ಹಿಮದಲ್ಲಿ ಹುದುಗಿಹೋದ ಸೇಬು: ಬೆಳೆಗಾರರನ್ನು ಕಂಗಾಲಾಗಿಸಿದ ಹಿಮಪಾತ

7
₹500 ಕೋಟಿ ಮೌಲ್ಯದ ಬೆಳೆ ನಷ್ಟ

ಹಿಮದಲ್ಲಿ ಹುದುಗಿಹೋದ ಸೇಬು: ಬೆಳೆಗಾರರನ್ನು ಕಂಗಾಲಾಗಿಸಿದ ಹಿಮಪಾತ

Published:
Updated:

ಶ್ರೀನಗರ: ‘ಹಿಮದ ಬೃಹತ್ ರಾಶಿ. ರೈತನೊಬ್ಬ ಆ ಇಡೀ ಹಿಮರಾಶಿಯನ್ನು ಕೆದಕುತ್ತಾ ಅದರಡಿ ಹುದುಗಿ ಹೋಗಿರುವ ಸೇಬುಗಳನ್ನು ಬರಿಗೈಯಿಂದ ಕೆದಕಿ ತೆಗೆಯುತ್ತಿದ್ದಾನೆ’. ಇದು ಸಾಮಾಜಿಕ ಜಾಲತಾಣವೊಂದರಲ್ಲಿ ಈಚೆಗೆ ವೈರಲ್ ಆದ ದೃಶ್ಯ. ಈ ಬಾರಿ ಸಂಭವಿಸಿದ ಭಾರಿ ಹಿಮಪಾತದಿಂದ ಜಮ್ಮು ಮತ್ತು ಕಾಶ್ಮೀರದ ಬಹುತೇಕ ಎಲ್ಲ ಸೇಬು ಬೆಳೆಗಾರರ ಸ್ಥಿತಿಯೂ ಹೀಗೆಯೇ ಆಗಿದೆ.

ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರೈತರೊಬ್ಬರು ತಮ್ಮ ಸೇಬು ತೋಟಕ್ಕೆ ಭೇಟಿ ನೀಡಿ ನೋಡುತ್ತಾರೆ; ಅವರ ಹೃದಯ ಒಡೆದು ಹೋಗುವುದು ಬಾಕಿ. ಬೆಳೆಯೆಲ್ಲಾ ಸಂಪೂರ್ಣ ಹಿಮದಡಿ ಹುದುಗಿ ಹೋಗಿ ಹಾಳಾಗಿವೆ. ಕಳೆದ ಶನಿವಾರ ಆರಂಭವಾದ ಹಿಮಪಾತ ಸೇಬು ಬೆಳೆಗಾರರಲ್ಲಿ ನಡುಕಹುಟ್ಟಿಸಿದೆ. 2009ರ ನಂತರ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಹಿಮಪಾತವಾಗಿದೆ. ಕಣಿವೆ ರಾಜ್ಯದ ಆರ್ಥಿಕತೆಗೆ ಹೊಡೆತ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅರ್ಧದಷ್ಟು ಬೆಳೆ ಹಿಮದಲ್ಲಿ ಹೂತುಹೋಗಿದೆ. ಅದನ್ನು ನೋಡುತ್ತಾ ಐದು ನಿಮಿಷವೂ ಅಲ್ಲಿ ನಿಲ್ಲಲಾಗಲಿಲ್ಲ. ಕೇವಲ ಒಬ್ಬ ಬೆಳೆಗಾರನಿಗೆ ಮಾತ್ರ ಬೆಳೆ ನಷ್ಟದ ನೋವು ಅರ್ಥವಾದೀತು ಎಂಬ ರೈತ ಅಬ್ದುಲ್ ಹಮೀದ್ ಹಜಮ್ ನೋವಿನ ಮಾತುಗಳನ್ನು ಸ್ಕ್ರಾಲ್‌ ಡಾಟ್‌ ಇನ್ ಸುದ್ದಿತಾಣ ವರದಿ ಮಾಡಿದೆ.

ಭಾರಿ ಹಿಮಪಾತದಿಂದಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್, ಪುಲ್ವಾಮಾ ಮತ್ತು ಅನಂತ್‌ನಾಗ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಸೇಬು ಬೆಳೆ ನಷ್ಟವಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸೇಬು ಬೆಳೆ, ಮರಗಳು, ತೋಟಗಾರಿಕಾ ಬೆಳೆ ನಾಶದಿಂದ ಸುಮಾರು ₹500 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಕಾಶ್ಮೀರ್ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರಿ ಪ್ರಕಟಣೆಯಲ್ಲಿ ತಿಳಿಸಿದೆ.

9,000 ಹೆಕ್ಟೇರ್‌ನಲ್ಲಿ ಕೃಷಿ ಮತ್ತು 53,000 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ ನಾಶವಾಗಿದೆ. ಕೇಂದ್ರ ಸರ್ಕಾರದ ನೆರವು ಬೇಕಾಗುವಷ್ಟು ಹಾನಿ ಇದಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಕೇಂದ್ರ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರಿಗೆ ಮನವರಿಕೆ ಮಾಡಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಹಾನಿ ಪ್ರದೇಶದ ಪರಿಶೀಲನೆಗೆ ಕೇಂದ್ರದಿಂದ ತಂಡ ಕಳುಹಿಸುವಂತೆ ಸುಬ್ರಹ್ಮಣ್ಯಂ ಮನವಿ ಮಾಡಿದ್ದಾರೆ ಎಂದು ಸರ್ಕಾರದ ಅಧಿಕೃತ ವಕ್ತಾರರು ತಿಳಿಸಿರುವುದನ್ನೂ ಪಿಟಿಐ ವರದಿ ಉಲ್ಲೇಖಿಸಿದೆ.

ಈ ಮಧ್ಯೆ, ಬೆಳೆ ನಾಶದ ಮೌಲ್ಯಮಾಪನ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನೆರಡು ಮೂರು ದಿನಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ತೋಟಗಾರಿಕಾ ಬೆಳೆಗಳ ಯೋಜನೆ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಸಯ್ಯದ್ ಶಹನವಾಜ್ ತಿಳಿಸಿದ್ದಾರೆ.

ಹಿಮಪಾತದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗರೂಕತರಾ ಕ್ರಮಗಳ ಬಗ್ಗೆ ಶೇರ್–ಎ–ಕಾಶ್ಮೀರ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರೈತರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆರಂಭವಾಗಲಿದೆ ಆ್ಯಪಲ್ ಸೀಸನ್

ಸೇಬು ಬೆಳೆಯುವ ಸಣ್ಣ ರೈತ ಹಜಮ್ ಅವರು ಪ್ರತಿ ವರ್ಷ ₹2ರಿಂದ ₹2.5 ಲಕ್ಷದಷ್ಟು ಆದಾಯ ಗಳಿಸುತ್ತಾರೆ. ಈ ವರ್ಷ ಹಿಮಪಾತದಿಂದಾಗಿ ಅವರ ಆದಾಯ ₹1.5 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಸ್ಕ್ರಾಲ್‌ ಡಾಟ್‌ ಇನ್ ವರದಿ ಉಲ್ಲೇಖಿಸಿದೆ. ಇದು ಇಡೀ ವರ್ಷದ ನಷ್ಟ. ಹಿಮಪಾತದಿಂದ ಹಾನಿಯಾದ ಒಂದು ಸೇಬಿನ ಮರ ಚೇತರಿಸಿಕೊಳ್ಳಲು 8ರಿಂದ 10 ವರ್ಷಗಳಷ್ಟು ಸಮಯ ಬೇಕಾಗುತ್ತದೆ. ಈ ನಷ್ಟವನ್ನು ಹೇಗೆ ಭರಿಸಲಿ ಎಂದು ಹಜಮ್ ಪ್ರಶ್ನಿಸುತ್ತಾರೆ. ಇವರು ಆರೋಗ್ಯ ಇಲಾಖೆಯ ದಿನಗೂಲಿ ನೌಕರ.

ನವೆಂಬರ್ ಮಧ್ಯಭಾಗದಲ್ಲಿ ಕಾಶ್ಮೀರದಲ್ಲಿ ಸೇಬು ಸೀಸನ್ ಕೊನೆಗೊಳ್ಳುತ್ತದೆ. ಈ ಬಾರಿ ಶೇ 15ರಿಂದ 20ರಷ್ಟು ಬೆಳೆ ಹಿಮಪಾತದಿಂದಾಗಿ ನಾಶವಾಗಿದೆ ಎಂದು ಸೋಪೊರ್ ವಲಯದ ಹಣ್ಣುಗಳ ಮಂಡಿಯ ಅಧ್ಯಕ್ಷ ಅಹ್ಮದ್ ಮಲಿಕ್ ಅಂದಾಜಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಪ್ರದೇಶದಲ್ಲಿ ₹20,000 ಮೌಲ್ಯದ ಬೆಳೆ ನಷ್ಟ ಅಂದಾಜಿಸಲಾಗಿದೆ. ಮತ್ತೊಂದೆಡೆ, ಸುಮಾರು 2,500ರಿಂದ 3,000 ಸೇಬು ಒಳಗೊಂಡ ಟ್ರಕ್‌ಗಳು ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ಭಾರಿ ನಷ್ಟವಾಗಿದೆ ಎನ್ನಲಾಗಿದೆ.

ದೀಪಾವಳಿ ಸಂದರ್ಭವಾದ್ದರಿಂದ ಬೇಡಿಕೆ ಹೆಚ್ಚಿತ್ತು. ಬೇಡಿಕೆಗೆ ತಕ್ಕಷ್ಟು ಸೇಬುಗಳನ್ನು ಪೂರೈಸಲು ರೈತರೂ ಮುಂದಾಗಿದ್ದರು. ಆದರೆ, ಸೇಬು ಟ್ರಕ್‌ಗಳನ್ನು ಅಕ್ಟೋಬರ್ 31ರಂದು ಹೆದ್ದಾರಿಯಲ್ಲಿ ನಿಲ್ಲಿಸಲಾಯಿತು. ಹಿಮಪಾತದಿಂದ ಪ್ರಯಾಣ ಕಷ್ಟವಾದ್ದರಿಂದ ಕೇವಲ ಸೇನಾ ವಾಹನಗಳು ಮತ್ತು ಬೆಂಗಾವಲು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಯಿತು. ಹಣ್ಣುಗಳ ವಾಹನಕ್ಕೆ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಮಲಿಕ್ ಹೇಳಿರುವುದನ್ನೂ ವರದಿ ಉಲ್ಲೇಖಿಸಿದೆ.

ಈ ನಡುವೆ ಹೆದ್ದಾರಿಯಲ್ಲಿ ಭೂಕುಸಿತವೂ ಸಂಭವಿಸಿದ್ದು, ಸಂಚಾರ ಸ್ಥಗಿತಗೊಂಡಿದೆ. ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲೂ ಇನ್ನು ಕೆಲವು ದಿನ ಬೇಕು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !