾಹ್ಮಣಿಕೆಯನ್ನೂ, ಜಾತೀಯತೆಯನ್ನೂ ಉಗ್ರವಾಗಿ ವಿರೋಧಿಸಿದರು.

1926ರಲ್ಲಿ ಪೆರಿಯಾರ್‌ ಸಂಘಟಿಸಿದ ‘ಆತ್ಮಗೌರವ ಆಂದೋಲನ’ದ ಪ್ರಭಾವಕ್ಕೆ ಒಳಗಾಗಿದ್ದ ಅಣ್ಣಾದೊರೈ, 1930ರಲ್ಲಿ ತಮ್ಮ ಕಾಲೇಜಿನಲ್ಲಿ ‘ಆತ್ಮಾಭಿಮಾನಿ ಯುವ ಘಟಕ’ವನ್ನು ರಚಿಸಿದ್ದರು. ಆತ್ಮಗೌರವದ ಈ ಪರಂಪರೆಯನ್ನು ಕರುಣಾನಿಧಿ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿದರು. ರಾಜಾಜಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿನ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವಂತೆ ಆದೇಶಿಸಿದ್ದರು. ಇದನ್ನು ವಿರೋಧಿಸಿ ಕರುಣಾನಿಧಿ ಸಂಘಟಿಸಿದ ಪ್ರತಿಭಟನೆ ಅವರ ರಾಜಕಾರಣದ ಹಾದಿಯಲ್ಲಿನ ಪ್ರಮುಖ ಮೈಲಿಗಲ್ಲುಗಳಲ್ಲೊಂದು.

ದಕ್ಷಿಣಾಮೂರ್ತಿ ಎಂಬುದು ಕರುಣಾನಿಧಿ ಅವರ ಹುಟ್ಟುಹೆಸರು. ದ್ರಾವಿಡ ಚಳವಳಿಯಿಂದ ಪ್ರೇರಿತರಾಗಿದ್ದ ಅವರು, ತಮ್ಮ ಹೆಸರಿನಲ್ಲಿದ್ದ ಸಂಸ್ಕೃತದ ವಾಸನೆಯನ್ನು ನಿರಾಕರಿಸುವುದಕ್ಕಾಗಿ ಕರುಣಾನಿಧಿ ಎಂದು ಹೆಸರು ಬದಲಿಸಿಕೊಂಡರು.

ಮಾಂತ್ರಿಕ ಬರವಣಿಗೆ: ಮಾತನಾಡಿದಷ್ಟೇ ಸಲೀಸಾಗಿ ಭಾವನೆಗಳನ್ನು ಅಕ್ಷರರೂಪಕ್ಕಿಳಿಸುವ ವಿದ್ಯೆ ಅವರಿಗೆ ಸಿದ್ಧಿಸಿತ್ತು. ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸುವುದನ್ನು ವಿರೋಧಿಸಿ ಎಂಟು ಪುಟಗಳ ಕೈಬರಹದ ಪತ್ರಿಕೆ ಹೊರತರುತ್ತಿದ್ದರು. ಮಾತು–ಬರವಣಿಗೆ ಎರಡರಲ್ಲೂ ಬೆಂಕಿ ಉಗುಳುತ್ತಿದ್ದ ಈ ಯುವಕ, ಅರವತ್ತರ ದಶಕದಲ್ಲಿ ತಮಿಳುನಾಡು ರಾಜಕಾರಣದಲ್ಲಿ ತಮ್ಮದೇ ವರ್ಚಸ್ಸು ಗಳಿಸಿದ್ದ ಅಣ್ಣಾದೊರೈ ಅವರ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ದೊಡ್ಡವರ ಪರಿಚಯದ ಮೂಲಕವೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಅವರಿಗೆ ದೊರೆಯಿತು. ‘ದ್ರಾವಿಡರ್ ಕಳಗಂ ಪಕ್ಷ’ದ ನಿಯತಕಾಲಿಕೆ ‘ಕುಡಿಯರಸು’ ಸಂಪಾದಕತ್ವವೂ ಒಲಿದುಬಂತು.

ಹೈಸ್ಕೂಲ್‌ ಮೆಟ್ಟಿಲನ್ನು ದಾಟಲು ವಿಫಲರಾದ ಕರುಣಾನಿಧಿ, ಕೊಯಮತ್ತೂರನ್ನು ತಮ್ಮ ನೆಲೆಯನ್ನಾಗಿಸಿಕೊಂಡು ಬರವಣಿಗೆಯಲ್ಲಿ, ವೃತ್ತಿಪರ ರಂಗತಂಡಗಳಲ್ಲಿ ಗುರ್ತಿಸಿಕೊಂಡರು. ನಾಟಕ–ಸಿನಿಮಾಗಳಿಗಷ್ಟೇ ಕರುಣಾನಿಧಿಯವರ ಬರವಣಿಗೆ ಸೀಮಿತ‌ವಾಗಲಿಲ್ಲ. ಕಾವ್ಯ, ಜೀವನಚರಿತ್ರೆ, ಕಾದಂಬರಿ, ಚಲನಚಿತ್ರ ಗೀತೆಗಳು – ಹೀಗೆ ವಿವಿಧ ಪ್ರಕಾರಗಳ ಮೂಲಕ ಸಹೃದಯರಿಗೆ ಹತ್ತಿರವಾದರು. ಕಾಲೇಜು ಮೆಟ್ಟಿಲು ಹತ್ತದ ಈ ಬರಹಗಾರ ಸಿನಿಮಾ ಹಾಗೂ ಸಾಹಿತ್ಯ ಕೃತಿಗಳಿಗೆ ಹಲವು ಬಹುಮಾನಗಳನ್ನೂ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ ಪದವಿಗಳನ್ನೂ ಪಡೆದಿರುವುದು ಸಾಧಾರಣ ಸಾಧನೆಯಲ್ಲ. ಅವರ ಆತ್ಮಕಥೆ (Nenjukku Neethi) ಆರು ಸಂಪುಟಗಳಲ್ಲಿ ಪ್ರಕಟವಾಗಿದೆ.

ಸೋಲರಿಯದ ಸಾಧನೆ: ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ‘ದ್ರಾವಿಡರ್ ಕಳಗಂ’ ಪಕ್ಷ ಹೋಳಾದಾಗ, ಅಣ್ಣಾದೊರೈ ಗರಡಿಯಲ್ಲಿ ಗುರ್ತಿಸಿಕೊಂಡ ಕರುಣಾನಿಧಿ ‘ಡಿಎಂಕೆ’ ಪಕ್ಷದ ಮೊದಲ ಖಜಾಂಚಿಯಾಗಿ ನೇಮಕವಾದರು. 1957ರಲ್ಲಿ ‘ಡಿಎಂಕೆ’ ವಿಧಾನಸಭೆ ಚುನಾವಣೆಗಳಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಚುನಾಯಿತರಾದ 13 ಶಾಸಕರಲ್ಲಿ ಕರುಣಾನಿಧಿಯವರೂ ಒಬ್ಬರಾಗಿದ್ದರು. 1967ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದು ಅಣ್ಣಾದೊರೈ ಮುಖ್ಯಮಂತ್ರಿಯಾದಾಗ, ಲೋಕೋಪಯೋಗಿ ಸಚಿವರಾದರು. 1969ರಲ್ಲಿ ಅಣ್ಣಾದೊರೈ ನಿಧನರಾದಾಗ ಮುಖ್ಯಮಂತ್ರಿ ಪಟ್ಟದ ಜೊತೆಗೆ, ಪಕ್ಷದ ಅಧ್ಯಕ್ಷ ಸ್ಥಾನವೂ ಒಲಿದುಬಂತು.

ತಮಿಳುನಾಡು ರಾಜಕಾರಣದಲ್ಲಿ ಸಾಮ್ರಾಟನಂತೆ ಮೆರೆಯುತ್ತಿದ್ದ ಕರುಣಾನಿಧಿಯವರ ಅಧಿಪತ್ಯಕ್ಕೆ ಪೆಟ್ಟು ಕೊಟ್ಟವರಲ್ಲಿ ಎಂ.ಜಿ. ರಾಮಚಂದ್ರನ್‌ ಹಾಗೂ ಜೆ.ಜಯಲಲಿತಾ ಮುಖ್ಯರು. 1977ರಲ್ಲಿ ಡಿಎಂಕೆ ಒಡೆದು ‘ಎಐಎಡಿಎಂಕೆ’ (ಅಣ್ಣಾ ಡಿಎಂಕೆ) ಸ್ಥಾಪಿಸಿದ ಎಂ.ಜಿ.ಆರ್‌. ಅಧಿಕಾರಕ್ಕೂ ಬಂದರು. ನಂತರದ ಒಂದು ದಶಕದ ಕಾಲ ತಮಿಳುನಾಡಿನಲ್ಲಿ ಎಂಜಿಆರ್‌ ಪ್ರಭೆ. ಅದಾದ ನಂತರ ಜಯಲಲಿತಾ ಕೂಡ ಪ್ರತಿಸ್ಪರ್ಧಿಯಾಗಿ ಬೆಳೆದರು.

ಎಂಜಿಆರ್ ಹಾಗೂ ಕರುಣಾನಿಧಿ ನಡುವಿನ ಬಾಂಧವ್ಯ ಸುಲಭ ವ್ಯಾಖ್ಯಾನಕ್ಕೆ ನಿಲುಕುವಂತಹದ್ದಲ್ಲ. ಡಿಎಂಕೆ ಕರುಣಾನಿಧಿ ಅವರ ನೀತಿಗಳನ್ನು ಅನುಸರಿಸಿದರೆ ನನ್ನ ಪಕ್ಷ ‘ಅಣ್ಣಾ’ ಅವರ ಆದರ್ಶಗಳನ್ನು ಅನುಸರಿಸುತ್ತದೆ ಎಂದು ಎಂಜಿಆರ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ನಂಟು ಕಳೆದುಕೊಂಡಿದ್ದರೂ ಕರುಣಾನಿಧಿ ಬಗ್ಗೆ ಎಂಜಿಆರ್‌ ಅವರಿಗೆ ಗೌರವವಿತ್ತು. ಗೆಳೆಯನ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಎಐಎಡಿಎಂಕೆ ನಾಯಕರೊಬ್ಬರು ಒಮ್ಮೆ ಕರುಣಾನಿಧಿ ಹೆಸರು ಪ್ರಸ್ತಾಪಿಸಿ ಮಾತನಾಡಿದಾಗ, ‘ಅವರ ಹೆಸರು ಹಿಡಿದು ಮಾತನಾಡುವ ಯೋಗ್ಯತೆ ನಿನಗೇನಿದೆ? ಅವರು ನನ್ನ ತಲೈವರ್‌ (ನಾಯಕ)’ ಎಂದು ಜೋರುಮಾಡಿದ್ದ ಎಂಜಿಆರ್‌, ತಮ್ಮ ಪಕ್ಷದ ನಾಯಕನಿಗೆ ಕಪಾಳಮೋಕ್ಷ ಮಾಡಿದಿದ್ದರು. 1984ರಲ್ಲಿ ಎಂಜಿಆರ್‌ ಅನಾರೋಗ್ಯಕ್ಕೆ ಒಳಗಾದಾಗ ‘ಮುರಸೊಳಿ’ ಪತ್ರಿಕೆಯಲ್ಲಿ ಗೆಳೆಯನ ಕುರಿತು ಕರುಣಾನಿಧಿ ಆಪ್ತವಾಗಿ ಬರೆದಿದ್ದರು.

ಜಾಣ್ಮೆಯ ನಡೆ: ಪಕ್ಷದ ಏಳುಬೀಳುಗಳ ನಡುವೆಯೂ ಕರುಣಾನಿಧಿಯವರ ನಾಯಕತ್ವದ ವರ್ಚಸ್ಸು ಕಡಿಮೆಯಾಗಲಿಲ್ಲ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಗಳು ರೂಪುಗೊಂಡಾಗ, ತಮ್ಮ ಪಕ್ಷದ ನಾಯಕರು ಸಚಿವರಾಗುವಂತೆ ನೋಡಿಕೊಂಡ ಜಾಣ್ಮೆ ಅವರದಾಗಿತ್ತು.

ರಾಜಕಾರಣದಂತೆ ವೈಯಕ್ತಿಕ ಬದುಕಿನಲ್ಲೂ ಕರುಣಾನಿಧಿ ಏರಿಳಿತಗಳನ್ನು ಕಂಡಿದ್ದರು. ಮೂರು ಬಾರಿ ಮದುವೆಯಾದರು. ಮೊದಲ ಪತ್ನಿ ಪದ್ಮಾವತಿ ಹೆಚ್ಚು ಕಾಲ ಬದುಕಲಿಲ್ಲ. ದಯಾಳ್‌ ಅಮ್ಮಾಳ್‌ ಹಾಗೂ ರಜತಿ ಅಮ್ಮಾಳ್ ಉಳಿದಿಬ್ಬರು ಹೆಂಡಂದಿರು. ಮೂರು ಸಂಬಂಧಗಳಲ್ಲಿ ಆರು ಮಕ್ಕಳನ್ನು ಪಡೆದರು. ಮೊದಲ ಪುತ್ರನ ಮರಣದ ಪುತ್ರಶೋಕವನ್ನೂ ಅನುಭವಿಸಿದರು.      

2016ರ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಡಿಎಂಕೆ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಕರುಣಾನಿಧಿ ದೈಹಿಕವಾಗಿಯೂ ಮಾನಸಿಕವಾಗಿಯೂ ಮಂಕಾದಂತಿದ್ದರು. ಎರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ದೂರವುಳಿದಿದ್ದರು. ಈಗ ಶಾಶ್ವತವಾಗಿ ನಿರ್ಗಮಿಸಿದ್ದಾರೆ. ಆದರೆ, ಕರುಣಾನಿಧಿಯವರ ರಾಜಕೀಯ ಸಾಧನೆಗೆ ತಮಿಳುನಾಡಿನ ರಾಜಕಾರಣದಲ್ಲಿ ಮಾತ್ರವಲ್ಲದೆ, ಭಾರತದ ರಾಜಕೀಯ ಚರಿತ್ರೆಯಲ್ಲೂ ವಿಶೇಷ ಸ್ಥಾನವಿದೆ.

ಅಣ್ಣಾದೊರೈ, ಎಂಜಿಆರ್‌, ಜಯಲಲಿತಾ ಅವರ ನಿರ್ಗಮನದ ನಂತರ ತಮಿಳು ರಾಜಕಾರಣದ ಕೊನೆಯ ದಂತಕಥೆಯಂತೆ ಕರುಣಾನಿಧಿ  ಕಾಣಿಸುತ್ತಿದ್ದರು. ಅವರ ನಿರ್ಗಮನದೊಂದಿಗೆ ತಮಿಳು ರಾಜಕಾರಣದ ಪರಂಪರೆಯೊಂದು ಕೊನೆಗೊಂಡಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !